ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಗುಂಡಿನ ಮೊರೆತ: ಅಭಿಮನ್ಯು ಧ್ಯಾನ!

ಕುಶಾಲತೋಪು ತಾಲೀಮು: ಅಂಜದ ದಸರಾ ಆನೆಗಳಲ್ಲಿ ಆತ್ಮವಿಶ್ವಾಸದ ಪುಳಕ
Last Updated 16 ಸೆಪ್ಟೆಂಬರ್ 2022, 11:34 IST
ಅಕ್ಷರ ಗಾತ್ರ

ಮೈಸೂರು: ಏಳು ಫಿರಂಗಿಗಳಲ್ಲಿಸಿಡಿಮದ್ದು ಸಿಡಿಯುವ ಮೊರೆತಕ್ಕೆ ‘ಅನುಭವಿ’ ಆನೆಗಳು ಅಂಜಲಿಲ್ಲ. ಕಿರಿಯ ಆನೆ ‘‍ಪಾರ್ಥಸಾರಥಿ’ ಕೊಸರಾಡಿದರೆ, ‘ಕ್ಯಾಪ್ಟನ್‌’ ಅಭಿಮನ್ಯು ಧ್ಯಾನ ಸ್ಥಿತಿಯಲ್ಲಿದ್ದ!

ದಸರಾ ವಸ್ತುಪ್ರದರ್ಶನದ ವಾಹನ ನಿಲ್ದಾಣದ ಅಂಗಳದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಕುಶಾಲತೋಪಿನ ತಾಲೀಮು ಯಶಸ್ವಿಯಾಗಿ ನೆರವೇರಿತು. ಮೊದಲ ತಾಲೀಮಿನಲ್ಲಿ ಹೆದರಿದ್ದ ಆನೆಗಳು ಈ ಬಾರಿ ಎದೆನಡುಗಿಸುವ ಶಬ್ಧಕ್ಕೆ ಅಂಜದೆ ಆನೆಪ್ರಿಯರಲ್ಲಿಆತ್ಮವಿಶ್ವಾಸದ ಪುಳಕವನ್ನು ಉಂಟು ಮಾಡಿದವು.‌

ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋ‍ಪು ಸಿಡಿಸುವಾಗ ಆನೆ, ಕುದುರೆಗಳನ್ನು ಬೆಚ್ಚದಂತೆ ಮಾಡಲು 2ನೇ ಪೂರ್ವಭ್ಯಾಸ ನೀಡಲಾದ ತಾಲೀಮಿನಲ್ಲಿಗಜಪಡೆಯ 12 ಆನೆಗಳು ಹಾಗೂ ಅಶ್ವಾರೋಹಿ ದಳದ 41 ಕುದುರೆಗಳು ಭಾಗವಹಿಸಿದ್ದವು.

ಬೆದರದ ಭೀಮ: ಮೊದಲ ತಾಲೀಮಿನಲ್ಲಿ ಬೆದರಿದ್ದ 22 ವರ್ಷದ ‘ಭೀಮ’ ಮೊದಲ ಸುತ್ತಿನ ಸಿಡಿಮದ್ದಿನ ಸ್ಫೋಟಕ್ಕೆ ಕೊಂಚ ಕೊಸರಾಡಿದ. ನಂತರ ಅನುಭವಿ ‘ಗೋಪಾಲಸ್ವಾಮಿ’ಯನ್ನು ಒತ್ತರಿಸಿಕೊಂಡು ನಿಂತು ಕದಲದೆ ಧೈರ್ಯ ಪ್ರದರ್ಶಿಸಿ ಎಲ್ಲರ ಗಮನ ಸೆಳೆದನು. ಸ್ವಲ್ಪ ಬೆದರಿದ್ದ ‘ವಿಜಯಾ’ಳನ್ನು ‘ಅಭಿಮನ್ಯು’, ‘ಅರ್ಜುನ’ ಅಲುಗಾಡದೇ ಒತ್ತಾಗಿ ನಿಂತು ಧೈರ್ಯ ನೀಡಿದರು.

ಅಭಿಮನ್ಯು ಧ್ಯಾನ: ಅಂಬಾರಿ ಆನೆ ‘ಅಭಿಮನ್ಯು’ ಸಿಡಿಮದ್ದು ಠೇಂಕರಿಸುತ್ತಿದ್ದರೆ ಕಣ್ಣುಮುಚ್ಚಿ ಧ್ಯಾನ ಸ್ಥಿತಿಯಲ್ಲಿದ್ದನು. ಅವನೊಂದಿಗೆ ನಿಂತಿದ್ದಮೊದಲ ಬಾರಿ ದಸರೆಗೆ ಆಗಮಿಸಿರುವ ‘ಮಹೇಂದ್ರ’ ಕೂಡ ಅಲುಗಾಡದೇ ನಿಂತದ್ದು, ನೋಡುಗರನ್ನು ಅಚ್ಚರಿಗೊಳಿಸಿತು. ‘ಮಾಸ್ಟರ್‌’ ಅರ್ಜುನ ಎಂದಿನಂತೆ ರಾಜಠೀವಿಯಲ್ಲಿ ನಿಂತಿದ್ದನು.

ಹುಲಿಗೆ ಹೆದರದವ ಸಿಡಿಮದ್ದಿಗೆ ನಡುಗಿದ:ಹುಲಿ, ಒಂಟಿ ಸಲಗ ಸೇರಿದಂತೆ ಯಾವ ಪ್ರಾಣಿಗೂ ಹೆದರದ ‘ಧನಂಜಯ’ ಫಿರಂಗಿ ಸದ್ದಿಗೆ ಹೆದರಿದನು. ಅವನನ್ನು ಈ ಬಾರಿ ಹಿಂದಿನ ಸಾಲಿನಲ್ಲಿ ಒಂಟಿಯಾಗಿ ನಿಲ್ಲಿಸಲಾಗಿತ್ತು. ಸಿಡಿಮದ್ದಿಗೆ ಘೀಳಿಟ್ಟು ಹಿಂದಡಿ ಇಟ್ಟನು. ಅವನ ಹಿಂದೆ ನಿಂತಿದ್ದ ಎರಡನೇ ತಂಡದ ಆನೆಗಳಾದ ಶ್ರೀರಾಮ, ಸುಗ್ರೀವ, ಗೋಪಿ ಅಲ್ಪ ಬೆದರಿದರೆ, ಪಾರ್ಥಸಾರಥಿ ಎರಡು– ಮೂರು ಬಾರಿ ನಿಂತಲ್ಲೇ ಸುತ್ತುಹಾಕಿದನು.

ಗೋಡೆಗಳಿಗೆ ಹಾನಿ ಸಂಭವ: ಸ್ಥಳಾಂತರ:ಅರಮನೆ ವರಾಹ ದ್ವಾರದ ಕೋಟೆ ಮಾರಮ್ಮ ದೇವಾಲಯ ಆವರಣದ ವಾಹನ ನಿಲುಗಡೆ ಪ್ರದೇಶದಲ್ಲಿ ಕುಶಾಲ ತೋಪು ತಾಲೀಮು ನೀಡಲಾಗುತ್ತಿತ್ತು. ಮೊದಲ ತಾಲೀಮನ್ನೂ ಇಲ್ಲಿಯೇ ನಡೆಸಲಾಗಿತ್ತು. ಅರಮನೆ ಗೋಡೆ ಹಾಗೂ ಕೋಟೆಗೆ ಹಾನಿ ತಪ್ಪಿಸಲು ಅರಮನೆ ಮಂಡಳಿ ತಾಲೀಮು ಸ್ಥಳಾಂತರಕ್ಕೆ ಪೊಲೀಸ್‌ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಹೀಗಾಗಿ ವಸ್ತುಪ್ರದರ್ಶನ ಆವರಣವನ್ನು ಪೊಲೀಸ್‌ ಇಲಾಖೆ ಆಯ್ಕೆ ಮಾಡಿದೆ.

ಇದೀಗ ಕುದುರೆ, ಆನೆಗಳಿಗೆ ವಿಶಾಲ ಜಾಗ ದೊರಕಿದೆ. ವರಾಹ ದ್ವಾರದಲ್ಲಿ ಕುಶಾಲತೋಪು ನೋಡಲು ಹೆಚ್ಚು ಜನ ಸೇರುತ್ತಿದ್ದರಿಂದ ಸಂಚಾರ ದಟ್ಟಣೆ ಉಂಟಾಗುವುದು ತಪ್ಪಿದಂತಾಗಿದೆ.

‘ಲಕ್ಷ್ಮಿ’ ಜೊತೆ ‘ಚೈತ್ರಾ’:ಅರಮನೆ ಆವರಣದಲ್ಲಿ ‘ಶ್ರೀದತ್ತಾತ್ರೇಯ’ನಿಗೆ ಜನ್ಮ ನೀಡಿರುವ ‘ಲಕ್ಷ್ಮಿ’ ಆನೆ ಜೊತೆ ‘ಚೈತ್ರಾ’ಳನ್ನು ಇರಿಸಲಾಗಿತ್ತು. ಹೀಗಾಗಿ ತಾಲೀಮಿನಲ್ಲಿ 12 ಆನೆಗಳು ಭಾಗವಹಿಸಿದ್ದವು.

‘ಲಕ್ಷ್ಮಿ ಜೊತೆ ಕಳೆದ ನಾಲ್ಕು ದಿನ ವಿಜಯಾ ಇದ್ದಳು. ಮರಿ ಹುಟ್ಟಿದಾಗ ಸದಸ್ಯರ ಬೆಂಬಲವನ್ನು ಆನೆಗಳು ಬಯಸುತ್ತವೆ. ತಂಡವಾಗಿ ಇದ್ದೇವೆ ಎಂಬುದು ಅದಕ್ಕೂ ಗೊತ್ತಾಗಬೇಕು. ಹೀಗಾಗಿ ಚೈತ್ರಾ ಅವಳೊಂದಿಗೆ ಇದ್ದಾಳೆ. ತಾಯಿ– ಮರಿಯಾನೆ ಆರೋಗ್ಯದ ಇದ್ದಾರೆ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT