ಸೋಮವಾರ, ಜನವರಿ 20, 2020
18 °C
ಸಾ.ರಾ. ಮಹೇಶ್ ಸೋದರ ಸೇರಿದಂತೆ 36 ಮಂದಿ ವಿರುದ್ಧ ‘ಅಟ್ರಾಸಿಟಿ’ ಕೇಸ್

ಸಾ.ರಾ.ರವೀಶ್ ವಿರುದ್ಧ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಲಿಗ್ರಾಮ (ಮೈಸೂರು): ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಸಹೋದರ ಸಾ.ರಾ.ರವೀಶ್‌ ಸೇರಿದಂತೆ 36 ಮಂದಿ ವಿರುದ್ಧ, ಇಲ್ಲಿನ ಪ‍ಟ್ಟಣ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧದ ದೌರ್ಜನ್ಯ ತಡೆ (ಅಟ್ರಾಸಿಟಿ) ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ ಸಂಭವಿಸಿದ ಅಪಘಾತದ ವಿಚಾರವಾಗಿ, ಎರಡು ಗುಂಪುಗಳ ಮಧ್ಯೆ ಗುರುವಾರ ಘರ್ಷಣೆ ಉಂಟಾಗಿತ್ತು. ಉದ್ರಿಕ್ತರಿಂದ ಕಲ್ಲು ತೂರಾಟವೂ ನಡೆದಿತ್ತು. ಈ ವೇಳೆ, ಅಪಘಾತಕ್ಕೆ ಕಾರಣ ಎನ್ನಲಾದ ದಲಿತ ಯುವಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸಿತ್ತು. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.

‘ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ತಿಳಿಸಿದರು.

ಎನ್‌.ಮಹೇಶ್‌ ಎಚ್ಚರಿಕೆ:‘ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದು ನಿಲ್ಲಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಶಾಸಕ ಎನ್.ಮಹೇಶ್ ಕೊಳ್ಳೇಗಾಲದಲ್ಲಿ ಎಚ್ಚರಿಕೆ ನೀಡಿದರು.

‘ಸಾಲಿಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ದಲಿತರ ಮನೆಗಳ ಮೇಲೆ ಸಾಮೂಹಿಕವಾಗಿ ಕಲ್ಲು ತೂರಾಟ ಮಾಡಿರುವುದು ಬಹಳ ವಿಚಿತ್ರವಾದ ಸಂಗತಿ. ದಲಿತರೇನು ಪಾಕಿಸ್ತಾನದಲ್ಲಿದ್ದಾರಾ’ ಎಂದು ಪ್ರಶ್ನಿಸಿದರು.

’ಸಾ.ರಾ.ಮಹೇಶ್ ಅವರ ಸಹೋದರನೇ ಈ ಗಲಭೆಯ ನೇತೃತ್ವ ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಇದು ನಿಜವಾದರೆ ಅವರನ್ನು ‍ಪೊಲೀಸರು ಬಂಧಿಸಬೇಕು. ಕ್ಷೇತ್ರದಲ್ಲಿರುವ ದಲಿತರನ್ನು ಸಾ.ರಾ.ಮಹೇಶ್ ಅವರೇ ನಿಂತು ರಕ್ಷಣೆ ಮಾಡಬೇಕು. ದೌರ್ಜನ್ಯ ಎಸಗಿದ ಎಲ್ಲರನ್ನೂ ಜೈಲಿಗೆ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತೇನೆ’ ಎಂದರು.

 

ಪ್ರತಿಕ್ರಿಯಿಸಿ (+)