ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಗಳ ಸರ್ವೇ, ಅಭಿವೃದ್ಧಿ ಇಂದಿನಿಂದಲೇ...

ಮೈಸೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಒ ಸಿ.ಆರ್.ಕೃಷ್ಣಕುಮಾರ್ ಹೇಳಿಕೆ
Last Updated 10 ಡಿಸೆಂಬರ್ 2019, 15:15 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ತಾಲ್ಲೂಕಿನ 32 ಸ್ಮಶಾನಗಳ ಅಭಿವೃದ್ಧಿಯನ್ನು ಡಿ.11ರಿಂದಲೇ ಆರಂಭಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶದ ನಡುವೆಯೇ ಇಒ ಈ ವಿಷಯ ಪ್ರಕಟಿಸಿದರು.

ಡಿ.11ರ ಬುಧವಾರ ಜಯಪುರ ಗ್ರಾಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಈ ಯೋಜನೆಗೆ ಚಾಲನೆ ನೀಡಿದರೆ, 12ರಂದು ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಹಲ ಸದಸ್ಯರು ಸ್ಮಶಾನದ ಒತ್ತುವರಿ ವಿಷಯದಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಭೂಮಾಪನ ಇಲಾಖೆಯ ಉಪನಿರ್ದೇಶಕ ಚಿಕ್ಕಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಅವಧಿ ಆರಂಭವಾದಾಗಿನಿಂದ ಇದೇ ಸಮಸ್ಯೆ ಪ್ರತಿ ಸಭೆಯಲ್ಲೂ ಚರ್ಚೆಯಾದರೂ, ಪರಿಹಾರ ದೊರಕದಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ ₹ 2.4 ಕೋಟಿ ಅನುದಾನ: ಗ್ರಾಮಗಳಲ್ಲಿ ಕಸ ವಿಲೇವಾರಿ ಸಮಸ್ಯೆ ಹೆಚ್ಚಿದೆ. 37 ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಗುರುತಿಸಿದ್ದೇವೆ. ಅವುಗಳಲ್ಲಿ 21 ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಅನುಮೋದನೆ ಕಳುಹಿಸಿದ್ದೆವು.

ಇದೀಗ 12 ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ₹ 2.4 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಿ ಉಳಿದ ಗ್ರಾಮಗಳಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣಕುಮಾರ್ ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ವಲಯವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡುವ ನಿಟ್ಟಿನಲ್ಲಿ, ಪ್ರತಿ ಗ್ರಾ.ಪಂ.ಗೆ ಮೂರರಂತೆ 150 ಶಾಲೆಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ನಿರ್ಮಾಣ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. ಜತೆಗೆ ಹಸಿ-ಒಣ ಕಸ ಬೇರ್ಪಡಿಸುವಿಕೆ, ಮರುಬಳಕೆ ಬಗ್ಗೆಯೂ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಹಾಸ್ಟೆಲ್‌ ಬಾಡಿಗೆ; ಸದಸ್ಯರ ಕಿಡಿ

ಕನಿಷ್ಠ ಮೂಲ ಸೌಲಭ್ಯಗಳಿಲ್ಲದಿದ್ದರೂ ಹಾಸ್ಟೆಲ್‌ಗಾಗಿ ಕಟ್ಟಡಗಳನ್ನು ಬಾಡಿಗೆ ಪಡೆದು, ಜನರ ತೆರಿಗೆ ಹಣವನ್ನು ಒಂದೆಡೆ ಹಾಳು ಮಾಡಿದರೆ, ಇನ್ನೊಂದೆಡೆ ವಿದ್ಯಾರ್ಥಿಗಳನ್ನು ಶೋಷಿಸಲಾಗುತ್ತಿದೆ ಎಂದು ಸದಸ್ಯ ಹನುಮಂತು ದಾಖಲೆ ಸಮೇತ ದೂರಿದರು.

ಹಾಸ್ಟೆಲ್‌ನ ಬಾಡಿಗೆಗೆ ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾರ್ಷಿಕ ₹ 4.25 ಕೋಟಿ ವ್ಯಯಿಸಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಬಾಡಿಗೆ ಮಾಫಿಯಾ ಬೇರೂರಿದೆ ಎಂದು ಆರೋಪಿಸಿದರು.

ನೆಲಮಾಳಿಗೆಗೂ ಬಾಡಿಗೆ ಪಾವತಿಸಲಾಗಿದೆ. ಜನರ ದುಡ್ಡನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಟ್ಟಡದ ಮಾಲೀಕ ಹಾಗೂ ಇದಕ್ಕೆ ಸಹಕಾರ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹನುಮಂತು ಆಗ್ರಹಿಸಿದರು.

ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ್ ಹಾಗೂ ಸಮಿತಿ ಸದಸ್ಯರೊಂದಿಗೆ ಕೆಲ ಹಾಸ್ಟೆಲ್‍ಗಳಿಗೆ ಭೇಟಿ ನೀಡಿದ ಸಂದರ್ಭ ಈ ಸಮಸ್ಯೆಗಳು ಬೆಳಕಿಗೆ ಬಂದಿವೆ ಎಂದು ಸಭೆಗೆ ತಿಳಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಎಸ್‌.ಎಸ್‌.ಸುಜೀಂದ್ರ ಪ್ರಸಾದ್ ಅವರನ್ನು ಬಹುತೇಕ ಸದಸ್ಯರು ತರಾಟೆಗೆ ತೆಗೆದುಕೊಂಡರು. ಉಪಾಧ್ಯಕ್ಷ ಮಂಜು ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.

ಇಒ ಪ್ರತಿಕ್ರಿಯಿಸಿ, ‘ಹಾಸ್ಟೆಲ್‌ ಬಾಡಿಗೆ, ಕಟ್ಟಡಗಳ ಸ್ಥಿತಿ, ಅಧಿಕಾರಿಗಳ ಲೋಪ ಕುರಿತಂತೆ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ಇದೇ ಪತ್ರದಲ್ಲಿ ಶಿಸ್ತುಕ್ರಮಕ್ಕೂ ಶಿಫಾರಸು ಮಾಡಲಾಗುವುದು’ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT