ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನೆಲದಡಿ ಅನಿಲ; ಜನಪ್ರತಿನಿಧಿಗಳಲ್ಲಿ ಆತಂಕ

ಸಂಸದರ ಬೆಂಬಲಕ್ಕೆ ಬಾರದ ಶಾಸಕರು, ಪಾಲಿಕೆ ಸದಸ್ಯರು
Last Updated 30 ಜನವರಿ 2022, 19:30 IST
ಅಕ್ಷರ ಗಾತ್ರ

ಮೈಸೂರು: ಮನೆಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ಪೂರೈಸುವ ಕೇಂದ್ರ ಸರ್ಕಾರದ ಯೋಜನೆಗೆ ಸಾಂಸ್ಕೃತಿಕ ನಗರಿಯ ಶಾಸಕರು ಹಾಗೂ ಪಾಲಿಕೆ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ಇದು ಜಿಲ್ಲೆಯ ಬಿಜೆಪಿಯ ಸಂಸದರು ಮತ್ತು ಶಾಸಕರ ನಡುವೆ ಬಿರುಕು ಸೃಷ್ಟಿಸಿದೆ.

ಈ ವರ್ಷಾಂತ್ಯಕ್ಕೆ ಮೈಸೂರಿಗೆ ಬರಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಈ ಯೋಜನೆಗೆ ಚಾಲನೆ ಕೊಡಿಸಬೇಕು ಎಂಬ ಉತ್ಸಾಹ ಸಂಸದ ಪ್ರತಾಪಸಿಂಹ ಅವರಲ್ಲಿದೆ. ಆದರೆ, ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಿರುವ ಶಾಸಕ ಎಲ್.ನಾಗೇಂದ್ರ ಹಾಗೂ ಎಸ್.ಎ.ರಾಮದಾಸ್‌ ಅವರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಏನಿದು ಯೋಜನೆ?: ಪೈಪ್‌ಲೈನ್‌ ಮೂಲಕ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್‌ಜಿ) ಪೂರೈಸುವ ಬಹುನಿರೀಕ್ಷಿತ ಯೋಜನೆಯನ್ನು ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಕೈಗೆತ್ತಿಕೊಂಡಿದ್ದು, ದೇಶದ ಹಲವು ನಗರಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದೆ.

ಕರ್ನಾಟಕದಲ್ಲಿ ಮೈಸೂರಿನ ಜತೆಗೆ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ತುಮಕೂರು, ಹಾಸನ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಹೂವಿನ ಹಡಗಲಿ, ಹಾವೇರಿ, ಕೋಲಾರ, ಬೆಳಗಾವಿ, ಗದಗ, ಗಂಗಾವತಿ, ಕಲಬುರ್ಗಿ, ಚಿತ್ರದುರ್ಗ ನಗರಗಳು ಆಯ್ಕೆಯಾಗಿವೆ. ಈಗಾಗಲೇ ಬೆಂಗಳೂರಿನ ಹಲವೆಡೆ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ.

ಎಲೆಕ್ಟ್ರಾನಿಕ್ ಸಿಟಿ ಫೇಸ್ –1, ಎಲೆಕ್ಟ್ರಾನಿಕ್ ಸಿಟಿ ಫೇಸ್ –2, ಬಾಷ್, ಪರಪ್ಪನ ಅಗ್ರಹಾರ, ಸಿಂಗಸಂದ್ರ, ಎಚ್‌ಎಸ್‌ಆರ್‌ ಲೇಔಟ್, ಎಚ್‌ಎಎಲ್, ಬಿಇಎಂಎಲ್, ವೈಟ್‌ಫೀಲ್ಡ್‌, ಐಟಿಪಿಎಲ್, ಎಚ್‌ಬಿಆರ್‌ ಲೇಔಟ್, ಕಲ್ಯಾಣನಗರ, ಯಲಹಂಕ, ಬಿಇಎಲ್ ಲೇಔಟ್, ಜಿಂದಾಲ್ ಅಲ್ಯೂಮಿನಿಯಂ, ಪೀಣ್ಯ ಕೈಗಾರಿಕಾ ಪ್ರದೇಶ, ಮಂಗಮ್ಮನಪಾಳ್ಯ, ಬೆಳ್ಳಂದೂರು, ಮಾರತ್ತಹಳ್ಳಿ, ಗರುಡಾಚಾರ್‌ ಪಾಳ್ಯ, ಕಾಡುಗೋಡಿ, ದೊಡ್ಡನೆಕ್ಕುಂದಿ ಮೊದಲಾದ ಕಡೆ ಸಾವಿರಾರು ಮನೆಗಳಿಗೆ ಅಡುಗೆ ಅನಿಲವು ನೇರವಾಗಿ ಕೊಳವೆ ಮೂಲಕವೇ ಮನೆಗಳಿಗೆ ಈಗ ಪೂರೈಕೆಯಾಗುತ್ತಿದೆ.

ಮೈಸೂರಿನಲ್ಲಿ ಹೇಗಿದೆ?: ಎಜಿ ಆ್ಯಂಡ್‌ ಪಿ ಪ್ರಥಮ್ ಕಂಪನಿಯು ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿನ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಅನಿಲ ಸಂಪರ್ಕ ಕಲ್ಪಿಸಲಿದ್ದು, ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಸಂಸದ ಪ್ರತಾಪ ಸಿಂಹ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಂಪನಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು.

ಮೊದಲ ಹಂತದಲ್ಲಿ ಮೈಸೂರು ನಗರದ 40 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಮುಂದಿನ 8 ವರ್ಷಗಳಲ್ಲಿ 3 ಜಿಲ್ಲೆಗಳ 5 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಹೆಬ್ಬಾಳದಲ್ಲಿ ಪಿಎನ್‌ಜಿ ಸಂಗ್ರಹ ಘಟಕ ಸ್ಥಾಪಿಸಲಾಗುತ್ತದೆ. ಅಲ್ಲಿಂದ ನಗರದ ವಿವಿಧೆಡೆಗೆ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಿ ಮನೆಗಳಿಗೆ ಅನಿಲ ವಿತರಿಸಲಾಗುತ್ತದೆ. ಸಂಪರ್ಕ ಪಡೆಯುವಾಗ ಬಳಕೆದಾರರು ₹ 6,500 ಭದ್ರತಾ ಠೇವಣಿ ಇಡಬೇಕು. ಎಲ್‌ಪಿಜಿಗೆ ಒಂದು ತಿಂಗಳಿಗೆ ₹ 1,000 ಪಾವತಿಸಿದರೆ, ಪಿಎನ್‌ಜಿಗೆ ₹ 608 ಪಾವತಿಸಬೇಕಾಗುತ್ತದೆ. ಶೇ 25 ರಿಂದ 30 ರಷ್ಟು ಹಣ ಉಳಿತಾಯವಾಗಲಿದೆ ಎಂದು ಕಂಪನಿಯ ಸಿಇಒ ಚಿರದೀಪ್ ದತ್ತ ಈ ಹಿಂದೆ ತಿಳಿಸಿದ್ದರು.

ನೆಲದಡಿಯ ಅನಿಲದಿಂದ ಆಗಿರುವ ಅನಾಹುತಗಳು
2019ರಲ್ಲಿ ಬೆಂಗಳೂರಿನ ಅಗ್ರಹಾರ ಬಳಿಯ ನಾಗನಾಥಪುರದ ಮುನೇಶ್ವರ ಬ್ಲಾಕ್‌ನಲ್ಲಿ ನೆಲದಡಿಯ ಅನಿಲ ಕೊಳವೆ ಮಾರ್ಗಕ್ಕೆ ಬೆಸ್ಕಾಂನ ವಿದ್ಯುತ್ ಮಾರ್ಗವೂ ಇದ್ದುದ್ದರಿಂದ ಸ್ಫೋಟ ಸಂಭವಿಸಿ, ಇಬ್ಬರು ಗಾಯಗೊಂಡು, 30ಕ್ಕೂ ಅಧಿಕ ಮನೆಗಳು ಜಖಂಗೊಂಡಿದ್ದವು.

ಬೆಂಗಳೂರು– ಹರಳೂರು ರಸ್ತೆಯಲ್ಲಿರುವ ಎಸಿಎಸ್‌ ಬಡಾವಣೆಯಲ್ಲಿ, ಬೆಂಗಳೂರು ಸಿಂಗಸಂದ್ರ ಬಳಿಯ ಎಇಸಿಎಸ್ ಬಡಾವಣೆಯಲ್ಲಿ, ಬೆಳ್ಳಂದೂರು ಬಳಿಯ ಸರ್ಜಾಪುರ ರಸ್ತೆಯಲ್ಲಿ, ಎಚ್‌ಎಸ್ಆರ್‌ ಲೇಔಟ್‌ ಒಂದನೇ ಹಂತದಲ್ಲಿ ಗ್ಯಾಸ್‌ ಪೈಪ್‌ ಒಡೆದು ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು.2020ರ ಜುಲೈನಲ್ಲಿ ಹುಬ್ಬಳ್ಳಿಯ ನವನಗರದ ಕರ್ನಾಟಕ ವೃತ್ತದ ರಸ್ತೆಯಲ್ಲಿ ಹಾದು ಹೋಗಿರುವ ಕೊಳವೆ ಮಾರ್ಗದಲ್ಲಿಯೂ ಅನಿಲ ಸೋರಿಕೆಯಾಗಿತ್ತು.

ಅನುಮತಿ ನೀಡಲು ಭಾಮಿಶೆಣೈ ಒತ್ತಾಯ
ಕೊಳವೆ ಮೂಲಕ ಮನೆಗಳಿಗೆ ಅಡುಗೆ ಅನಿಲ ತಲುಪಿಸುವ ಯೋಜನೆಗೆ ಪರಿಸರವಾದಿ ಹಾಗೂ ಈ ಕ್ಷೇತ್ರದಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿರುವ ತಜ್ಞ ಭಾಮಿಶೆಣೈ ಬೆಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಈ ಯೋಜನೆಗೆ ತಕರಾರು ಮಾಡದೇ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

‘ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಕ್ಕೆ ಮೈಸೂರಿಗರು ಹೆಮ್ಮೆ ಪಡಬೇಕು. ಅನಗತ್ಯವಾದ ಗೊಂದಲಗಳನ್ನು ಪಾಲಿಕೆ ಸದಸ್ಯರು ಸೃಷ್ಟಿಸಿರುವುದು ಸರಿಯಲ್ಲ. ರಸ್ತೆಯನ್ನು ಇದೊಂದೇ ಕಾರಣಕ್ಕೆ ಅಗೆಯುವುದಿಲ್ಲ. ಒಂದು ವೇಳೆ ಯೋಜನೆ ಬಾರದಿದ್ದರೂ ರಸ್ತೆ ಅಗೆಯುವುದು ತಪ್ಪುವುದಿಲ್ಲ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದ್ದಾರೆ.

‘ಸಿಲಿಂಡರ್‌ ಮೂಲಕ ಅನಿಲ ಪಡೆಯುವುದಕ್ಕಿಂತ ಕೊಳವೆ ಮೂಲಕ ಪಡೆಯುವುದು ಸುರಕ್ಷಿತ. ಸಿಲಿಂಡರ್‌ ಸಾಗಾಣಿಕೆ ಮಾಡುವ ವಾಹನಗಳ ಇಂಧನ ಉಳಿಯುತ್ತದೆ. ಜಾಗತಿಕ ತಾಪಮಾನದ ಹೆಚ್ಚಳವನ್ನು ತಡೆಯಬಹುದು. ಇದೊಂದು ದೂರದೃಷ್ಟಿಯ ಯೋಜನೆಯಾಗಿದ್ದು ಎಲ್ಲರೂ ಬೆಂಬಲಿಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT