ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಜಿಪಂ ಸಿಇಒ ವರ್ಗಾವಣೆ ರದ್ಧತಿಗೆ ಪಿಡಿಒಗಳ ಆಗ್ರಹ

ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ
Last Updated 24 ಆಗಸ್ಟ್ 2020, 16:19 IST
ಅಕ್ಷರ ಗಾತ್ರ

ಮೈಸೂರು: ಆತ್ಮಹತ್ಯೆ ಮಾಡಿಕೊಂಡ ನಂಜನಗೂಡು ತಾಲ್ಲೂಕಿನ ಪ್ರಭಾರ ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಪ್ರಕರಣ ಸೋಮವಾರ ವಿಭಿನ್ನ ತಿರುವು ಪಡೆದಿದೆ.

ನಾಗೇಂದ್ರ ಆತ್ಮಹತ್ಯೆಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ಕುಮಾರ್‌ ಮಿಶ್ರಾ ಹಾಕಿದ ಒತ್ತಡವೇ ಕಾರಣ ಎಂದು ಗುರುವಾರದಿಂದ ಭಾನುವಾರದವರೆಗೆ ಕರ್ತವ್ಯದಿಂದ ಹೊರಗುಳಿದು ಪ್ರತಿಭಟಿಸಿದ್ದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ ಸಂಘದ ಸದಸ್ಯರು, ಸೋಮವಾರ ಕಪ್ಪುಪಟ್ಟಿ ಕಟ್ಟಿಕೊಂಡು ತಮ್ಮ ಕರ್ತವ್ಯಕ್ಕೆ ಮರಳಿದರೆ; ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಿಶ್ರಾ ವಿರುದ್ಧ ಕ್ರಮ ಜರುಗಿಸಬಾರದು ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಅವರನ್ನು ಭೇಟಿ ಮಾಡಿದ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಎಂ.ಡಿ.ಮಾಯಪ್ಪ ಹಾಗೂ ಪದಾಧಿಕಾರಿಗಳ ತಂಡ, ನಾಗೇಂದ್ರ ತಂದೆ ನೀಡಿರುವ ದೂರಿನಲ್ಲಿ ಹಲವು ಅಧಿಕಾರಿಗಳ ಒತ್ತಡವಿದೆ ಎಂದಿದ್ದಾರೆ. ಆದರೂ ಮಿಶ್ರಾ ವಿರುದ್ಧ ಕ್ರಮ ಜರುಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿತು.

‘ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ.ರವೀಂದ್ರ ಸಿಇಒ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ನಮ್ಮೆಲ್ಲರಿಗೂ ನೋವಾಗಿದೆ. ತಕ್ಷಣವೇ ಅವರು ಕ್ಷಮೆ ಯಾಚಿಸಬೇಕು’ ಎಂದು ಮಾಯಪ್ಪ ಆಗ್ರಹಿಸಿದರು.

‘ನಾಗೇಂದ್ರ ಸಾವಿಗೆ ಸಿಇಒ ಹೇಗೆ ಕಾರಣ? ಟಿಎಚ್‌ಒ ಅವರಿಗೆ ಒತ್ತಡವಿದ್ದುದ್ದು ಅವರದೇ ಇಲಾಖೆಯ ಅಧಿಕಾರಿ (ಡಿಎಚ್‌ಒ) ಗಮನಕ್ಕೆ ಬಂದಿರಲಿಲ್ಲವೇ? ತನಿಖೆಯೇ ನಡೆದಿಲ್ಲವಾಗ ಪ್ರಾಮಾಣಿಕ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದ್ದು ಸರಿಯಲ್ಲ. ಒಬ್ಬಿಬ್ಬರ ಹೇಳಿಕೆ ಪರಿಗಣಿಸಬೇಡಿ. ಮಿಶ್ರಾ ಅವರನ್ನು ಇಲ್ಲೇ ಮುಂದುವರೆಸಿ. ಇಲ್ಲದಿದ್ದರೇ ದಕ್ಷ ಅಧಿಕಾರಿಯನ್ನು ಕಳೆದುಕೊಂಡ ಅಪಕೀರ್ತಿಗೆ ಜಿಲ್ಲೆ ಗುರಿಯಾಗಲಿದೆ’ ಎಂದು ಅವರು ಹೇಳಿದರು.

ಪಿಡಿಒಗಳು ಬೃಹತ್ ಪ್ರತಿಭಟನಾ ಜಾಥಾಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿದ್ದರು. ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಆರು ಮಂದಿಗೆ ಮಾತ್ರ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲು ಅನುಮತಿ ನೀಡಿತ್ತು. ಆದರೆ ನೂರಕ್ಕೂ ಹೆಚ್ಚು ಪಿಡಿಒಗಳು ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು.

ಸಂಘದ ಖಜಾಂಚಿ ಎನ್.ಚಂದ್ರಕಾಂತ್, ಕೆ.ಎಸ್.ಸತೀಶ್ ಕುಮಾರ್, ಎಂ.ವೃಷಬೇಂದ್ರ, ಜಿ.ಎಸ್.ಶಿಲ್ಪಾ, ಎಸ್.ಮಧುರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT