ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ರಾತ್ರಿ ವಾಹನ ಸವಾರರಿಂದ ಸ್ಥಳೀಯರಿಗೆ ಕಿರಿಕಿರಿ

ಹಂಗಳದಲ್ಲಿ ವಾಹನ ನಿಲುಗಡೆಗೆ ಜಾಗ, ಶೌಚಾಲಯಿದ್ದರೂ ಪ್ರಯೋಜನಕ್ಕೆ ಇಲ್ಲ, ಗಮನ ನೀಡದ ಗ್ರಾ.ಪಂ.
Last Updated 8 ಜೂನ್ 2019, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಮಿಳುನಾಡಿನತ್ತ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್‌ 67– ಊಟಿ ರಸ್ತೆ) ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಮೇಲುಕಾಮನಹಳ್ಳಿ ಕಾಲೊನಿ ಹಾಗೂ ಸುತ್ತಮುತ್ತಲಿನ ಜನರಿಗೆ ಶಾಪವಾಗಿ ಪರಿಣಮಿಸಿದೆ.ರಾತ್ರಿ ಸಂಚಾರ ಸ್ಥಗಿತಗೊಂಡ ನಂತರ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಚಾಲಕರು, ಸವಾರರಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ.

ಊಟಿ ಕಡೆಗೆ ರಸ್ತೆಯಲ್ಲಿ ಬರುವ ಮೇಲುಕಾಮನಹಳ್ಳಿಯಿಂದ ಬಂಡೀಪುರ ಸಂರಕ್ಷಿತ ಪ್ರದೇಶದ ವ್ಯಾಪ್ತಿ ಆರಂಭವಾಗುತ್ತದೆ. ಒಂದರ್ಥದಲ್ಲಿ ಮೇಲುಕಾಮನಹಳ್ಳಿ ಸಂರಕ್ಷಿತ ಪ್ರದೇಶದ ಸ್ವಾಗತ ಕೇಂದ್ರ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ ಇಲ್ಲಿಯೇ ಇದೆ.

ರಾತ್ರಿ 9ರಿಂದ ಬೆಳಗಿನ ಜಾವ 6 ಗಂಟೆಯವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ ಇರುವುದರಿಂದ ರಾತ್ರಿ ಗೇಟ್‌ ಮುಚ್ಚಲಾಗುತ್ತದೆ. ಹಾಗಾಗಿ, ಈ ಮಾರ್ಗದ ಮೂಲಕ ತಮಿಳುನಾಡಿನತ್ತ ಸಂಚರಿಸುವ ಲಾರಿಗಳು, ಪ್ರವಾಸಿಗರ ವಾಹನಗಳು ಮೇಲುಕಾಮನಹಳ್ಳಿಯ ಚೆಕ್‌ಪೋಸ್ಟ್‌ ಬಳಿಯ ರಸ್ತೆ ಬದಿಯಲ್ಲೇ ನಿಲ್ಲುತ್ತವೆ. ಚಾಲಕರು ಮತ್ತು ಸವಾರರಿಂದಾಗಿ ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ. ಚೆಕ್‌ಪೋಸ್ಟ್‌ ಬಳಿಯಲ್ಲೇ ಶಾಲೆ, ಅಂಗನವಾಡಿ ಇದೆ. ಪ್ರತಿ ದಿನ ಮಕ್ಕಳಿಗೂ ತೊಂದರೆಯಾಗುತ್ತಿದೆ.

ಅನೈತಿಕ ಚಟುವಟಿಕೆ: ಚೆಕ್‌ಪೋಸ್ಟ್‌ ಬಳಿಯಲ್ಲಿ ಸಾರ್ವಜನಿಕ ಶೌಚಾಲಯವಾಗಲಿ, ವಾಹನ ನಿಲುಗಡೆಗಾಗಲಿ ಪ್ರತ್ಯೇಕ ವ್ಯವಸ್ಥೆಗಳಿಲ್ಲ. ರಾತ್ರಿ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಚಾಲಕರು, ಪ್ರವಾಸಿಗರು ರಸ್ತೆಯ ಎರಡೂ ಬದಿಗಳಲ್ಲಿ, ಶಾಲೆ, ದೇವಸ್ಥಾನದ ಆವರಣಗಳಲ್ಲಿ ಮಲ–ಮೂತ್ರ ವಿಸರ್ಜನೆ, ಮದ್ಯಪಾನ, ಧೂಮಪಾನ ಮಾಡುತ್ತಾರೆ. ವಾಹನ ಸವಾರರ ಮೇಲೆ ನಿಗಾ ಇಡುವ ವ್ಯವಸ್ಥೆ ಇಲ್ಲಿ ಇಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಕೂಡ ಏನೂ ಕ್ರಮ ಕೈಗೊಂಡಿಲ್ಲ.

‘ಚಾಲಕರು ಮತ್ತು ವಾಹನಗಳ ಪ್ರಯಾಣಿಕರು ರಾತ್ರಿ ಹೊತ್ತು ಇಲ್ಲೇ ಮದ್ಯಪಾನ ಜೋರಾಗಿ ಕಿರುಚಾಡುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಸುತ್ತಮುತ್ತಲಿನ ಜನರಿಗೆ ವಾಸನೆ ಬರುತ್ತದೆ. ಶಾಲಾ ಆವರಣದಲ್ಲಿ ಮದ್ಯದ ಬಾಟಲಿ, ಬೀಡಿ ಸಿಗರೇಟ್ ತುಂಡುಗಳು, ಡೈಪರ್ ಇನ್ನಿತರ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಪ್ರತಿ ದಿನ ಶಾಲಾ ಮತ್ತು ಅಂಗನವಾಡಿ ಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ. ಕಸ ಹಾಗೂ ಗಲೀಜನ್ನು ಮಕ್ಕಳೇ ಸ್ವಚ್ಛಮಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಲೋನಿಯ ನಿವಾಸಿ ಬೊಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನೈರ್ಮಲ್ಯ: ಪ್ರಯಾಣಿಕರು ಗಲೀಜು ಮಾಡುವುದರಿಂದ ಹಂದಿಗಳ ಹಾವಳಿಯೂ ಹೆಚ್ಚಿದೆ. ಸಮೀಪದಲ್ಲೇ ಇರುವಶನಿದೇವರ ದೇವಸ್ಥಾನಕ್ಕೆ ಪ್ರತಿನಿತ್ಯ ಭಕ್ತರು ಬರುತ್ತಾರೆ. ಅನೈರ್ಮಲ್ಯದಿಂದಾಗಿ ದೇವಸ್ಥಾನದ ಆವರಣದಲ್ಲಿ ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಎಂಬುದು ಭಕ್ತರ ಆರೋಪ.

ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಥವಾ ಪೊಲೀಸರಾದರೂ ವಾಹನ ಸವಾರರ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರಒತ್ತಾಯ.

ಬೆಳಗಿನ ಜಾವ ಹೆಚ್ಚು: ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕರಿಗೆ ರಾತ್ರಿ ಸಂಚಾರ ನಿರ್ಬಂಧದ ಬಗ್ಗೆ ಮಾಹಿತಿ ಇರುತ್ತದೆ. ಹಾಗಾಗಿ 9 ಗಂಟೆಯ ನಂತರ ವಾಹನಗಳ ಸಂಖ್ಯೆ ವಿರಳವಾಗುತ್ತವೆ. ಮಧ್ಯರಾತ್ರಿ ದಾಟುತ್ತಿದ್ದಂತೆಯೇ ಲಾರಿಗಳು, ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಬೆಳಿಗ್ಗೆ ಗೇಟ್‌ ತೆರೆದ ತಕ್ಷಣ ಪ್ರಯಾಣ ಆರಂಭಿಸುವ ಉದ್ದೇಶದಿಂದ ಚೆಕ್‌ಪೋಸ್ಟ್‌ ಬಳಿ‌ಯೇ ನಿಲ್ಲಿಸುತ್ತಾರೆ. ಮುಂಜಾವು 4–5 ಗಂಟೆ ಸುಮಾರಿಗೆ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತವೆ. ಹಬ್ಬ, ರಜಾದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ.

‘ಪಂಚಾಯಿತಿಗೆ ಹಸ್ತಾಂತರವಾಗಿಲ್ಲ’
‘ಹಂಗಳದಲ್ಲಿ ವಾಹನ ನಿಲುಗಡೆ, ಶೌಚಾಲಯ, ಸ್ನಾನಗೃಹ ವ್ಯವಸ್ಥೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದೆ. ಆದರೆ, ಅಧಿಕಾರಿಗಳು ಇನ್ನೂ ಪಂಚಾಯಿತಿಗೆ ಅವನ್ನು ಹಸ್ತಾಂತರಿಸಿಲ್ಲ.ನಾವು ಹಲವು ಬಾರಿ ಕರೆ ಮಾಡಿದ್ದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ’ ಎಂದು ಹಂಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ಮಿಸಲಾಗಿರುವ ಶೌಚಾಲಯಗಳಲ್ಲಿ ಇದ್ದ ಪೈಪ್‌, ಟಬ್‌ ಮತ್ತು ಸ್ವಿಚ್‌ಗಳೆನ್ನಲ್ಲ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಅವನ್ನು ದುರಸ್ತಿ ಮಾಡಿ ನಮಗೆ ಜವಾಬ್ದಾರಿ ಕೊಟ್ಟರೆ, ನಾವು ನಿರ್ವಹಣೆ ಮಾಡುತ್ತೇವೆ’ ಎಂದು ಅವರು ಹೇಳಿದರು.

ಆದರೆ, ಸೌಕರ್ಯಗಳ ನಿರ್ವಹಣೆಯ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.

ಬಳಕೆಗೆ ಮುಕ್ತವಾಗದ ಶೌಚಾಲಯ
ಮೇಲುಕಾಮನಹಳ್ಳಿಯ ಚೆಕ್‌ಪೋಸ್ಟ್‌ಗೂ ಮೊದಲು ಹಂಗಳ ಹೋಬಳಿ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಮಾಡಿದೆ. ಶೌಚಾಲಯ, ಸ್ನಾನದ ಮನೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನೂ ಕಲ್ಪಿಸಿದೆ. ಈ ಕಾಮಗಾರಿಗಳು ನಡೆದು ಎರಡು ವರ್ಷಗಳಾದರೂ ಇನ್ನೂ ಬಳಕೆಗೆ ಮುಕ್ತವಾಗಿಲ್ಲ. ಹಾಗಾಗಿ, ವಾಹನಗಳು ಇಲ್ಲಿ ನಿಲ್ಲದೇ ಚೆಕ್‌ಪೋಸ್ಟ್‌ ಬಳಿ ನಿಲ್ಲುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT