ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ

ದೇಗುಲದ ಮುಂಭಾಗವೇ ಸಚಿವ–ಸಂಸದ–ಶಾಸಕರಿಗೆ ಮಂಗಳಾರತಿ
Last Updated 16 ಮೇ 2020, 17:54 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರ/ಜಿಲ್ಲೆಯಲ್ಲಿ ಕೋವಿಡ್‌–19ಗೆ ಪೀಡಿತರಾಗಿದ್ದ ಎಲ್ಲರೂ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಶನಿವಾರ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶಾಸಕರಾದ ಎಸ್‌.ಎ.ರಾಮದಾಸ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪಸಿಂಹ ಹಾಗೂ ಅಧಿಕಾರಿಗಳ ತಂಡದೊಂದಿಗೆ ಬೆಳಿಗ್ಗೆ 7.20ಕ್ಕೆ ಬೆಟ್ಟಕ್ಕೆ ಭೇಟಿ ನೀಡಿದ ಸಚಿವರು, ದೇಗುಲದ ಮುಂಭಾಗವೇ ನಿಂತು ಚಾಮುಂಡೇಶ್ವರಿಯ ದರ್ಶನ ಪಡೆದರು.

ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಚಿವರು, ಶಾಸಕರು, ಸಂಸದರಿಂದ ಜಗತ್ತಿನ ಒಳಿತಿಗಾಗಿ ದೇವಾಲಯದ ಹೊರಭಾಗದಿಂದಲೇ ಸಂಕಲ್ಪ ಮಾಡಿಸಿದರು. ಈ ಸಂದರ್ಭ ಸಚಿವ ಸೋಮಶೇಖರ್, ‘ಕರ್ನಾಟಕ, ದೇಶ ಕೊರೊನಾ ಮುಕ್ತವಾಗಲಿ. ಜನಜೀವನ ಸಹಜ ಸ್ಥಿತಿಗೆ ಮರಳಲಿ’ ಎಂದು ಪ್ರಾರ್ಥಿಸಿಕೊಂಡರು.

ಲಾಕ್‌ಡೌನ್‌ ನಿಯಮಾವಳಿಯಂತೆ ದೇಗುಲ ಪ್ರವೇಶಕ್ಕೆ ಅವಕಾಶ ಇಲ್ಲದಿರುವುದರಿಂದ, ಅರ್ಚಕ ಸಮೂಹ ದೇವಸ್ಥಾನದ ಹೊರ ಭಾಗದಲ್ಲೇ ನಿಂತಿದ್ದ ಸಚಿವರು, ಶಾಸಕದ್ವಯರು, ಸಂಸದರು, ಅಧಿಕಾರಿ ವರ್ಗಕ್ಕೆ ಮಂಗಳಾರತಿ, ಪ್ರಸಾದ ನೀಡಿತು.

‘ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಎಲ್ಲ ರಾಜ್ಯ ಸರ್ಕಾರ ಪಾಲಿಸುತ್ತಿವೆ. ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ. ಈ ವಿಷಯದಲ್ಲಿ ಸಚಿವ ಸಂಪುಟದಲ್ಲೂ ಚರ್ಚೆಯಾಗಿದೆ. ಕೇಂದ್ರದ ಸೂಚನೆ ಪಾಲಿಸಲಾಗುವುದು’ ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರಧಾನಿ ಮೋದಿ ಆಶಯದಂತೆ ರಾಜ್ಯದಲ್ಲೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದು ರೈತರಿಗೆ ತುಂಬಾ ಅನುಕೂಲಕಾರಿಯಾಗಲಿದೆ. ಮುಕ್ತ ಮಾರಾಟಕ್ಕೆ ಅವಕಾಶ ಕೊಡಲಿದೆ’ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT