ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ

7
ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ * ಚಿನ್ನದ ಪಲ್ಲಕ್ಕಿ ಉತ್ಸವ ನೋಡಲು ಮುಗಿಬಿದ್ದ ಜನ

ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ

Published:
Updated:
Deccan Herald

ಮೈಸೂರು: ಆಷಾಢ ಮಾಸದ ಮೂರನೇ ಶುಕ್ರವಾರ ಹಾಗೂ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಕಡೆಗಳಿಂದ ಸಾವಿರಾರು ಭಕ್ತರು ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹರಿದುಬಂದರು.

ದೇವಸ್ಥಾನದಲ್ಲಿ ಬೆಳಿಗ್ಗೆ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಂಗಳಾರತಿ ಹಾಗೂ 9.30ಕ್ಕೆ ಮಹಾಮಂಗಳಾರತಿ ಸೇರಿದಂತೆ ಪೂಜಾ ವಿಧಿವಿಧಾನಗಳು ನಡೆದವು.

ದುರ್ಗಾಲಂಕಾರದಲ್ಲಿ ದೇವಿಯ ಮೂರ್ತಿ ಕಂಗೊಳಿಸುತ್ತಿತ್ತು. ಸೇವಂತಿಗೆ, ಮರುಗ, ಜಾಜಿ, ಮಲ್ಲಿಗೆ ಹೂವುಗಳಿಂದ ದೇವಿಯನ್ನು ಸಿಂಗರಿಸಲಾಗಿತ್ತು. ದಟ್ಟನೀಲಿ, ಕೆಂಪು, ಕೇಸರಿ, ಹಳದಿ, ಬಿಳಿ ಬಣ್ಣದ ಹೂವುಗಳಿಂದ ಗರ್ಭಗುಡಿಯ ಸಭಾಂಗಣವನ್ನು ಅಲಂಕರಿಸಲಾಗಿತ್ತು.

ಶಾಲ್ಯಾನ್ನ ಅಭಿಷೇಕ: ವರ್ಧಂತಿ ಉತ್ಸವದ ಅಂಗವಾಗಿ ದೇವಿಗೆ ಅನ್ನ, ಬೆಣ್ಣೆ, ಸಕ್ಕರೆ, ಗೋಡಂಬಿ, ದ್ರಾಕ್ಷಿ ಮಿಶ್ರಣದ ಶಾಲ್ಯಾನ್ನ ಅಭಿಷೇಕ ಮಾಡಲಾಯಿತು.

ಚಿನ್ನದ ಪಲ್ಲಕ್ಕಿ ಉತ್ಸವ: ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 10.25ಕ್ಕೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ ದಂಪತಿ, ಪ್ರಮೋದಾದೇವಿ ಒಡೆಯರ್‌ ಅವರು ಪಲ್ಲಕ್ಕಿ ಗಾಡಿಯ ನೊಗವನ್ನು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಪಲ್ಲಕ್ಕಿ ಉತ್ಸವವನ್ನು ನೋಡಲು ಭಕ್ತರು ಮುಗಿಬಿದ್ದರು. ಸುಮಾರು ಒಂದು ಗಂಟೆ ಕಾಲ ಮೆರವಣಿಗೆ ನಡೆಯಿತು. ದೇವಿಯ ದರ್ಶನ ಪಡೆದು ಪುನೀತರಾದರು. ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಭವಾನಿ ದಂಪತಿ, ಅರಣ್ಯ ಸಚಿವ ಆರ್‌.ಶಂಕರ್‌ ದೇವರ ದರ್ಶನ ಪಡೆದರು.

ಪಲ್ಲಕ್ಕಿ ಉತ್ಸವದ ಬಳಿಕ ಮಂಟಪೋತ್ಸವ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ 8.30ರಿಂದ 9.30ರವರೆಗೆ ದೇವಿಗೆ ಉತ್ಸವ ಫಲಪೂಜೆ, ದರ್ಬಾರ್‌ ಉತ್ಸವ, ಮಂಟಪೋತ್ಸವ, ರಾಷ್ಟ್ರಾಶೀರ್ವಾದ ಜರುಗಿತು.

ಬಸ್ ವ್ಯವಸ್ಥೆ: ಲಲಿತಮಹಲ್‌ ಬಳಿಯ ಹೆಲಿಪ್ಯಾಡ್‌ನಿಂದ ದೇವಾಲಯಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಟಿಸಿ ವತಿಯಿಂದ ಪ್ರತಿ 5 ನಿಮಿಷಕ್ಕೆ ಒಂದರಂತೆ ಬಸ್‌ ಸೌಲಭ್ಯ ಇತ್ತು.

ಹರಕೆ ಹೊತ್ತಿದ್ದ ಭಕ್ತರು ಬೆಟ್ಟದ ಮೆಟ್ಟಿಲುಗಳನ್ನು ಹತ್ತಿದರು. ಎಲ್ಲ ಮೆಟ್ಟಿಲುಗಳಿಗೂ ಅರಿಶಿನ- ಕುಂಕುಮ ಹಚ್ಚಿ, ದೀಪ ಬೆಳಗಿದರು.

ಭಕ್ತರ ತಳ್ಳಾಟ, ನೂಕಾಟ:  ವರ್ಧಂತಿ ಉತ್ಸವದ ಪ್ರಯುಕ್ತ ಸಹಸ್ರಾರು ಭಕ್ತರು ದೇವಿಯ ದರ್ಶನ ಪಡೆಯಲು ತುದಿಗಾಲ ಮೇಲೆ ನಿಂತಿದ್ದರು. ದೇವಸ್ಥಾನದ ಆವರಣದಲ್ಲಿ ಕಾಲಿಡಲು ಜಾಗ ಇರಲಿಲ್ಲ. ದರ್ಶನಕ್ಕೆ ಭಕ್ತರು ಸಾಲಿನಲ್ಲಿ ಸಾಗಲು ಬ್ಯಾರಿಕೇಡ್‌ಗಳನ್ನು ಇಟ್ಟು ಮಾರ್ಗ ನಿರ್ಮಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಲ್ಲಲು ಭಕ್ತರು ಪೈಪೋಟಿ ನಡೆಸಿದರು. ಇದರಿಂದ ತಳ್ಳಾಟ, ನೂಕಾಟ ನಡೆಯಿತು.

ನೇರ ದರ್ಶನ, ವಿಶೇಷ ಪ್ರವೇಶದ್ವಾರಗಳಲ್ಲಿ ಗಣ್ಯರು, ಅತಿಗಣ್ಯರು, ಜನಪ್ರತಿನಿಧಿಗಳು ಮೊದಲಾದವರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ದ್ವಾರಗಳಲ್ಲೂ ತಳ್ಳಾಟ ನಡೆಯಿತು.

ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಜನಪ್ರತಿನಿಧಿಗಳ ನಡೆಗೆ ಭಕ್ತರ ಬೇಸರ: ಸಚಿವ ಎಚ್‌.ಡಿ.ರೇವಣ್ಣ ಹಾಗೂ ಭವಾನಿ ದಂಪತಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಬಂದಾಗ ಅವರ ಕಾರಿನ ಹಿಂದೆ ಐದಾರು ಕಾರುಗಳು ಬಂದವು. ಈ ವೇಳೆ, ಭಕ್ತರು ದೇವಿಯ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿ, ಅರಣ್ಯ ಸಚಿವ ಆರ್. ಶಂಕರ್ ಬಂದಾಗಲೂ ಐದಾರು ಕಾರುಗಳು ಅವರನ್ನು ಹಿಂಬಾಲಿಸಿದವು. ಇದರಿಂದ ಭಕ್ತರಿಗೆ ತೊಂದರೆ ಉಂಟಾಯಿತು.

‘ಬೆಟ್ಟದಲ್ಲಿ ವಾಹನಗಳ ದಟ್ಟಣೆ ತಪ್ಪಿಸಲು ಹಾಗೂ ಭಕ್ತರು ಸುಲಭವಾಗಿ ದೇವಿಯ ದರ್ಶನ ಪಡೆಯುವ ಉದ್ದೇಶದಿಂದ ಖಾಸಗಿ ವಾಹನಗಳಲ್ಲಿ ಬೆಟ್ಟಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಆದರೆ, ರಾಜಕಾರಣಿಗಳು, ಅವರ ಹಿಂಬಾಲಕರ ವಾಹನಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಜನಸಾಮಾನ್ಯರು ಹಾಗೂ ಶ್ರೀಮಂತರು ಎಂಬ ಭೇದಭಾವ ಮಾಡುವುದು ಸರಿಯಲ್ಲ’ ಎಂದು ಸಂತೋಷ್‌ ಕುಮಾರ್‌ ಕಿಡಿಕಾರಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !