ಶನಿವಾರ, ಸೆಪ್ಟೆಂಬರ್ 18, 2021
28 °C
ಭಕ್ತ ಸಮೂಹವಿಲ್ಲದೆ ನಡೆದ ಮಹೋತ್ಸವ: ಚಾಮುಂಡಿ ಬೆಟ್ಟ ಭಣಭಣ

ಚಾಮುಂಡೇಶ್ವರಿ ವರ್ಧಂತ್ಯುತ್ಸವ; ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡ ದೇವತೆ ಚಾಮುಂಡೇಶ್ವರಿಯ ವರ್ಧಂತ್ಯುತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಲ್ಲಿ, ತಲೆ ತಲಾಂತರದಿಂದಲೂ ನಡೆದು ಬಂದಿರುವ ಸಂಪ್ರದಾಯದ ಪರಂಪರೆಗೆ ಇನಿತೂ ಚ್ಯುತಿಯಾಗದಂತೆ, ಧಾರ್ಮಿಕ ವಿಧಿ–ವಿಧಾನಗಳೊಟ್ಟಿಗೆ ಚಾಮುಂಡೇಶ್ವರಿಯ ವರ್ಧಂತ್ಯುತ್ಸವ ಬೆಟ್ಟದಲ್ಲಿ ನಡೆಯಿತು.

ನಸುಕಿನಲ್ಲೇ ದೇವಿಯ ಮೂರ್ತಿಗೆ ಅಭ್ಯಂಜನ ಸ್ನಾನಗೈಯಲಾಯಿತು. ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆದವು. ವಿಶೇಷ ಅಲಂಕಾರ ಮಾಡಲಾಯಿತು ಎಂದು ದೇಗುಲದ ಪ್ರಧಾನ ಅರ್ಚಕ ಎನ್‌.ಶಶಿಶೇಖರ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ದಂಪತಿ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ಬಳಿಕ, ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಅಲಂಕೃತ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ಸಿಕ್ಕಿತು.

ಯದುವೀರ ದಂಪತಿ ಮುಂದೆ ಸಾಗಿದಂತೆ, ಮಂಗಳವಾದ್ಯ ಸಮೇತ ದೇವಿಯ ಉತ್ಸವ ದೇಗುಲದ ಒಳಾಂಗಣದ ಸುತ್ತ ನಡೆಯಿತು. ನಂತರ ಪುಟ್ಟ ಪಲ್ಲಕ್ಕಿ ಉತ್ಸವವೂ ಜರುಗಿತು. ಅರಮನೆ ವತಿಯಿಂದ ರಾಜ ವಂಶಸ್ಥರು ದೇವಿಗೆ ಹಣ್ಣು–ಕಾಯಿ ಅರ್ಪಿಸಿದರು.

ದೇಗುಲದ ಒಳಾಂಗಣದಲ್ಲಿ ಉತ್ಸವ ಪೂರ್ಣಗೊಳ್ಳುತ್ತಿದ್ದಂತೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿಯ ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗೆ ತೆಂಗಿನ ಕಾಯಿ ನೀವಾಳಿಸಿ, ಐದು ಈಡುಗಾಯಿ ಹೊಡೆದರು. ನಂತರ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತಿದ್ದ ಅರ್ಚಕ ವೃಂದ, ಮತ್ತೆ ದೇಗುಲದೊಳಕ್ಕೆ ಕೊಂಡೊಯ್ದಿತು.

ದೇಗುಲದ ಹೊರಭಾಗದಲ್ಲೇ ನೆರೆದಿದ್ದ ಜನಸ್ತೋಮ ದೂರದಿಂದಲೇ ದೇವಿಯ ಉತ್ಸವ ಮೂರ್ತಿಗೆ ಕೈ ಮುಗಿದು ನಮಿಸಿದ ಚಿತ್ರಣ ಗೋಚರಿಸಿತು.

ಸಂಪ್ರದಾಯದಂತೆ ಇನ್ನುಳಿದ ಉತ್ಸವ, ವಿಶೇಷ ಪೂಜೆ ಸೋಮವಾರ ದೇಗುಲದಲ್ಲಿ ನೆರವೇರಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು