ಗುರುವಾರ , ನವೆಂಬರ್ 14, 2019
18 °C
ಚಾಮುಂಡಿದೇವಿಯ ರಥೋತ್ಸವಕ್ಕೆ ಸಾಕ್ಷಿಯಾದ ಜನಸಾಗರ

ರಥೋತ್ಸವ | ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಮೂಹ

Published:
Updated:
Prajavani

ಮೈಸೂರು: ನಾಡಿನ ಅಧಿದೇವತೆ ಚಾಮುಂಡಿದೇವಿಯ ರಥೋತ್ಸವವು ಚಾಮುಂಡಿ ಬೆಟ್ಟದಲ್ಲಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಚಾಮುಂಡೇಶ್ವರಿಗೆ ಜಯವಾಗಲಿ... ಎಂಬ ಘೋಷಣೆ, ವಾದ್ಯಗೋಷ್ಠಿಗಳ ನಾದ, ಸಿಡಿಮದ್ದಿನ ಸದ್ದು, ಕಲಾ ತಂಡಗಳ ಪ್ರದರ್ಶನ ರಥೋತ್ಸವದ ರಂಗನ್ನು ಹೆಚ್ಚಿಸಿತು. ಸಾವಿರಾರು ಭಕ್ತರು ಒಕ್ಕೊರಲಿನಿಂದ ನಾಡದೇವತೆಗೆ ಜೈಕಾರ ಹೇಳಿದರು.

ಪ್ರತಿವರ್ಷ ದಸರಾ ಉತ್ಸವದ ಬೆನ್ನಲ್ಲೇ ನಡೆಯುವ ರಥೋತ್ಸವಕ್ಕೆ ಸಾಕ್ಷಿಯಾಗಲು ವಿವಿಧ ಕಡೆಗಳಿಂದ ಭಕ್ತರ ದಂಡು ಬೆಟ್ಟದ ಕಡೆಗೆ ಹರಿದುಬಂದಿತ್ತು. ರಥೋತ್ಸವಕ್ಕೆ ಪೂರ್ವಭಾವಿಯಾಗಿ ಬೆಳಿಗ್ಗೆ 5.30 ರಿಂದ ರುದ್ರಾಭಿಷೇಕ ಒಳಗೊಂಡಂತೆ ದೇವಿಗೆ ವಿಶೇಷ ಪೂಜೆ, ಮಂಟಪ ಉತ್ಸವ ನಡೆಯಿತು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಉತ್ಸವಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಉತ್ಸವಮೂರ್ತಿಯನ್ನು ನಿಧಾನವಾಗಿ ರಥದ ಮೇಲೆ ಏರಿಸಿದಾಗ ಭಕ್ತರು ಹರ್ಷೋದ್ಘಾರ, ಜಯಘೋಷ ಮೊಳಗಿಸಿದರು. ಯದುವೀರ ಅವರು ರಥದ ಹಗ್ಗ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದರು.

ವಿಶೇಷವಾಗಿ ಸಿಂಗರಿಸಿದ್ದ ರಥ ನಿಧಾನವಾಗಿ ಚಲಿಸಲು ಆರಂಭಿಸಿದಾಗ ಭಕ್ತರು ಪುಳಕಗೊಂಡರು. ರಥದ ಹಗ್ಗ ಎಳೆಯಲು ಪರಸ್ಪರ ಪೈಪೋಟಿಯೇ ನಡೆಯಿತು. ರಥ ಸಾಗುವ ಹಾದಿಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ಉತ್ಸವಮೂರ್ತಿಗೆ ಭಕ್ತಿಭಾವದಿಂದ ಕೈಮುಗಿದರು. ಹಣ್ಣು, ಜವನ ಎಸೆದು ಭಕ್ತಿ ಮೆರೆದರು.

ರಥ ಸಾಗುತ್ತಿದ್ದಾಗ ಅಲ್ಲಲ್ಲಿ ಸಿಡಿಮದ್ದು ಸಿಡಿಸಲಾಯಿತು. ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ರಥೋತ್ಸವ ವೀಕ್ಷಿಸಲು ದೇವಸ್ಥಾನದ ಸುತ್ತಮುತ್ತಲಿನ ಕಟ್ಟಡ, ಮನೆಗಳ ಮೇಲೆ ಜನರು ನಿಂತಿದ್ದರು. ರಸ್ತೆಯಲ್ಲಿ ಉಬ್ಬುತಗ್ಗು ಇರುವ ಕಡೆ ಮತ್ತು ಎರಡು ತಿರುವುಗಳಲ್ಲಿ ರಥ ಸಾಗಲು ಹೆಚ್ಚು ಸಮಯ ತೆಗೆದುಕೊಂಡಿತು.

ದೇವಾಲಯದ ಮುಖ್ಯದ್ವಾರದ ಬಳಿಯಿಂದ ಬೆಳಿಗ್ಗೆ 7ಕ್ಕೆ ಹೊರಟ ರಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಮುಖ್ಯದ್ವಾರದ ಬಳಿ ಬಂದು ನಿಂತಿತು. ಈ ವೇಳೆ ಗಂಟೆ 8 ಆಗಿತ್ತು. ರಥ ನಿಂತು ಒಂದು ಗಂಟೆ ಕಳೆದರೂ ಜನರು ಹಣ್ಣು, ಜವನ ಎಸೆದು ಭಕ್ತಿ ಮೆರೆಯುತ್ತಲೇ ಇದ್ದರು.

‘ಪುರಾಣ ಪವಿತ್ರ ಕ್ಷೇತ್ರ ಚಾಮುಂಡಿಬೆಟ್ಟದಲ್ಲಿ ನಡೆಯುವ ರಥೋತ್ಸವ ವಿಶೇಷವಾದುದು. ಬೆಳಿಗ್ಗೆ 6.48 ರಿಂದ 7.18ರ ಒಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ರಥೋತ್ಸವ ಜರುಗಿತು’ ಎಂದು ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್‌ ತಿಳಿಸಿದರು.

ಮೈಸೂರು ಅರಮನೆಗೂ ಚಾಮುಂಡಿಬೆಟ್ಟಕ್ಕೂ ಅವಿನಾಭಾವ ಸಂಬಂಧ ಇದೆ. ರಾಜವಂಶಸ್ಥರು ಬಂದು ರಥಕ್ಕೆ ಚಾಲನೆ ಕೊಡುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಎಂದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌, ಯದುವೀರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ, ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)