ಹರಕೆ ಹೊತ್ತವರಿಗಿಲ್ಲ ತೀರಿಸುವ ಭಾಗ್ಯ

7
ಚಾಮುಂಡೇಶ್ವರಿ ದೇಗುಲ; ಭಕ್ತರಿಗೆ ನಿರಾಸೆ

ಹರಕೆ ಹೊತ್ತವರಿಗಿಲ್ಲ ತೀರಿಸುವ ಭಾಗ್ಯ

Published:
Updated:
Deccan Herald

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಸಮೂಹ ದೇವಸ್ಥಾನಗಳ ನೌಕರರು ಶುಕ್ರವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಿಂದ ಭಕ್ತರು ಹರಕೆ ತೀರಿಸಲಾಗದೇ ನಿರಾಸೆಗೊಂಡಿದ್ದಾರೆ. ಕನಿಷ್ಠ ತೀರ್ಥ, ಹೂ ಪ್ರಸಾದವೂ ಸಿಗದೇ ಹೋದುದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೌಕರರು ದೇವಾಲಯದ ಗರ್ಭಗುಡಿಯ ಮುಂಭಾಗವೇ ಕುಳಿತು ಪ್ರತಿಭಟನೆ ನಡೆಸಿದ್ದು ಪೊಲೀಸರನ್ನು ಕೆರಳಿಸಿತು. ಭಕ್ತರ ದರ್ಶನಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂದು ಕೆ.ಆರ್.ಠಾಣೆ ಪೊಲೀಸರು ಅವರನ್ನು ತೆರವುಗೊಳಿಸಿದರು. ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂದು ತಾಕೀತು ಮಾಡಿದರು.

ವಿಶೇಷ ದರ್ಶನದ ವ್ಯವಸ್ಥೆ ಇರದೆ ಕೇವಲ ಧರ್ಮ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು ಹಿರಿಯರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ತೊಂದರೆಯಾಯಿತು. ಉದ್ದನೆಯ ಸಾಲುಗಳಲ್ಲಿ ನಿಲ್ಲಲಾಗದೇ ಹಲವು ಮಂದಿ ಬಸವಳಿದರು.

ಹರಕೆ ತೀರಿಸಲು ಬಂದವರು ನೌಕರರ ಪ್ರತಿಭಟನೆ ವಿರುದ್ಧ ಹರಿಹಾಯ್ದರು. ಬಹುದೂರದಿಂದ ಹರಕೆ ತೀರಿಸಲು ಇಲ್ಲಿಗೆ ಬಂದಿದ್ದೇವೆ. ಈಗ ಇವರು ಹರಕೆ ಸ್ವೀಕರಿಸುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.‌

ದೇವಿಗೆ ಸೀರೆ ತೊಡಿಸುವ, ಮಡಿಲಕ್ಕಿ ತುಂಬುವುದು ಸೇರಿದಂತೆ ವಿವಿಧ ಹರಕೆ ಹೊತ್ತವರು ಬೇರೆ ದಾರಿ ಕಾಣದೇ ಪರಿತಪಿಸಿದರು. ಅದರಲ್ಲೂ ದೇವರಿಗೆ ಸೀರೆ ಉಡಿಸಲು ತಂದವರು ಮರಳಿ ಸೀರೆಯನ್ನು ಮನೆಗೆ ಕೊಂಡೊಯ್ಯಬಾರದು ಎಂಬ ನಿಯಮದಿಂದ ಇಕ್ಕಟ್ಟಿಗೆ ಸಿಲುಕಿದರು. ಇದು ಸಹ ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.

‘ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಹಾಗೆಂದು ಭಕ್ತರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಕನಿಷ್ಠ ಹರಕೆಯನ್ನಾದರೂ ಒಪ್ಪಿಸಲು ಅವಕಾಶ ಮಾಡಿಕೊಡಬೇಕಿತ್ತು’ ಎಂದು ಬೆಂಗಳೂರಿನಿಂದ ಬಂದಿದ್ದ ಕನ್ನಿಕಾ ಅಸಮಾಧಾನ ವ್ಯಕ್ತಪಡಿಸಿದರು.

‘ನೌಕರರು ಪ್ರತಿಭಟನೆ ನಡೆಸುತ್ತಾರೆ. ಅದು ಅವರ ಹಕ್ಕು. ಹಾಗೆಯೇ, ದೇವರ ಪೂಜೆ ಮಾಡುವುದೂ ನಮ್ಮ ಹಕ್ಕು. ನಾವೇ ನೇರವಾಗಿ ಪೂಜೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ಕೊಡಬೇಕು. ಇಲ್ಲವೇ, ಅರ್ಚಕರನ್ನು ಪೂಜೆಗೆ ಕರೆತರಬೇಕು’ ಎಂದು ತುಮಕೂರಿನಿಂದ ಬಂದಿದ್ದ ವಾಸವಿ ಒತ್ತಾಯಿಸಿದರು.

ಶುಕ್ರವಾರ ತಾಯಿಗೆ ಶ್ರೇಷ್ಠ ಎಂಬ ಕಾರಣಕ್ಕೆ ರಜೆ ಹೊಂದಿಸಿಕೊಂಡು ಇಲ್ಲಿಗೆ ಬಂದಿದ್ದೇವೆ. ಈಗ ಪೂಜೆ ಮಾಡಿಸಲು ಆಗುವುದಿಲ್ಲ ಎಂದರೆ ಹೇಗೆ? ಎಂದು ಬೆಂಗಳೂರಿನಿಂದ ಬಂದಿದ್ದ ಪುನೀತಾ ಕಿಡಿಕಾರಿದರು.

ಇತ್ತ ಅರಮನೆಯಲ್ಲಿ ಮುಂಜಾನೆ ಪೂಜೆಯ ನಂತರ ಯಾವೊಂದು ದೇಗುಲಗಳ ಬಾಗಿಲು ತೆರೆಯಲಿಲ್ಲ. ಉತ್ತನಹಳ್ಳಿಯ ಜ್ವಾಲಮುಖಿ ತ್ರಿಪುರಸುಂದರಿತಾಯಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿಲ್ಲ.

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ಮಹಾಬಲೇಶ್ವರ ದೇಗುಲ, ಉತ್ತನಹಳ್ಳಿ ಜ್ವಾಲಮುಖಿ ತ್ರಿಪುರಸುಂದರಿತಾಯಿ ದೇಗುಲ, ಅರಮನೆಯಲ್ಲಿರುವ ದೇವಾಲಯಗಳು ಸೇರಿದಂತೆ ಒಟ್ಟು 24 ದೇವಸ್ಥಾನಗಳ 181 ಮಂದಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

ನೌಕರರ ಬೇಡಿಕೆಗಳೇನು?
ಶೇ 30ರಷ್ಟು ವೇತನ ಹೆಚ್ಚಳ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಕಾಯಂ ಆದೇಶ ಮಾಡಬೇಕು.

* ವಾರ್ಷಿಕ ಬೋನಸ್ ಪಾವತಿಸದಿರುವ ಬಗ್ಗೆ ಹಾಗೂ ಪ್ರತಿ ವರ್ಷ ಒಂದು ತಿಂಗಳ ಪೂರ್ತಿ ವೇತನವನ್ನು ಪಾವತಿಸಲು ಆದೇಶಿಸಬೇಕು.

* ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸಲು ತುರ್ತಾಗಿ ಆದೇಶ ಮಾಡಬೇಕು.

* ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ರಾಜ್ಯದ ಯಾವುದೇ ಇಲಾಖೆಯಲ್ಲಿ ನೌಕರಿ ನೀಡಬೇಕು.

* ದೇವಾಲಯದ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸಬೇಕು.

*ಮೃತ ನೌಕರರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬೇಕು.

* ನೌಕರರ ತಿಂಗಳ ವೇತನವನ್ನು ಬೆಟ್ಟದ ಶಾಖೆಯ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಬಟಾವಡೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು.

ಇಂದಿನಿಂದ ಉಪವಾಸ ಸತ್ಯಾಗ್ರಹ
ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತದಿಂದ ಯಾವುದೇ ಸಕರಾತ್ಮಕ ಸ್ಪಂದನೆ ದೊರೆಯದೇ ಇದ್ದುದ್ದರಿಂದ ಶನಿವಾರ ಉಪವಾಸ ಸತ್ಯಾಗ್ರಹ ನಡೆಸಲು ಚಾಮುಂಡೇಶ್ವರಿ ಅಮ್ಮನವರ ಹಾಗೂ ಸಮೂಹ ದೇವಸ್ಥಾನಗಳ ನೌಕರರ ಸಂಘ ನಿರ್ಧರಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಘದ ಕಾರ್ಯದರ್ಶಿ ವಿಶ್ವನಾಥ್, ‘ಇಂದು ಪ್ರತಿಭಟನೆ ಆರಂಭಿಸಿದ್ದೇವೆ. ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೇವಲ ಆಶ್ವಾಸನೆಯನ್ನಷ್ಟೇ ನೀಡುತ್ತಿದ್ದಾರೆ. ಹೀಗಾಗಿ, ಶನಿವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಭಕ್ತರಿಗೆ ನಿರಾಸೆಯಾಗುತ್ತಿರುವುದಕ್ಕೆ ನಿಜಕ್ಕೂ ನಮಗೆ ಬೇಸರ ಇದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !