ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜು.5 ರಂದು ಮೊದಲ ಆಷಾಢ ಶುಕ್ರವಾರ

ಅಗತ್ಯ ಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ
Last Updated 18 ಜೂನ್ 2019, 14:11 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2019ರ ಆಷಾಢ ಶುಕ್ರವಾರಗಳು ಹಾಗೂ ಅಮ್ಮನವರ ಜನ್ಮೋತ್ಸವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಕ್ರಮ ವಹಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಸೂಚನೆ ನೀಡಿದರು.

ಈ ಬಾರಿ ಜುಲೈ 5 ರಂದು ಮೊದಲನೇ ಆಷಾಢ ಶುಕ್ರವಾರ ನಡೆಯಲಿದೆ. ಜು. 12 ರಂದು ಎರಡನೇ ಆಷಾಢ ಶುಕ್ರವಾರ, ಜು.19 ರಂದು ಮೂರನೇ ಆಷಾಢ ಶುಕ್ರವಾರ, ಜು.26 ಕೊನೆಯ ಆಷಾಢ ಶುಕ್ರವಾರ ಹಾಗೂ ಜು.24 ರಂದು ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ವರ್ಧಂತಿ ಕಾರ್ಯಕ್ರಮ ನಡೆಯಲಿದ್ದು, ಬೆಟ್ಟಕ್ಕೆ ಹೆಚ್ಚಿನ ಭಕ್ತರು ಬರುವರು. ಈ ದಿನಗಳಂದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ತಿಳಿಸಿದರು.

ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್ ಬಳಿ ನಿಲ್ಲಿಸಬೇಕು. ಭಕ್ತರು ಅಲ್ಲಿಂದ ಬೆಟ್ಟಕ್ಕೆ ಬರಲು ಕೆಎಸ್‌ಆರ್‌ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಎರಡು ವಾಟರ್ ಪ್ರೂಫ್ ಪೆಂಡಾಲ್‌ಗಳನ್ನು ಅಳವಡಿಸಬೇಕು, ಭಕ್ತರ ಅನುಕೂಲಕ್ಕಾಗಿ ಹೆಲಿಪ್ಯಾಡ್ ಬಳಿ ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು ಎಂದು ಸೂಚಿಸಿದರು.

ಸರಗಳ್ಳತನ, ಜೇಬುಗಳ್ಳತನ ಮುಂತಾದ ಅಹಿತಕರ ಘಟನೆಗಳನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ ವಿದ್ಯುದ್ದೀಪಗಳ ವ್ಯವಸ್ಥೆಗಳನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಾಡಬೇಕೆಂದು ತಿಳಿಸಿದರು.

ಭಕ್ತರಿಗೆ ಅಗತ್ಯಬಿದ್ದರೆ ವೈದ್ಯಕೀಯ ಸೇವೆ ನೀಡಲು ಸಾಕಷ್ಟು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಚಾಮುಂಡಿ ಬೆಟ್ಟದಲ್ಲಿ ದಾಸೋಹ ಭವನದಲ್ಲಿ ನಡೆಯುವ ಪ್ರಸಾದ ವಿತರಣ ಕಾರ್ಯಕ್ರಮದ ಜೊತೆಗೆ ಭಕ್ತರು ಅಲ್ಲಲ್ಲಿ ಪ್ರಸಾದ ವಿತರಣೆ ಮಾಡುವುದರಿಂದ ಆಹಾರದ ಸುರಕ್ಷತೆಗೆ ಗಮನ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್, ಮುಡಾ ಸುಪರಿಂಟೆಂಡೆಂಟ್ ಎಂಜಿನಿಯರ್ ಸುರೇಶ್ ಬಾಬು, ಮೈಸೂರು ತಹಶೀಲ್ದಾರ್ ಮಹೇಶ್ ಕುಮಾರ್, ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ನರಗುಂದ್, ಎ.ಸಿ.ಪಿ. ಗಜೇಂದ್ರಪ್ರಸಾದ್ ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT