ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಅನಗತ್ಯ: ಸೋಮಶೇಖರ್ ನೇತೃತ್ವದ ಸಭೆಯಲ್ಲಿ ನಿರ್ಧಾರ

Last Updated 6 ಜುಲೈ 2022, 8:55 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟವನ್ನು ಶ್ರದ್ಧಾ ಕೇಂದ್ರವನ್ನಾಗಿಯೇ ಕಾಪಾಡಿಕೊಳ್ಳಬೇಕು; ಅಲ್ಲಿಗೆ ‘ರೋಪ್‌ ವೇ’ ಯೋಜನೆ ಅಗತ್ಯವಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು.

ಬೆಟ್ಟದಲ್ಲಿ ರೋಪ್‌ವೇ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ವರದಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ರೋಪ್‌ ವೇಗೆ ಬಹುತೇಕರಿಂದ ವಿರೋಧ ವ್ಯಕ್ತವಾಯಿತು. ಇದನ್ನು ಸರ್ಕಾರಕ್ಕೆ ತಿಳಿಸಲು ನಿರ್ಣಯಿಸಲಾಯಿತು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ‘ಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ. ಅಲ್ಲಿಗೆ ರಸ್ತೆ ಸೌಕರ್ಯವಿದೆ. ಮೆಟ್ಟಿಲು ಮಾರ್ಗವೂ ಇದೆ. ಬೆಟ್ಟವು ಪವಿತ್ರ ಸ್ಥಳ. ಅಲ್ಲಿನ ಅರಣ್ಯವನ್ನು ರಕ್ಷಿಸಬೇಕಾದ ಹೊಣೆಯೂ ನಮ್ಮೆಲ್ಲರದಾಗಿದೆ. ರೋಪ್‌ವೇಯಿಂದ ಎಲ್ಲದಕ್ಕೂ ತೊಂದರೆ ಆಗುತ್ತದೆ’ ಎಂದು ಹೇಳಿದರು.

ಪ್ರವಾಸಕ್ಕಾಗಿ ಬರುವುದಿಲ್ಲ:ದನಿಗೂಡಿಸಿದ ಸಂಸದ ಪ್ರತಾಪ ಸಿಂಹ, ‘ಬೆಟ್ಟಕ್ಕೆ ಜನರು ಭಕ್ತಿಯಿಂದ ಬರುತ್ತಾರೆಯೇ ಹೊರತು ಪ್ರವಾಸಕ್ಕಾಗಿ ಅಲ್ಲ. ಅದನ್ನು ಭಕ್ತಿ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ಕಾಪಾಡಿಕೊಳ್ಳಬೇಕು. ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿ‍ಪಡಿಸುವುದಕ್ಕೆ ಇತರ ಬಹಳಷ್ಟು ತಾಣಗಳಿವೆ. ಬೆಟ್ಟಕ್ಕೆ ‘ಪ್ರಸಾದ’ ಯೋಜನೆಯಲ್ಲಿ ₹ 50 ಕೋಟಿ ಬರುತ್ತದೆ. ಅದರಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬಹುದು. ಚಾಮುಂಡಿಬೆಟ್ಟವು ಇತರ ರೀತಿಯ ಬೆಟ್ಟಗಳಂತಲ್ಲ. ಅದನ್ನು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಮೈಸೂರು ಟ್ರಾವೆಲ್ಸ್ ಸಂಘದ ಗೌರವಾಧ್ಯಕ್ಷ ಬಿ.ಎಸ್. ಪ್ರಶಾಂತ್‍, ‘ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಬೆಟ್ಟಕ್ಕೆ ರೋಪ್‌ವೇ ಅಗತ್ಯವಿದೆ. ಬೆಟ್ಟಕ್ಕೆ ಹೋಗುವ ವಾಹನಗಳಿಂದ ಮಾಲಿನ್ಯ ಉಂಟಾಗುತ್ತಿದ್ದು, ರೋಪ್‌ ವೇಯಿಂದ ಅದನ್ನ ತಪ್ಪಿಸಬಹುದು. ರೋಪ್‌ವೇ ಬೇಡವೆನ್ನುವ ಬದಲಿಗೆ ಪರಿಣತರು, ತಜ್ಞರ ಅಭಿಪ್ರಾಯ ಪಡೆದು ವಿದೇಶದ ಪ್ರವಾಸಿ ತಾಣಗಳಂತೆ ಅಭಿವೃದ್ಧಿಪಡಿಸಬಹುದು. ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು:ಪ್ರತಿಕ್ರಿಯಿಸಿದ ಪ್ರತಾಪ, ‘ಬೆಟ್ಟವು ಭಕ್ತಿಗೆ ಸೀಮಿತವಾಗಿ ಉಳಿಯಲಿ. ಈ ವಿಷಯವನ್ನು ಸಂವೇದನೆಯಿಂದ‌ ನೋಡಬೇಕಾಗುತ್ತದೆ. ಅಲ್ಲಿನ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಇಡೀ ಬೆಟ್ಟಕ್ಕೆ ಕಾಂಪೌಂಡ್ ಕಟ್ಟುವ ಯೋಚನೆಯೂ ಇದೆ’ ಎಂದರು.

‘ಬೆಟ್ಟದ ಮೇಲೆ ಲಂಗು–ಲಗಾಮಿಲ್ಲದೆ ಮನೆಗಳನ್ನು ಕಟ್ಟಲಾಗುತ್ತಿದೆ. ಜೆಸಿಬಿ ಬಳಸಲಾಗುತ್ತಿದೆ. ಇದರಿಂದ ಬೆಟ್ಟಕ್ಕೆ ತೊಂದರೆ ಆಗುತ್ತಿದೆ. ಇದಕ್ಕೆ ತಡೆ ಹಾಕಬೇಕು. ನಂಜನಗೂಡು ರಸ್ತೆ ಕಡೆಯಿಂದ ಬೆಟ್ಟಕ್ಕೆ ಹೋದರೆ ಮರುಕ ಉಂಟಾಗುತ್ತದೆ’ ಎಂದು ತಿಳಿಸಿದರು.

‘ಬೆಟ್ಟದಲ್ಲಿರುವವರು ಹೊಸದಾಗಿ ಮನೆ ಕಟ್ಟಲು ಕೆಳಗಡೆ ನಿರ್ದಿಷ್ಟ ಜಾಗ ಗುರುತಿಸಿ ಅನುವು ಮಾಡಿಕೊಡಬೇಕು. ಕಂದಾಯ ಇಲಾಖೆಯ ಜಾಗದಲ್ಲಿ ನಾಲ್ಕು ಎಕರೆ ಮೀಸಲಿಡಬೇಕು’ ಎಂದು ದೇವೇಗೌಡ ಕೋರಿದರು.

‘ಈ ಸಂಬಂಧ ಜಿ.ಪಂ ಪ್ರಸ್ತಾವ ಸಲ್ಲಿಸಿದರೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

‘ಬೆಟ್ಟದಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಬೇಕು’ ಎಂಬ ಅಭಿ‍ಪ್ರಾಯ ವ್ಯಕ್ತವಾಯಿತು.

‘ಚಾಮುಂಡಿಬೆಟ್ಟಕ್ಕೆ ಪ್ರತ್ಯೇಕ ‍ಪ್ರಾಧಿಕಾರ ರಚಿಸಬೇಕು’ ಎಂದು ಪ್ರತಾಪ ಹಾಗೂ ದೇವೇಗೌಡ ಸಲಹೆ ನೀಡಿದರು. ‘ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಪ್ರತಿಕ್ರಿಯಿಸಿದರು.

ಶಾಸಕ ಅಶ್ವಿನ್ ಕುಮಾರ್, ಮೇಯರ್‌ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ, ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪಾಲ್ಗೊಂಡಿದ್ದರು.

ಚಾಮುಂಡಿಬೆಟ್ಟಕ್ಕೆ ಬರುವವರು ಸಾಹಸಕ್ಕಾಗಿ ಬರುವುದಿಲ್ಲ. ದೇವಿಯ ದರ್ಶನಕ್ಕಾಗಿ ಬರುತ್ತಾರೆ. ಅದನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ನೋಡಬಾರದು
- ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ

ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಬೇರಾವುದಾದರೂ ಬೆಟ್ಟದಲ್ಲಿ ರೋಪ್ ವೇ ಯೋಜನೆಗೆ ಪರಿಶೀಲಿಸಬಹುದು
- ಆರ್. ಚೇತನ್, ಎಸ್ಪಿ

ಹಿಂದೆಯೂ ಪ್ರಸ್ತಾವ ಇತ್ತು. 2013ರಲ್ಲೇ ರದ್ದಾಗಿದೆ. ಒಳ್ಳೆಯ ಸಂಪರ್ಕ ಸೌಲಭ್ಯ ಇರುವುದರಿಂದ ಚಾಮುಂಡಿಬೆಟ್ಟಕ್ಕೆ ರೋಪ್ ವೇ ಬೇಕಿಲ್ಲ
- ಕಮಲಾ ಕರಿಕಾಳನ್, ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT