ಮಂಗಳವಾರ, ನವೆಂಬರ್ 12, 2019
26 °C
ಮುಖಾಮುಖಿಯಾಗದ ವಿಶ್ವನಾಥ್, ಸಾ.ರಾ.ಮಹೇಶ್; ಭಕ್ತರಿಗೆ ಮನರಂಜನೆ

ಚಾಮುಂಡಿಬೆಟ್ಟದಲ್ಲಿ ಆಣೆ–‍‍ಪ್ರಮಾಣ ಪ್ರಹಸನ

Published:
Updated:
Prajavani

ಮೈಸೂರು: ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಹಾಗೂ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರ ಆಣೆ–ಪ್ರಮಾಣ ಪ್ರಹಸನಕ್ಕೆ ಗುರುವಾರ ಚಾಮುಂಡಿಬೆಟ್ಟ ಸಾಕ್ಷಿಯಾಯಿತು.

ಪ್ರಮಾಣದ ಪಂಥಾಹ್ವಾನ ನೀಡಿದ್ದ ಇಬ್ಬರ ಅಬ್ಬರವೂ ಚಾಮುಂಡೇಶ್ವರಿಯ ದರ್ಶನಕ್ಕಷ್ಟೇ ಸೀಮಿತವಾಯಿತು. ಪ್ರತ್ಯೇಕವಾಗಿ ಪೂಜೆ ಸಲ್ಲಿಸಿ ಹೊರ ಬಂದ ಅವರು ಪರಸ್ಪರ ಮುಖ ನೋಡದೇ ವಾಪಸ್ಸಾದರು.

ಒಬ್ಬರ ನಂತರ ಒಬ್ಬರು ಪರಸ್ಪರ ದೋಷಾರೋಪ ಮಾಡಿದ ಪರಿ ಹಾಗೂ ಬಿಗಿ ಪೊಲೀಸ್‌ ಭದ್ರತೆಯಿಂದ ಭಕ್ತಾದಿಗಳಿಗೆ ತೊಂದರೆಯಾಯಿತಾದರೂ, ಮಾಜಿ ಸಚಿವರಿಬ್ಬರ ಜಟಾಪಟಿಯು ಅವರಿಗೆ ಮನರಂಜನೆ ಒದಗಿಸಿತು.

ಮೊದಲು ಬೆಟ್ಟಕ್ಕೆ ಬಂದ ವಿಶ್ವನಾಥ್, ಪೂಜೆ ಸಲ್ಲಿಸಿ ಆವರಣಕ್ಕೆ ಬಂದು ನಿಂತರು. ಸ್ವಲ್ಪ ಹೊತ್ತಿನ ನಂತರ ಬಂದ ಸಾ.ರಾ.ಮಹೇಶ್, ವಿಶ್ವನಾಥ್ ಅವರತ್ತ ತಿರುಗಿಯೂ ನೋಡದೆ ದೇಗುಲ ಪ್ರವೇಶಿಸಿದರು. ಅವರಿಗಾಗಿ ಸುಮಾರು ಒಂದು ಗಂಟೆ ಕಾಲ ವಿಶ್ವನಾಥ್ ಹೊರಗೇ ಕಾದು ನಿಂತಿದ್ದರು.

ವಿಶ್ವನಾಥ್ ಹೇಳಿದ್ದೇನು?
* ಇಷ್ಟು ಹೊತ್ತಾದರೂ ದೇಗುಲದಿಂದ ಹೊರಬಾರದೆ ಬಚ್ಚಿಟ್ಟುಕೊಂಡಿದ್ದಾರೆ. ಮಹೇಶ್‌ ಪಲಾಯನವಾದಿ, ಹೇಡಿ.

* ನಾನಿಲ್ಲಿ ಆಣೆ ಪ್ರಮಾಣ ಮಾಡಲು ಬಂದಿಲ್ಲ

* ₹ 25 ಕೋಟಿಗೆ ಮಾರಾಟವಾಗಿದ್ದೇನೆ ಎಂದು ಆರೋಪಿಸಿರುವ ಮಹೇಶ್‌, ನನ್ನನ್ನು ಖರೀದಿಸಿದ ಭೂಪನನ್ನು ಕರೆದುಕೊಂಡು ಬರುವಂತೆ ಸವಾಲೆಸೆದಿದ್ದೆ. ಆತನನ್ನು ನೋಡಲು ಬಂದಿದ್ದೇನೆ

* ‘ಮಹೇಶ್‌ ಸಾವಿರ ಹೇಳುತ್ತಾರೆ. ಮಾಧ್ಯಮದವರೂ ಕೇಳುತ್ತೀರಿ. ಕೇಳಿದ ಎಲ್ಲರಿಗೂ ನಾನು ಆಣೆ ಮಾಡಲಾ? 

* ಜನರು ಏನಾದರೂ ಅಂದುಕೊಳ್ಳಲಿ. ನನ್ನ ಮನಸ್ಸು ಗಾಸಿಗೊಂಡಿದ್ದು, ಸಮಾಧಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ

* ಸಾ.ರಾ.ಮಹೇಶ್ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗುವುದು

ಸಾ.ರಾ.ಮಹೇಶ್ ಹೇಳಿದ್ದೇನು?

* ಇನ್ನು ಮುಂದೆ ವಿಶ್ವನಾಥ್ ಮುಖ ನೋಡುವುದಿಲ್ಲ

* ಆಣೆ ಮಾಡುವಂತೆ ಕರೆದಿದ್ದಕ್ಕಾಗಿಯೇ ಬಂದಿದ್ದೇನೆ.

* ವಿಶ್ವನಾಥ್ ಮಾರಾಟವಾಗಿದ್ದಾಗಿ ನಾನು ಸದನದಲ್ಲಿ ನೀಡಿದ ಹೇಳಿಕೆ ಸತ್ಯ ಎಂದು ಪ್ರಮಾಣ ಮಾಡಿದ್ದೇನೆ

* ನನ್ನಿಂದ ಜೆಡಿಎಸ್‌ಗೆ ದುರ್ಗತಿ ಬಂದಿತೋ ಅಥವಾ ವಿಶ್ವನಾಥ್ ಅವರ ವರ್ಗಾವಣೆ ದಂಧೆ, ಹಣದ ಆಸೆಯಿಂದ ಬಂದಿತೋ ಎಂದು ಪ್ರಮಾಣ ಮಾಡಬೇಕು.

* ನನ್ನನ್ನು ವೈಯಕ್ತಿಕವಾಗಿ ನಿಂದಿಸಿರುವುದು ಸರಿ ಹಾಗೂ ಸತ್ಯ ಎಂದು ವಿಶ್ವನಾಥ್ ಪ್ರಮಾಣ ಮಾಡಬೇಕು

* ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲೂ ಮನಸ್ಸಾಗುತ್ತಿಲ್ಲ

ಪ್ರತಿಕ್ರಿಯಿಸಿ (+)