ಚಾಮುಂಡಿಬೆಟ್ಟ; ಅಪಘಾತ ತಡೆಗೆ ಕ್ರಮವಿಲ್ಲ

7
ಹಿಟ್‌ ಅಂಡ್ ರನ್ ಪ್ರಕರಣದಲ್ಲಿ ಇಬ್ಬರ ಸಾವಿನಿಂದ ಪಾಠ ಕಲಿಯದ ಜಿಲ್ಲಾಡಳಿತ

ಚಾಮುಂಡಿಬೆಟ್ಟ; ಅಪಘಾತ ತಡೆಗೆ ಕ್ರಮವಿಲ್ಲ

Published:
Updated:
Deccan Herald

ಮೈಸೂರು: ಚಾಮುಂಡಿಬೆಟ್ಟದಲ್ಲಿ ಹಿಟ್‌ ಅಂಡ್‌ ರನ್ ಪ್ರಕರಣ ಆಗಿ 27 ದಿನಗಳು ಕಳೆದರೂ ತನಿಖೆಯಲ್ಲಾಗಲಿ, ಅಪಘಾತ ತಡೆಯುವಿಕೆಯಲ್ಲಾಗಲಿ ಯಾವುದೇ ‍ಪ್ರಗತಿ ಕಂಡು ಬಂದಿಲ್ಲ. ಬೈಕ್‌ಗೆ ಡಿಕ್ಕಿ ಹೊಡೆದ ಹುಂಡೈ ಕ್ರೇಟಾ ಕಾರು ನಿಗೂಢ ರಹಸ್ಯದಂತೆ ಪೊಲೀಸರನ್ನು ಕಾಡುತ್ತಿದೆ.

ಜುಲೈ 5ರಂದು ರಾತ್ರಿ 7 ಗಂಟೆ ಸುಮಾರಿನಲ್ಲಿ ಚಾಮುಂಡಿಬೆಟ್ಟದ ವಾಚ್‌ ಟವರ್ ಜಂಕ್ಷನ್ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್‌ ಚಾಲನೆ ಮಾಡುತ್ತಿದ್ದ ಅರವಿಂದ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹಿಂಬದಿ ಕುಳಿತಿದ್ದ ಎಂ.ಸಿ.ನಮನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ನಮನಾ ಅವರ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ನಂತರ ಈ ಪ್ರಕರಣ ಭಾರಿ ಮಹತ್ವ ಪಡೆದಿತ್ತು.

ಸಿ.ಸಿ. ಟಿ.ವಿ ಕ್ಯಾಮೆರಾಗಳ ಪ‍ರಿಶೀಲನೆ, ಮೊಬೈಲ್ ಟವರ್‌ಗಳಲ್ಲಿ ದಾಖಲಾದ ಕರೆಗಳು, ಅಪಘಾತ ಸಂಭವಿಸಿದಾಗ ಹಿಂದೆ ಬರುತ್ತಿದ್ದ ಬಸ್‌ನ ಚಾಲಕ ಮತ್ತು ಕಂಡಕ್ಟರ್‌ ಅವರ ವಿಚಾರಣೆ, ಗ್ಯಾರೇಜ್‌ಗಳಿಗೆ ರಿಪೇರಿಗಾಗಿ ಬಂದ ಕಾರಿನ ಪರಿಶೀಲನೆ... ಹೀಗೆ ಪೊಲೀಸರು ಹರಸಾಹಸ ಪಟ್ಟು ತನಿಖೆ ನಡೆಸಿದರೂ ಅಪಘಾತ ನಡೆಸಿದವರು ಯಾರು ಎಂಬುದು ಪತ್ತೆಯಾಗಿಲ್ಲ.

ಮತ್ತು ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಕಾರು ಬೆಂಗಳೂರು ಕಡೆಗೆ ಹೋಗಿರುವ ಮಾಹಿತಿ ಆಧರಿಸಿ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರಗಳಲ್ಲಿ ಆ ಸಮಯದಲ್ಲಿ ಹಾದು ಹೋಗಿರಬಹುದಾದ ಕ್ರೇಟಾ ಕಾರಿನ ಸಂಖ್ಯೆಯನ್ನು ಪತ್ತೆ ಹಚ್ಚಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು. ನಾಲ್ಕು ವಿವಿಧ ತಂಡಗಳಲ್ಲಿ ಹುಂಡೈ ಕ್ರೇಟಾ ಕಾರಿನ ಬೆನ್ನು ಬಿದ್ದರು. ಆದರೆ, ಯಾವುದೇ ಗಮನಾರ್ಹ ಪ್ರಗತಿ ಕಂಡು ಬಂದಿಲ್ಲ.

ಒಂದೆಡೆ ಆರೋಪಿ ಪತ್ತೆಯಾಗಿಲ್ಲದೇ ಇದ್ದರೆ ಮತ್ತೊಂದೆಡೆ ಅಪಘಾತ ತಡೆಗೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಅಪಘಾತಕ್ಕೆ ಕಾರಣವಾಗಿರುವ ಬಹು ಮುಖ್ಯ ಅಂಶಗಳನ್ನು ಪರಿಗಣಿಸಿ ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಲು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವುದನ್ನು ವಿವಿಧ ಇಲಾಖೆಗಳು ಗಂಭೀರವಾಗಿ ಪರಿಗಣಿಸಿಲ್ಲ.

ಚಾಮುಂಡಿಬೆಟ್ಟದ ಪಾದದಿಂದ ಬೆಟ್ಟಕ್ಕೆ ಸಂಪರ್ಕ ಬೆಸೆಯುವ 8 ಕಿ.ಮೀ ಉದ್ದದ ರಸ್ತೆಯಲ್ಲಿ ಬಹಳಷ್ಟು ಕಡಿದಾದ ತಿರುವುಗಳಿವೆ. ಇಂತಹ ತಿರುವುಗಳೇ ಅಪಘಾತಕ್ಕೆ ಮುಖ್ಯ ಕಾರಣ. ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳಬೇಕಾದವರು ಯಾರು ಎಂಬ ಪ್ರಶ್ನೆ ಇದೀಗ ಶುರುವಾಗಿದೆ. ಸಂಚಾರ ಪೊಲೀಸರು ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ರಸ್ತೆ ಉಬ್ಬುಗಳಿಲ್ಲ. ದೀಪ ಆರಿಸಿ, ವಾಹನವನ್ನು ಆಫ್‌ ಮಾಡಿ ಇಳಿಜಾರಿನಲ್ಲಿ ವೇಗವಾಗಿ ಬರುವುದು ಅಪಘಾತಕ್ಕೆ ಕಾರಣ. ಇದನ್ನು ತಡೆಯಬೇಕಾದವರು ಗ್ರಾಮ ಪಂಚಾಯಿತಿ ಕೆಲಸ ಎನ್ನುತ್ತಾರೆ.

ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ, ಗ್ರಾಮ ಠಾಣಾ ಒಳಗೆ ಬೀದಿದೀಪ ಅಳವಡಿಸಲು ಅಥವಾ ಇನ್ನಾವುದೇ ಕಾರ್ಯಕ್ರಮ ಕೈಗೊಳ್ಳಲು ಮಾತ್ರವೇ ಅವಕಾಶ ಇದೆ. ಈ ರಸ್ತೆ ಗ್ರಾಮಠಾಣಾದಿಂದ ಹೊರಗೆ ಇದೆ. ಇದನ್ನು ಕೋಟ್ಯಂತರ ರೂಪಾಯಿ ಆದಾಯ ಹೊಂದಿರುವ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರೇ ಮಾಡಲಿ ಎಂದು ಅವರತ್ತ ಕೈ ತೋರುತ್ತಾರೆ.

ಇತ್ತ ಆಡಳಿತ ಮಂಡಳಿಯವರನ್ನು ವಿಚಾರಿಸಿದರೆ ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ ಎಂದು ಕೈ ತೊಳೆದುಕೊಳ್ಳುತ್ತಾರೆ. ಒಟ್ಟಾರೆ, ವಿವಿಧ ಇಲಾಖೆಗಳ ಸಹಭಾಗಿತ್ವದ ಕೊರತೆಯಿಂದ ಅಪಘಾತಗಳ ತಡೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧಾರ್ಥನಗರ ಸಂಚಾರ ಇನ್‌ಸ್ಪೆಕ್ಟರ್ ಮುನಿಯಪ್ಪ, ‘ಅಪಘಾತ ನಡೆಸಿದ ಕಾರು ಪತ್ತೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತನಿಖೆ ಮುಂದುವರಿದಿದೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಸಾರ್ವಜನಿಕರು ಬೆಟ್ಟ ಹತ್ತುವಾಗ ಹಾಗೂ ಇಳಿಯುವಾಗ ವೇಗ ನಿಯಂತ್ರಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !