ಚಾಮುಂಡಿಪುರಂ: ಅಭಿವೃದ್ಧಿ ನಾಗಾಲೋಟ

7

ಚಾಮುಂಡಿಪುರಂ: ಅಭಿವೃದ್ಧಿ ನಾಗಾಲೋಟ

Published:
Updated:
Deccan Herald

ಉತ್ತಮ ರಸ್ತೆಗಳು, ಈಚೆಗಷ್ಟೇ ನಿರ್ಮಿಸಲಾದ ಮೋರಿಗಳು, ಮನೆಮನೆಗೆ ಕುಡಿಯುವ ನೀರು, ಕಣ್ಣಿಗೆ ಕಾಣುವ ಸ್ವಚ್ಛತೆ, ರಸ್ತೆ ಬದಿಗಳಲ್ಲಿ ಬೃಹತ್‌ ಮರಗಳು, ಚಿಕ್ಕ–ಚೊಕ್ಕ ಉದ್ಯಾನಗಳು... ಇದು ಚಾಮುಂಡಿಪುರಂಗೆ ಹೋದರೆ ಕಾಣುವ ದೃಶ್ಯ.

ಚಾಮುಂಡಿಪುರಂ ಮೈಸೂರಿನ ಹಳೆಯ ಬಡಾವಣೆಗಳಲ್ಲಿ ಒಂದು. ಹಿಂದೆ ಕಸ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ನಲುಗಿದ್ದ ಈ ಬಡಾವಣೆಯಲ್ಲಿ 10 ವರ್ಷಗಳಲ್ಲಿ ಅಭಿವೃದ್ಧಿಯ ಗಾಳಿ ಬೀಸಿದೆ ಎನ್ನುವುದು ನಾಗರಿಕರ ಅಭಿಮತ.

ವಾರ್ಡ್‌ ನಂ–6 ರ ವ್ಯಾಪ್ತಿಯಲ್ಲಿ ಚಾಮುಂಡಿಪುರಂ, ವಿದ್ಯಾರಣ್ಯಪುರಂ 1, 2ನೇ ಮುಖ್ಯರಸ್ತೆ, ಅಡ್ಡ ರಸ್ತೆಗಳು, 3ನೇ ಮುಖ್ಯರಸ್ತೆ, 4ನೇ ಮುಖ್ಯರಸ್ತೆ, ಮೇದರಕೇರಿ, ಹೊಸಬಂಡಿಕೇರಿಯ ಸ್ವಲ್ಪ ಭಾಗಗಳು ಬರುತ್ತವೆ. ಸದ್ಯ ಈ ವ್ಯಾಪ್ತಿಯಲ್ಲಿ ಅಂದಾಜು 14,000 ಜನಸಂಖ್ಯೆ ಇದೆ.

ಇಲ್ಲಿಯ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್‌ ಅವರು 2ನೇ ಬಾರಿಗೆ ಈ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಪ್ರಸ್ತುತ ಪಾಲಿಕೆ ಚುನಾವಣೆಯಲ್ಲಿ ಮೈಸೂರಿನಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ವಿಜಯಿಯಾಗಿರುವ ಇವರು ಮನೆಯಲ್ಲೇ ತಮ್ಮ ಕಚೇರಿಯನ್ನೂ ತೆರೆದಿದ್ದಾರೆ. ಜನರು ಯಾವುದೇ ಸಮಸ್ಯೆಗಳಿದ್ದರೂ ಇಲ್ಲಿ ಬಂದು ತಿಳಿಸಬಹುದು, ಇಲ್ಲಿಂದಲೇ ಪಾಲಿಕೆಯ ಸೌಲಭ್ಯ, ಯೋಜನೆಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕಚೇರಿಯಲ್ಲಿರುವ ಇಬ್ಬರು ಸಿಬ್ಬಂದಿ ಇದ್ದು ಜನರ ಸಮಸ್ಯೆಗಳನ್ನು ಕೇಳಿ ದಾಖಲು ಮಾಡಿಕೊಳ್ಳುವಂತೆಯೂ ಮಾಡಿದ್ದಾರೆ.

₹ 2.6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ

ನಗರದ ಪ್ರಮುಖ ರಸ್ತೆಯಾದ ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆ (ಜೆ.ಎಲ್‌.ಬಿ)ಯ ಅಭಿವೃದ್ಧಿ ಕಾರ್ಯ ಈ ಅವಧಿಯ ಪ್ರಮುಖ ಕಾಮಗಾರಿ. ₹ 2.6 ಕೋಟಿ ವೆಚ್ಚದಲ್ಲಿ ಶ್ರೀನಿವಾಸ ವೃತ್ತದಿಂದ ಕಂಸಾಳೆ ಮಾದಯ್ಯ ವೃತ್ತದವರೆಗೆ ಈ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು, ಕಾಮಗಾರಿ ಈಗ ಮುಕ್ತಾಯದ ಹಂತದಲ್ಲಿದೆ.

₹ 60 ಲಕ್ಷ ವೆಚ್ಚದಲ್ಲಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ರಾಮಲಿಂಗೇಶ್ವರ ದೇವಸ್ಥಾನದಿಂದ ನಂಜುಮಳಿಗೆ ವೃತ್ತದವರೆಗೆ ಪಾರಂಪರಿಕ ದೀಪದ ಕಂಬಗಳನ್ನು ಹಾಕಿಸಿ ಬಡಾವಣೆ ಸುಂದರಗೊಳಿಸಲು ಯತ್ನಿಸಲಾಗಿದೆ. ಶೇ 90ರಷ್ಟು ಚರಂಡಿಗಳ ನಿರ್ಮಾಣ ಆಗಿದೆ. ₹ 50 ಲಕ್ಷ ವೆಚ್ಚದಲ್ಲಿ ಮಳೆ ನೀರಿನ ಚರಂಡಿಯನ್ನು ಮರುನಿರ್ಮಾಣ ಮಾಡಲಾಗುತ್ತಿದೆ. ಅಮೃತ್‌ ಯೋಜನೆಯ ಅಡಿ 24x7 ಕುಡಿಯುವ ನೀರು ಒದಗಿಸುವ ಕಾಮಗಾರಿಯೂ ನಡೆಯುತ್ತಿದೆ.

ಸ್ನೇಕ್‌ ಪಾರ್ಕ್‌ಗೆ ಬರಲಿದೆ ಸಂಗೀತ ಕಾರಂಜಿ

ಇಲ್ಲಿಯ ಸ್ನೇಕ್ ಪಾರ್ಕ್‌ ಸ್ಥಳೀಯ ಮಹಿಳೆಯರ ನೆಚ್ಚಿನ ವಾಕಿಂಗ್‌ ತಾಣ. ಇದರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ವಾಕಿಂಗ್‌ ಪಾಥ್‌, ಶಿವನ ಮೂರ್ತಿ, ಅದರ ಹಿಂದೆ ಹಾವು, ಹಾವಿನ ಹೆಡೆಯಿಂದ ನೀರಿನ ಝರಿ ಹರಿದುಬರುವಂತಹ ದೃಶ್ಯ ನಿರ್ಮಾಣ ಮಾಡಲಾಗಿದೆ. ₹ 60 ಲಕ್ಷ ವೆಚ್ಚದಲ್ಲಿ ಇಲ್ಲಿ ಸಂಗೀತ ಕಾರಂಜಿ ಹಾಗೂ ಸಿಮೆಂಟ್‌ ಬೆಂಚ್‌ಗಳನ್ನು ಅಳವಡಿಸುವ ಕಾರ್ಯ ಆರಂಭಗೊಂಡಿದೆ.

ತಗಡೂರು ರಾಮಚಂದ್ರರಾವ್ ಉದ್ಯಾನ ಹಿರಿಯ ನಾಗರಿಕರ ನೆಚ್ಚಿನ ತಾಣ. ಇಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದ್ದು, ಪ್ರತಿ ತಿಂಗಳೂ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇಲ್ಲಿ ರೇಡಿಯೊ ಅಳವಡಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕೆನ್ನುವ ಉದ್ದೇಶ ಇರುವುದಾಗಿ ರಾಮಪ್ರಸಾದ್‌ ತಿಳಿಸಿದರು. ರಾಮಲಿಂಗೇಶ್ವರ ಉದ್ಯಾನ ಹಾಗೂ ಇನ್ನೂ ಕೆಲವು ಚಿಕ್ಕ ಪಾರ್ಕ್‌ಗಳು ಇಲ್ಲಿವೆ. ಪೌರಕಾರ್ಮಿಕರೇ ಈ ಬಡಾವಣೆಯ ಉದ್ಯಾನಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. 

ಜನರಿಗೆ ತಲುಪಿದ ಯೋಜನೆಗಳು

32 ಬಿ.ಇ ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ (ಆರ್ಥಿಕ ಹಿಂದುಳಿದವರಿಗೆ) ಪಾಲಿಕೆ ಅನುದಾನದಿಂದ ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಇನ್ನೂ 12 ಮಂದಿಗೆ ಸಿಗಲಿದೆ. 110 ಮಂದಿಗೆ ಹೊಲಿಗೆ ಯಂತ್ರ, 12 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. 18 ಮಂದಿಗೆ ಪಕ್ಕಾ ಮನೆ ಸೌಲಭ್ಯ ದೊರಕಿದೆ. ಇದರಲ್ಲಿ ₹ 1 ಲಕ್ಷ ಸಹಾಯಧನ ಒದಗಿಸಲಾಗುತ್ತದೆ. ವಾಜಪೇಯಿ ನಗರ ವಸತಿ ಯೋಜನೆಯ ಅಡಿ 80 ಮಂದಿಗೆ ಸೌಲಭ್ಯ ಸಿಕ್ಕಿದೆ. 26 ಮಂದಿಗೆ ಸ್ವ ಉದ್ಯೋಗಕ್ಕಾಗಿ ಸೌಲಭ್ಯ ಒದಗಿಸಲಾಗಿದೆ. ಆಟೊ ಕೊಳ್ಳಲು 16 ಮಂದಿಗೆ ಸಾಲ ಸೌಲಭ್ಯ ನೀಡಲಾಗಿದೆ. ಈ ಯೋಜನೆಯ ಅಡಿ ₹ 1 ಲಕ್ಷ ಸಬ್ಸಿಡಿ ಸಿಕ್ಕರೆ, ಇನ್ನು ₹ 1 ಲಕ್ಷ ಸಾಲವನ್ನು ಬ್ಯಾಂಕ್ ನೀಡುತ್ತದೆ.

562 ಮಂದಿಗೆ ಸಂಧ್ಯಾ ಸುರಕ್ಷಾ, 200 ಎಸ್ಸೆಸ್ಸೆಲ್ಸಿ–ಪಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. 422 ಮಂದಿಗೆ ಅಡುಗೆ ಅನಿಲ ಸಂಪರ್ಕ, ನೂರಾರು ಮಂದಿಗೆ 5,000-10,000ದವರೆಗೆ ವೈದ್ಯಕೀಯ ವೆಚ್ಚ ನೀಡಲಾಗಿದೆ. 240 ಕುಟುಂಬಗಳಿಗೆ ಸೋಲಾರ್ ದೀಪಗಳನ್ನು ನೀಡಲಾಗಿದೆ. ಮೇದರಕೇರಿ ಬಳಿ ಹಾಗೂ ಜೆಎಲ್‌ಬಿ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ಉಚಿತ ಸಾರ್ವಜನಿಕ ಶೌಚಾಲಯ ಹಾಗೂ ಒಂದು ಇ-ಶೌಚಾಲಯವೂ ಇದೆ.

ಎರಡು ವರ್ಷಗಳ ಹಿಂದೆ ವಾಚನಾಲಯ ಆರಂಭಿಸಲಾಗಿದ್ದು, ಅಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ. ದಿನಪತ್ರಿಕೆಗಳು, ನಿಯತಕಾಲಿಕೆಗಳು ಬರುತ್ತಿವೆ. ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಸಂಗ್ರಹವೂ ಇದೆ. ಯಾವ ಪುಸ್ತಕ ಬೇಕೆಂಬ ಬಗ್ಗೆ ಬೇಡಿಕೆ ಇಟ್ಟರೆ ಅದನ್ನೂ ತರಿಸಿಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿ ಒಂದು ಕೊಠಡಿಯಲ್ಲಿ ಇ–ಲೈಬ್ರರಿ ಮಾಡುವ ಯೋಚನೆಯೂ ಇದೆ ಎಂದು ರಾಮಪ್ರಸಾದ್‌ ತಿಳಿಸಿದರು.

ಚಿತ್ರಗಳು: ಬಿ.ಆರ್‌.ಸವಿತಾ

 

 

 

 

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !