ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ವಸೂಲಿ ವಿಧಾನ ಬದಲಾವಣೆಯತ್ತ ಒಲವು ತೋರಿದ ಡಾ.ಚಂದ್ರಗುಪ್ತ

ದಂಡ ವಸೂಲಿ ನಮ್ಮ ಉದ್ದೇಶ ಅಲ್ಲ, ಎಲ್ಲವೂ ಸರಿ ಇದೆ ಎಂದೂ ಹೇಳುವುದಿಲ್ಲ– ಕಮಿಷನರ್
Last Updated 27 ಮಾರ್ಚ್ 2021, 2:08 IST
ಅಕ್ಷರ ಗಾತ್ರ

ಮೈಸೂರು: ಬೋಗಾದಿ– ಹಿನಕಲ್ ರಿಂಗ್‌ರಸ್ತೆಯಲ್ಲಿ ಈಚೆಗೆ ನಡೆದ ಅಪಘಾತ, ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳ ನಂತರ ಸಂಚಾರ ಪೊಲೀಸರ ದಂಡ ವಸೂಲಾತಿ ವಿಧಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.

ವಾಹನ ದಟ್ಟಣೆ ಇದ್ದಾಗ ತಪಾಸಣೆ ಮಾಡಲೇಬಾರದು, ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಹಾಗೂ ಅದಕ್ಕೂ ಮೇಲಿನ ಅಧಿಕಾರಿಗಳಿಗೆ ಮಾತ್ರ ದಂಡ ವಸೂಲಾತಿಯ ಅಧಿಕಾರ ನೀಡುವುದು ಸೇರಿದಂತೆ ಹಲವು ಬದಲಾವಣೆಗಳ ಪ್ರಸ್ತಾವಗಳನ್ನು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ‘ಮಾಧ್ಯಮ ಸಂವಾದ’ದಲ್ಲಿ ಸುದ್ದಿಗಾರರ ಮುಂದಿರಿಸಿದರು.

‘ದಂಡ ವಸೂಲಾತಿಯೇ ನಮ್ಮ ಉದ್ದೇಶ ಅಲ್ಲ’ ಎನ್ನುತ್ತಲೇ ಮಾತಿಗಿಳಿದ ಅವರು, ‘ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿ ಇದೆ ಎಂದೂ ನಾನು ಹೇಳುವುದಿಲ್ಲ’ ಎನ್ನುವ ಮೂಲಕ ಸಂಚಾರ ಪೊಲೀಸರ ವರ್ತನೆಯಲ್ಲಿಯೂ ಲೋಪಗಳಿವೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

‘ಸ್ಥಳದಂಡವನ್ನು ಆದಷ್ಟು ಕಡಿಮೆ ಮಾಡಲು ಪೇಟಿಯಂ, ಅಂಚೆ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇತರ ತಂತ್ರಜ್ಞಾನದ ಅವಕಾಶಗಳನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನ ನಿರಂತರವಾಗಿದೆ. ಸ್ಥಳದಲ್ಲೇ ಜೇಬಿನಿಂದ ಹಣ ಪಡೆಯುವ ಮೂಲಕ ದಂಡ ವಸೂಲು ಮಾಡುವುದು ನಮಗೂ ಖುಷಿ ತರಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ದಂಡ ಪಾವತಿಸದಿದ್ದರೆ ತಪ್ಪು ಅರಿವಾಗದು: ನಗರದಲ್ಲಿರುವ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ನೂತನ ತಂತ್ರಜ್ಞಾನದ ಉಪಕರಣಗಳು ಸಂಚಾರ ಉಲ್ಲಂಘನೆಯ ಅಂಶಗಳನ್ನು ದಾಖಲಿಸುತ್ತಿವೆ. ಆದರೆ, ವಾಹನ ಸವಾರರು ತಮ್ಮ ನಿವಾಸವನ್ನು ಬದಲಾವಣೆ ಮಾಡುತ್ತಿರುವುದರಿಂದ ಅವರಿಗೆ ನೋಟಿಸ್ ತಲುಪುವುದಿಲ್ಲ. ಮಾಡಿದ ತಪ್ಪು ಗೊತ್ತಾಗದೇ ಅವರು ಮತ್ತೆ ಮತ್ತೆ ಅಂತಹುದೇ ಸಂಚಾರ ನಿಯಮ ಉಲ್ಲಂಘಿಸುತ್ತಿರುತ್ತಾರೆ. ಹೀಗಾಗಿ, ದಂಡ ವಸೂಲಾತಿ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಹೆಲ್ಮೆಟ್‌, ವಿಮೆ, ಮದ್ಯಪಾನ ಮಾಡಿ ಚಾಲನೆ, ಮಕ್ಕಳಿಂದ ಚಾಲನೆ ಸೇರಿದಂತೆ ಹಲವು ಬಗೆಯ ಪ್ರಕರಣಗಳಿಗೆ ವಾಹನವನ್ನು ತಡೆದು ನಿಲ್ಲಿಸಲೇಬೇಕಿದೆ. ಕೆಲವು ತಿಂಗಳ ಹಿಂದೆ ಮೈಸೂರು– ಬೆಂಗಳೂರು ರಸ್ತೆಯಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ ಬಾಲಕನೊಬ್ಬ ಕಾರು ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ 3 ಜೀವಗಳು ಬಲಿಯಾದವು. ಇಂತಹ ದುರ್ಘಟನೆಗಳನ್ನು ತಪ್ಪಿಸಲು ವಾಹನ ತಡೆಯಲೇಬೇಕಿದೆ ಎಂದು
ಹೇಳಿದರು.

ಒತ್ತಡ ಇದೆಯೇ?: ಸಂಚಾರ ಉಲ್ಲಂಘನೆಯ ಸಾಕಷ್ಟು ಪ್ರಕರಣಗಳಿದ್ದರೂ, ವಾಹನವನ್ನು ಕೆಲವರು ಒತ್ತಡ ಹಾಕಿ ಬಿಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಚಂದ್ರಗುಪ್ತ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದೇ, ನಸುನಕ್ಕರು. ‘ಕೆಲವರು ತಾವು ಹೋಗುತ್ತಿರುವ ಮಾರ್ಗ ಸರಿಯಾಗಿದೆ ಎಂದು ಹೋಗುತ್ತಿರುತ್ತಾರೆ. ಆದರೆ, ತಲೆಗೆ ಪೆಟ್ಟಾದಾಗ ನಾವೇಕೆ ದಂಡ ಹಾಕಿದೆವು ಎಂದು ಅವರಿಗೆ ಅರಿವಾಗುತ್ತದೆ’ ಎಂದಷ್ಟೇ ಪ್ರತಿಕ್ರಿಯಿಸಿ ಸುಮ್ಮನಾದರು.

‘2008ರಲ್ಲಿ ತರಬೇತಿ ಪಡೆಯುತ್ತಿದ್ದಾಗ ನಾನು ನನ್ನ ಜೀವನದ ಮೊದಲ ಸಂಚಾರ ಉಲ್ಲಂಘನೆಯ ದಂಡವನ್ನು ಮೈಸೂರಿನಲ್ಲಿಯೇ ಪಾವತಿಸಿದೆ’ ಎಂದು ಇದೇ ವೇಳೆ ಅವರು ನೆನಪಿಸಿಕೊಂಡರು.

ಸುಧಾರಣೆಯ ಪ್ರಸ್ತಾವ ಹೀಗಿದೆ

l ವಾಹನ ದಟ್ಟಣೆ ಇದ್ದಾಗ ದಂಡ ವಸೂಲಾತಿ ಮಾಡಲೇಬಾರದು

l ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ, ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಮಾತ್ರ ದಂಡ ವಸೂಲಾತಿ

l ಎಎಸ್‌ಐ ಹಾಗೂ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಗಳಿಂದ ಮಾತ್ರ ದಂಡ ವಸೂಲಾತಿಗೆ ಅವಕಾಶ

l ಅಪಘಾತ ಹೆಚ್ಚು ನಡೆಯುವ ಸ್ಥಳಗಳಲ್ಲಿ ಹೆಲ್ಮೆಟ್‌ ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ

l ರಸ್ತೆಗಳಲ್ಲಿ 1ಕ್ಕಿಂತ ಹೆಚ್ಚು ಕಡೆ ತಪಾಸಣೆ ನಡೆಸದಂತೆ ಸೂಚನೆ

l ಅಪಘಾತ ವಲಯಗಳಲ್ಲಿ ನಡೆಯುವ ತಪಾಸಣೆಗೆ ಯಾವುದೇ ರಿಯಾಯಿತಿ ಇಲ್ಲ

l ಸ್ವಯಂಪ್ರೇರಿತರಾಗಿ ವಾಹನ ಸವಾರರು ದಂಡ ಪಾವತಿಸಲು ಪ್ರತಿ ಶನಿವಾರ ಮತ್ತು ಭಾನುವಾರ ಸಂಚಾರ ಪೊಲೀಸ್ ಠಾಣೆಯಲ್ಲೇ ದಂಡ ಸಂಗ್ರಹಕ್ಕಾಗಿ ವಿಶೇಷ ಕೌಂಟರ್ ಆರಂಭ

l ವಾಹನ ಸವಾರರೇ ರಸ್ತೆಯಲ್ಲಿ ನಿಂತಿರುವ ಸಂಚಾರ ಪೊಲೀಸರ
ಬಳಿ ಖುದ್ದು ಬಂದು ತಮ್ಮ ದಾಖಲಾತಿಗಳನ್ನು ತೋರಿಸಿಕೊಳ್ಳುವುದು. ಪ್ರಾಯೋಗಿಕವಾಗಿ ಕೆಲವೆಡೆ ಒಂದು ತಿಂಗಳವರೆಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಈ ವೇಳೆ ಪೊಲೀಸರು ಸವಾರರನ್ನು ತಡೆಯುವಂತಿಲ್ಲ.

l ರಿಂಗ್‌ರಸ್ತೆಯಲ್ಲಿ ಅತಿವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಕುರಿತು ಮಾತ್ರ ತಪಾಸಣೆ

ಪ್ರಶಂಸನಾ ಪತ್ರ ನೀಡಿದ್ದು ದಂಡ ಹಾಕುತ್ತಿದ್ದವರಿಗೆ ಅಲ್ಲ!

‘ಪ್ರಶಂಸನಾ ಪತ್ರ ನೀಡಿದ್ದು ದಂಡ ಹಾಕಿದ ಸಂಚಾರ ಪೊಲೀಸರಿಗೆ ಅಲ್ಲ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ, ಮೃತ
ದೇಹವನ್ನು ಸ್ಥಳಾಂತರ ಮಾಡಿದ ತುರ್ತು ಸ್ಪಂದನಾ ಘಟಕದ ಪೊಲೀಸರಿಗೆ. ತುರ್ತು ಸ್ಥಿತಿಯಲ್ಲಿ ಕಾರ್ಯಪ್ರವೃತ್ತರಾಗುವ ಪೊಲೀಸರನ್ನು ಹುರಿದುಂಬಿಸಲೆಂದು ಈ ರೀತಿ ಮಾಡಲಾಯಿತು. ಇದನ್ನು ತಿಳಿಯದೇ ಸುಮ್ಮನೇ ಟೀಕೆ ಮಾಡ
ಬಾರದು’ ಎಂದು ಕಮಿಷನರ್ ಚಂದ್ರಗುಪ್ತ ತಿರುಗೇಟು ನೀಡಿದರು.

ವಿಧಾನಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಗುರುವಾರವಷ್ಟೇ ಪ್ರಶಂಸನಾ ಪತ್ರ ನೀಡಿದ ಕಮಿಷನರ್ ಚಂದ್ರಗುಪ್ತ ಅವರನ್ನು
ಟೀಕಿಸಿದ್ದರು.

‘ಘಟನೆಯಿಂದ ಸಾಕಷ್ಟು ಕಲಿತೆವು’

‘ಬೋಗಾದಿ– ಹಿನಕಲ್‌ ರಿಂಗ್‌ರಸ್ತೆಯಲ್ಲಿ ಈಚೆಗೆ ನಡೆದ ಅಪಘಾತ, ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳಿಂದ ಸಾಕಷ್ಟು ಕಲಿತ್ತಿದ್ದೇವೆ. ಗಾಯಾಳುವಿನ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದೇವೆ. ಮೃತರ ಕಡೆಯಿಂದಲೂ ದೂರು ದಾಖಲಿಸಿಕೊಂಡಿದ್ದೇವೆ. ಯಾರ ಮೇಲೂ ಒತ್ತಡ ಹೇರಿಲ್ಲ. ಬೈಕ್‌ ಅನ್ನು ಯಾರು ಚಾಲನೆ ಮಾಡುತ್ತಿದ್ದರು, ಘಟನೆ ಹೇಗಾಯಿತು ಎಂಬ ಕುರಿತು ಈಗಾಗಲೇ ಲಾರಿ ಕ್ಲೀನರ್‌ಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗುತ್ತಿದೆ. ತನಿಖೆ ಸಂಪೂರ್ಣ ಮುಗಿದ ನಂತರ ನಿಜಾಂಶ ಗೊತ್ತಾಗಲಿದೆ. ಅಲ್ಲಿಯವರೆಗೂ ಈ ಕುರಿತು ಏನನ್ನೂ ಹೇಳಲಾಗದು. ಆದರೆ, ಈ ಘಟನೆ ಯಿಂದ ನಾವು ಸಾಕಷ್ಟು ಕಲಿಯುವುದಕ್ಕೆ ಸಾಧ್ಯ ವಾಯಿತು’ ಎಂದು ಚಂದ್ರಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT