ಬುಧವಾರ, ನವೆಂಬರ್ 13, 2019
23 °C

ಮೈಸೂರಿನಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

Published:
Updated:

ಮೈಸೂರು: ಇಲ್ಲಿನ ಶ್ರೀರಾಮಪುರ ಬಡಾವಣೆಯ ಶನೇಶ್ವರ ದೇಗುಲದ ಬಳಿ ಸೋಮವಾರ ನವಜಾತ ಹೆಣ್ಣು ಶಿಶುವೊಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಪತ್ತೆಯಾಗಿದೆ. ಪೊಲೀಸರು ಮಗುವನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವು ನಸುಕಿನಲ್ಲಿ ಜನಿಸಿರುವ ಸಾಧ್ಯತೆ ಇದೆ ಎಂದು ವೈದ್ಯರು ಅಂದಾಜಿಸಿದ್ದಾರೆ. 

ಬೆಳಿಗ್ಗೆ ಮಗು ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಕುವೆಂಪುನಗರ ಠಾಣೆಯ ಎಎಸ್‌ಐ ರಂಗಸ್ವಾಮಿ, ಸಿಬ್ಬಂದಿಯಾದ ಸುಂದರಿ ಹಾಗೂ ಚಿಕ್ಕಬಸವೇಗೌಡ ಅವರು ಮಗುವನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ, ‘ಮಗು ಆರೋಗ್ಯವಾಗಿದೆ. ಬೇರೆಲ್ಲೋ ಜನಿಸಿರುವ ಮಗುವನ್ನು ಇಲ್ಲಿ ತಂದು ಬಿಸಾಕಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಕುವೆಂಪುನಗರ ಠಾಣೆಯ ಇನ್‌ಸ್ಪೆಕ್ಟರ್‌ ರಾಜು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)