ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್ಮೋಹನ ಅರಮನೆ ಆವರಣದಲ್ಲಿ ಮಕ್ಕಳ ಕಲರವ

ಮಕ್ಕಳ ದಸರಾ, ದಸರಾ ದರ್ಶನಕ್ಕೆ ಚಾಲನೆ ನೀಡಿದ ಸೋಮಣ್ಣ
Last Updated 30 ಸೆಪ್ಟೆಂಬರ್ 2019, 12:33 IST
ಅಕ್ಷರ ಗಾತ್ರ

ಮೈಸೂರು: ಜಗನ್ಮೋಹನ ಅರಮನೆಯ ಆವರಣದಲ್ಲಿ ಚಿಣ್ಣರ ಕಲರವ. ಬಗೆಬಗೆ ದಿರಿಸು ಧರಿಸಿದ ಚಿಣ್ಣರೇ ಅಲ್ಲಿನ ಪ್ರಮುಖ ಆಕರ್ಷಣೆ. ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ ವೇಷಭೂಷಣ ಧರಿಸಿದ್ದ ಮಕ್ಕಳು ಓಡಾಡುತ್ತಿದ್ದರು. ಕೆಲವರು ಯಾವ ರೀತಿ ಚಿತ್ರಗಳನ್ನು ಬರೆಯಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ನಾಟಕದ ಸಂಭಾಷಣೆಯನ್ನು ಅಭ್ಯಾಸ ಮಾಡುತ್ತಿದ್ದರು. ಮತ್ತೆ ಕೆಲವರು ವೇದಿಕೆ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ರೂಪದಲ್ಲಿ ಚಪ್ಪಾಳೆ ತಟ್ಟುತ್ತಿದ್ದರು...

ಮಕ್ಕಳ ದಸರಾ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಂಭ್ರಮವಿದು.

ಗ್ರಾಮೀಣ ಮಕ್ಕಳ ದಸರಾ ದರ್ಶನಕ್ಕೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ ಕೂಡಲೇ ಚಿಣ್ಣರು ಸಂತಸಪಟ್ಟರು. ಬಸ್‌ನಲ್ಲಿ ಕುಳಿತು ಮುಂದೆ ಸಾಗಲಿರುವ ತಾಣಗಳ ಬಗ್ಗೆ ಮಾತನಾಡಿಕೊಂಡರು.

ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ವಿದ್ಯಾರ್ಥಿಗಳು ಸಿದ್ಧಗೊಳಿಸಿದ ಕರಕುಶಲ ಕಲೆಗಳ ಮತ್ತು ವಸ್ತುಪ್ರದರ್ಶನ ಮಕ್ಕಳ ಕೌಶಲವನ್ನು ಅನಾವರಣಗೊಳಿಸಿತು. ಮೈಸೂರಿನ ಅಗಸ್ತ್ಯ ಫೌಂಡೇನ್‌ ಸಂಸ್ಥೆಯಿಂದ ಅನಾವರಣಗೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಮಕ್ಕಳಲ್ಲದೆ, ಪೋಷಕರು, ಶಿಕ್ಷಕರಿಗೂ ವೈಜ್ಞಾನಿಕ ವೈಶಿಷ್ಟ್ಯಗಳನ್ನು ತಿಳಿಸಿಕೊಟ್ಟಿತು.

ಮದ್ಯಪಾನ, ಧೂಮಪಾನದಿಂದ ಆಗುವ ಆರೋಗ್ಯ ಸಮಸ್ಯೆಗಳನ್ನು ಚಿತ್ರಣಗಳ ಮೂಲಕ ಮಕ್ಕಳು ವಿವರಿಸಿದರು. ಯಂತ್ರೋಪಕರಣಗಳ ಕಾರ್ಯನಿರ್ವಹಣೆ ವಿಧಾನವನ್ನು ಮಾದರಿ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಡುತ್ತಿದ್ದರು. ಜಲಸಂರಕ್ಷಣೆಯ ಅಗತ್ಯತೆಯನ್ನೂ ಮನವರಿಕೆ ಮಾಡಿಕೊಟ್ಟರು. ದೇಶದ ಗಡಿ, ಸೈನಿಕರು, ಸೇನಾ ಶಿಬಿರದ ಚಟುವಟಿಕೆಗಳು, ಮಳೆ ನೀರು ಸಂಗ್ರಹ, ಹಸಿರೀಕರಣ, ಕೈಗಾರಿಕೆಗಳು, ಗಣಿತ ಆಟಗಳು, ಸ್ವಯಂಚಾಲಿತ ನೀರಾವರಿ ವ್ಯವಸ್ಥೆ, ಸ್ವಚ್ಛತೆ ಮತ್ತು ಆರೋಗ್ಯ, ರೊಬೊಟ್‌ಗಳ ಕಾರ್ಯನಿರ್ವಹಣೆ, ಕರಕುಶಲ ವಸ್ತುಗಳು, ಭೀಷ್ಮ ಕುರ್ಚಿ ಮನಸೆಳೆದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಸೋಮಣ್ಣ ಮಾತನಾಡಿ, ‘ಜಗನ್ಮೋಹನ ಅರಮನೆ ಎಂದರೆ ತುಂಬಾ ಚೆನ್ನಾಗಿದೆ ಎಂದುಕೊಂಡಿದ್ದೆ. ಆದರೆ, ಇಂಥ ಅರಮನೆಗೆ ದೀಪಾಲಂಕಾರ ಮಾಡಿಲ್ಲ. ಆವರಣದ ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಕ್ರಾಫರ್ಡ್‌ ಹಾಲ್‌ಗೂ ದೀಪಾಲಂಕಾರ ಮಾಡಿಲ್ಲ. ಇದು ಸರಿಯಲ್ಲ. ಮಂಗಳವಾರದ ಒಳಗೆ ಎಲ್ಲ ಕೆಲಸವನ್ನೂ ಮಾಡಿಸಿ ಶಾಸಕ ನಾಗೇಂದ್ರ ಅವರಿಂದ ಉದ್ಘಾಟಿಸಬೇಕು’ ಎಂದು ಪಾಲಿಕೆ ಆಯುಕ್ತರನ್ನು ಕರೆಸಿ ಸೂಚನೆ ನೀಡಿದರು.

ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ: ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಶಾಲೆಗಳಲ್ಲಿರುವ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಈಗಿನಿಂದಲೇ ಗುಣಮಟ್ಟದ ಶಿಕ್ಷಣ ನೀಡಬೇಕು. ಅವರಿಗೆ ಹೆಚ್ಚಿನ ಸವಲತ್ತು ಬೇಕಿದ್ದರೆ ಕೂಡಲೇ ಪೂರೈಸುವುದಾಗಿ ಭರವಸೆ ನೀಡಿದರು.

ಸುಗಮ ಸಂಗೀತ, ನಾಟಕ ಪ್ರದರ್ಶನ, ಆಶುಭಾಷಣ ಸ್ಪರ್ಧೆ, ಭರತನಾಟ್ಯ, ಕತೆ ಹೇಳುವ ಸ್ಪರ್ಧೆಗಳು ನಡೆದವು. ಬಳಿಕ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಬಳಿಕ ಜಗನ್ಮೋಹನ ಅರಮನೆ ಆವರಣದಲ್ಲಿ ಆಗಬೇಕಾದ ಕೆಲಸಗಳನ್ನು ಪರಿಶೀಲಿಸಿ ಸಲಹೆ ನೀಡಿದರು.

ಶಾಸಕ ಎಲ್‌.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಅಧ್ಯಕ್ಷೆ ವಿದ್ಯಾಅರಸ್, ಉಪವಿಶೇಷಾಧಿಕಾರಿ ಅಂತೋಣಿ, ಮಂಗಳಾ ಸೋಮಶೇಖರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT