ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟ್ ಮೇಲೆ ಚೀನಾ ದಬ್ಬಾಳಿಕೆ: ಒಲಿಂಪಿಕ್ಸ್ ಬಹಿಷ್ಕರಿಸುತ್ತಿದ್ದೇವೆ ಎಂದ ಹಕೆಪ್

Last Updated 10 ಡಿಸೆಂಬರ್ 2021, 14:46 IST
ಅಕ್ಷರ ಗಾತ್ರ

ಮೈಸೂರು: 'ಟಿಬೆಟ್ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ 2022ರ ಬೀಜಿಂಗ್ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸುತ್ತಿದ್ದೇವೆ' ಎಂದು ಬೈಲುಕುಪ್ಪೆ ಟಿಬೆಟನ್ ಶಿಬಿರದ ಅಧ್ಯಕ್ಷ ಪೆರಿಂಗ್ ಹಕೆಪ್ ಹೇಳಿದರು.

'ಡಿ.10 ವಿಶ್ವ ಮಾನವ ಹಕ್ಕು ದಿನ ಹಾಗೂ ಟಿಬೆಟ್ ಧರ್ಮಗುರು ದಲೈ ಲಾಮಾ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಿದ ವಿಶೇಷ ದಿನವೂ ಆಗಿದೆ. ಟಿಬೆಟನ್ನರ ಪಾಲಿಗೆ ಈ ದಿನ ಸಂತೋಷ ಹಾಗೂ ದುಃಖದ ಸಮ್ಮಿಶ್ರ ದಿನವಾಗಿದೆ. ಚೀನಿಯರು ಟಿಬೆಟನ್ನರನ್ನು ಕಳೆದ 63 ವರ್ಷಗಳಿಂದ ಮಾನವ ಹಕ್ಕುಗಳಿಂದ ವಂಚಿರನ್ನಾಗಿ ಮಾಡುತ್ತಿದ್ದಾರೆ' ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

'2008ರಿಂದ ಟಿಬೆಟನ್ನರ ಮೇಲೆ ದೌರ್ಜನ್ಯ, ಚಿತ್ರಹಿಂಸೆ, ಮಾನಸಿಕ ಕಿರುಕುಳ, ಕೊಲೆ ಹೆಚ್ಚಾಗುತ್ತಿದೆ. ಇದರಿಂದ ಬೇಸತ್ತ ಟಿಬೆಟನ್ ಯುವಕರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದುವರೆಗೆ ಸುಮಾರು 150 ಯುವಕರು ಚೀನೀಯರ ದಬ್ಬಾಳಿಕೆಯನ್ನು ಖಂಡಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಟಿಬೆಟನ್ನರ ಬೆಂಬಲಕ್ಕೆ ನಾವೆಲ್ಲಾ ನಿಂತಿದ್ದೇವೆ' ಎಂದು ತಿಳಿಸಿದರು.

ಇಂಡೋ-ಟಿಬೆಟ್ ಕೋ-ಆರ್ಡಿನೇಟ್ ಕಚೇರಿಯ ಪ್ರಾದೇಶಿಕ ಸಂಚಾಲಕ ಜೆ.ಪಿ. ಅರಸ್ ಮಾತನಾಡಿ, 'ಟಿಬೆಟ್ ಸ್ವತಂತ್ರ ದೇಶ. ಅವರದೇ ಆದ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಇದೆ. ಐದು ನದಿಗಳು ಹರಿಯುತ್ತಿದ್ದು, ಸಂಪತ್ಭರಿತವಾಗಿದೆ. ಚೀನಾ ಸರ್ಕಾರವು ಟಿಬೆಟ್ನಲ್ಲಿರುವ ಸಂಪನ್ಮೂಲಗಳನ್ನು ದೋಚುತ್ತಿದೆ. ಕಸವನ್ನು ತಂದು ಇಲ್ಲಿ ಸುರಿಯುತ್ತಿದೆ. ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿದೆ' ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಣಸೂರಿನ ಟಿಬೆಟನ್ ಯುವ ಕಾಂಗ್ರೆಸ್ ನ ಗೌರವ ಕಾರ್ಯದರ್ಶಿ ದವಾ ಗೋಲ್ಪೊ, ರೀಜಿನಲ್ ಟಿಬೆಟನ್ ವುಮೆನ್ಸ್ ಅಸೋಸಿಯೇಷನ್ ಹುಣಸೂರು ಘಟಕದ ಅಧ್ಯಕ್ಷೆ ತಮ್ಡಿನ್, ಬೈಲುಕುಪ್ಪೆ ಘಟಕದ ಅಧ್ಯಕ್ಷೆ ಡಿಕಿ, ಕೊಳ್ಳೇಗಾಲ ಘಟಕದ ದವಾ ಡೋಲ್ಮಾ ಇದ್ದರು.

ದಬ್ಬಾಳಿಕೆ ನಿಲ್ಲಿಸಲು ಆಗ್ರಹ
'ಚೀನಿಯರು ಟಿಬೆಟನ್ನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸಬೇಕು. ಟಿಬೆಟ್ನಲ್ಲಿ ವಸ್ತುಸ್ಥಿತಿ ಅರಿಯಲು ತಂಡವೊಂದನ್ನು ಕಳುಹಿಸಿ ಅದರ ನಿರ್ಧಾರಗಳನ್ನು ಗೌರವಿಸಬೇಕು. ಪಂಚೆನ್ ಲಾಮಾ ಸೇರಿದಂತೆ ಎಲ್ಲ ಟಿಬೆಟನ್ ರಾಜಕೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿಶ್ವದ ಎಲ್ಲ ಶಾಂತಿಪ್ರಿಯ ರಾಷ್ಟ್ರಗಳು ಟಿಬೆಟನ್ನರ ಹೋರಾಟವನ್ನು ಬೆಂಬಲಿಸಬೇಕು ಎಂದು ಪೆರಿಂಗ್ ಹಕೆಪ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT