ಚಿಣ್ಣರ ಕಣ್ಣಲ್ಲಿ ಗಣಪ

7

ಚಿಣ್ಣರ ಕಣ್ಣಲ್ಲಿ ಗಣಪ

Published:
Updated:
Deccan Herald

ಗಣೇಶ ಬಂದ

ಕಾಯಿ ಕಡುಬು ತಿಂದ

ಚಿಕ್ಕ ಕೆರೇಲಿ ಬಿದ್ದ

ದೊಡ್ಡ ಕೆರೇಲಿ ಎದ್ದ

ಇದು ಜನಪ್ರಿಯ ಪದ್ಯ. ಈ ನಾಲ್ಕು ಸಾಲಿನ ಪದ್ಯವನ್ನು ಕೇಳದವರೇ ಇಲ್ಲ, ಗುನುಗುನಿಸಿದವರೇ ಇಲ್ಲ ಎನ್ನುವಷ್ಟು ಪ್ರಸಿದ್ಧಿ ಪಡೆದಿದೆ. ಮಕ್ಕಳಿಗಂತೂ ಈ ಹಾಡೆಂದರೆ ಪಂಚಪ್ರಾಣ. ಗಣೇಶನನ್ನು ನೀರಿಗೆ ಬಿಡುವಾಗ, ಮೆರವಣಿಗೆ ಮಾಡುವಾಗ ಈ ಹಾಡನ್ನು ಹಾಡದೇ ಇದ್ದರೆ ಅದು ಪೂರ್ಣವಾಗುವುದೇ ಇಲ್ಲ ಎನಿಸುವಷ್ಟರ ಮಟ್ಟಿಗಿದೆ ಈ ಹಾಡಿಗೆ ಮಹತ್ವವಿದೆ.

ಗಣಪತಿ ಕುರಿತು ಬಗೆಬಗೆಯಾದ ಕಥೆಗಳಿವೆ. ಎಲ್ಲವೂ ಪುರಾಣದೊಂದಿಗೆ ಮಿಳಿತವಾಗಿವೆ. ಪಾರ್ವತಿ ತನ್ನ ಮೈ ಕೊಳೆಯಿಂದ ಮಾಡಿದ ಬಾಲಕ ಶಿವನನ್ನು ತಡೆದು ತಲೆ ಕಳೆದುಕೊಂಡು ಪಾರ್ವತಿಯ ಕೋರಿಕೆ ಮೇರೆಗೆ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದ ಆನೆಯೊಂದರ ತಲೆ ತಂದು ಜೋಡಿಸಿದ್ದು... ಇದು ಮಕ್ಕಳ ಪಾಲಿಗೆ ಅದ್ಭುತ ರಮ್ಯ ಕಥಾನಕವಾಗಿ ಕಾಣುತ್ತದೆ.

ಬಾಲ್ಯದಿಂದಲೇ ಮಕ್ಕಳು ಗಣಪನನ್ನು ಇಷ್ಟಪಡುವಷ್ಟು ಬೇರೆ ಇನ್ನಾವ ದೈವವನ್ನೂ ಇಷ್ಟಪಡುವುದಿಲ್ಲ. ಬಹುಶಃ ಈ ಕಥೆಯೇ ಇದಕ್ಕೆ ಕಾರಣವಿರಬೇಕು. ಇದರ ಜತೆಗೆ, ಡೊಳ್ಳು ಹೊಟ್ಟೆ, ಹಸನ್ಮುಖಿ, ಇಲಿ ವಾಹನ, ಹೊಟ್ಟೆಗೆ ಸುತ್ತಿಕೊಂಡ ಸರ್ಪ... ಹೀಗೆ ನಾನಾವಿಧದ ಭಂಗಿಗಳು ಚಿಣ್ಣರಿಗೆ ಆಕರ್ಷಣೆ ಎನಿಸಿದೆ. ‌

‘ಚೌತಿಯ ಚಂದ್ರನ ದರ್ಶನದಿಂದ ಕಾಡಿತು ಕೃಷ್ಣನ ಅಪವಾದ’ ಎಂಬ ಹಾಡೂ ಅಷ್ಟೇ ರೋಚಕ. ಈ ಕಥೆ ಕೇಳಿದ ಮೇಲಂತೂ ಗಣಪನ ಬಗೆಗಿರುವ ಸೆಳೆತ ಮಕ್ಕಳಿಗೆ ಮತ್ತಷ್ಟು ಹೆಚ್ಚುತ್ತದೆ.‌ ಇದರ ಜತೆಗೆ, ಗಣಪತಿ ಹಬ್ಬದಂದು ಮಾಡುವ ವಿಧವಿಧ ಭಕ್ಷ್ಯ ಭೋಜ್ಯಗಳೂ, ಎರಡು ದಿನಗಳ ರಜೆ ಇವೆಲ್ಲವೂ ಮಕ್ಕಳಿಗೆ ಇಷ್ಟ. ತಮ್ಮದೇ ಮನೆಯಲ್ಲಿ, ಇಲ್ಲವೇ ಏರಿಯಾದಲ್ಲಿ ಗಣಪತಿಯನ್ನು ಕೂರಿಸಲು ಚಂದಾ ವಸೂಲು ಮಾಡುವುದು, ಚಪ್ಪರ ಹಾಕುವುದು, ತಳಿರು ತೋರಣ, ಪೂಜೆ, ಪುನಸ್ಕಾರ, ಕೊನೆಗೆ ಕೈಗಾಡಿಯ ಮೇಲೆ ಮೆರವಣಿಗೆ ಮಾಡಿ ನೀರಿನಲ್ಲಿ ಬಿಡುವುದು ಇವೆಲ್ಲವೂ ಗಣಪ ಚಿಣ್ಣರನ್ನು ತನ್ನದೇ ಮುಷ್ಟಿಯಲ್ಲಿ ಬಿಗಿ ಹಿಡಿದಿರುವುದಕ್ಕೆ ಕಾರಣಗಳೆನಿಸಿವೆ.

ಗಣಪತಿ ಎಂಬುದು ದ್ರಾವಿಡ ಜನಾಂಗದ ನಾಯಕ, ಆತನಿಗೆ ಮೊದಲು ವಂದಿಸಿ ನಂತರ ಇನ್ನುಳಿದ ಕಾರ್ಯಗಳನ್ನು ಮಾಡುವ ತಂತ್ರವನ್ನು ಆರ್ಯರು ಹೆಣೆದರು. ಆ ಮೂಲಕ ದ್ರಾವಿಡರ ಪ್ರಬಲ ವಿರೋಧವನ್ನು ಶಮನ ಮಾಡುವ ತಂತ್ರಗಾರಿಕೆ ಇತ್ತು. ಗಣಪತಿಯ ನಂತರ ಆತನ ಪ್ರತಿನಿಧಿಯಾಗಿ ಸಗಣಿಗೆ ಗರಿಕೆ ಹುಲ್ಲು ಸಿಕ್ಕಿಸಿ ಇದೇ ನಿಮ್ಮ ಗಣಪತಿ ಎಂದು ಹೇಳಿ ದ್ರಾವಿಡರನ್ನು ಮರುಳು ಮಾಡಲಾಗುತ್ತಿತ್ತು. ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಮಹತ್ವ ಹೇಳಲು ಸಾರ್ವಜನಿಕರ ಗಣಪತಿ ಪೂಜೆಯನ್ನು ಜಾರಿಗೆ ತಂದರು. ಹೀಗೆ, ಏನೆಲ್ಲಾ ವಾದಗಳನ್ನು ಹೇಳಿದರೂ ಮಕ್ಕಳಿಗೆ ಅವ್ಯಾವೂ ಬೇಡ. ಅವರಿಗೆ ನಮ್ಮ ಡೊಳ್ಳು ಹೊಟ್ಟೆ ನಾಯಕನೇ ಬೇಕು.

ತಂತ್ರಜ್ಞಾನದ ಯುಗದಲ್ಲಿ ಗಣೇಶ ಮತ್ತಷ್ಟು ಅವತಾರಗಳನ್ನು ಎತ್ತಿ ಚಿಣ್ಣರನ್ನು ಆಕರ್ಷಿಸಿದ್ದಾನೆ. ಗಣಪತಿ ಪೂಜೆಯಂತಹ ತಂತ್ರಾಂಶಗಳು ಹಿಂದೆಯೇ ಬಂದಿವೆ. ಈಗ ಯೂಟ್ಯೂಬ್‌ನಲ್ಲಿ ಬಾಲಗಣಪನ ವಿವಿಧ ಕಥಾನಕಗಳು ಸೃಷ್ಟಿಯಾಗಿವೆ. ಅಬಾಲವೃದ್ಧರಾಗಿ ಎಲ್ಲ ವಯೋಮಾನದವರನ್ನು ಇವು ಗಮನಸೆಳೆದಿವೆ.

ಬಾಲ ಗಣೇಶ್–1, ಬಾಲ ಗಣೇಶ–2, ಲಾರ್ಡ್ ಗಣೇಶ, ಮೈ ಫ್ರೆಂಡ್ ಗಣೇಶ, ಛೋಟಾ ಗಣೇಶ್,... ಹೀಗೇ ಹಲವು ಹತ್ತು ಕಾರ್ಟೂನ್‌ಗಳು ಯೂಟ್ಯೂಬ್‌ನಲ್ಲಿ ಜಾಲಡಿದರೆ ಸಿಗುತ್ತವೆ. ಇವೆಲ್ಲವನ್ನು ನೋಡುತ್ತಲೇ ಬೆಳೆವ ಚಿಣ್ಣರು ಮುಂದೆಯೂ ಮತ್ತಷ್ಟು ಗಣೇಶ ಭಕ್ತರಾಗುವುದರಲ್ಲಿ ಅನುಮಾನವೇ ಇಲ್ಲ.

ಹೆಂಗಳೆಯರಿಗೂ ಅತಿ ಪ್ರಿಯ: ಹೆಂಗಳೆಯರಿಗಂತೂ ಗಣೇಶ ಇನ್ನಷ್ಟು ಪ್ರಿಯ ಎಂಬುದರಲ್ಲಿ ಎರಡು ಮಾತಿಲ್ಲ. ಗೌರಿ ಹಬ್ಬವನ್ನು ಹೆಣ್ಣು ಮಕ್ಕಳು ಹೇಗೆ ಆಚರಿಸುತ್ತಾರೋ ಅಷ್ಟೇ ಸಂಭ್ರಮದಿಂದ ಗಣೇಶ ಚತುರ್ಥಿಯನ್ನೂ ಆಚರಿಸುತ್ತಾರೆ. ಗಣಪನನ್ನು ತರುವುದು, ಚಂದಾ ವಸೂಲು ಮಾಡುವುದು, ಚಪ್ಪರ ಹಾಕವುದು ಇವೆಲ್ಲ ಹುಡುಗರ ಕೆಲಸವಾದರೆ, ಗಣಪನನ್ನು ಕೂರಿಸುವ ಮಂಟಪದ ಸಿಂಗಾರ ಹುಡುಗಿಯರ ಕೆಲಸ. ಮಂಟಪದ ಮುಂದೆ ಅಂದದ ರಂಗವಲ್ಲಿ ಹಾಕುವುದು, ಬಣ್ಣದ ಕಾಗದದಿಂದ ಅಲಂಕರಿಸುವುದು, ಬಗೆಬಗೆ ತಿಂಡಿಗಳನ್ನು ತಯಾರಿಸಿ ನೈವೇದ್ಯಕ್ಕೆ ಇಡುವುದು... ಹೀಗೆ ಹುಡುಗರಿಗಿಂತ ಹೆಚ್ಚಿನ ಕೆಲಸಗಳನ್ನು ಹುಡುಗಿಯರೇ ನಿಭಾಯಿಸುತ್ತಾರೆ.

ಪ್ರತಿ ತಿಂಗಳ ಗಣೇಶ ಚೌತಿಯಂದು ದಿನವಿಡಿ ಉಪವಾಸವಿದ್ದು, ಕುಟುಂಬದವರಿಗೆ ಒಳಿತಾಗಲಿ ಎಂದು ಆಶಿಸುವ ದೊಡ್ಡ ಮನಸ್ಸು ಇರುವುದೂ ಮಹಿಳೆಯರಿಗೆ. ಗಣಪತಿಯ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವುದೂ ಅವರೇ. ‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !