ಕರೋಲ್‌ ಇಂಪು, ಕ್ರಿಸ್‌ಮಸ್‌ ಹಬ್ಬದ ಕಂಪು

7

ಕರೋಲ್‌ ಇಂಪು, ಕ್ರಿಸ್‌ಮಸ್‌ ಹಬ್ಬದ ಕಂಪು

Published:
Updated:
Deccan Herald

ಕ್ರಿಶ್ಚಿಯನ್ನರ ಪ್ರಮುಖ ಹಬ್ಬ ಕ್ರಿಸ್‌ಮಸ್‌. ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುಸ್ವಾಮಿಯ ಜನ್ಮದಿನದ ಆಚರಣೆಯೇ ಕ್ರಿಸ್‌ಮಸ್‌. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಈ ಹಬ್ಬದ ಧ್ಯೇಯ.

ಕಳೆಗಟ್ಟಿಸುವ ಕರೋಲ್‌ ಗೀತೆಗಳು: ಕ್ರಿಸ್‌ಮಸ್‌ ಆಚರಣೆಯ ಮುಂಚೆ ಕರೋಲ್‌ ಗೀತೆಯನ್ನು ಹಾಡಲಾಗುತ್ತದೆ. ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕರ ಗುಂಪುಗಳು ರಾತ್ರಿ ತಮ್ಮ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್‌ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್‌ ಹಾಡುಗಳು) ಹಾಡುತ್ತಾರೆ. ಅದರ ಮೂಲಕ ಯೇಸು ಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ ಮತ್ತು ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಸಾರಿ ಪವಿತ್ರ ಭಾವನೆ ಮೂಡಿಸುತ್ತಾರೆ.

ಹಿನಕಲ್‌ನ ಇನ್ಫೆಂಟ್‌ ಜೀಸಸ್‌ ಚರ್ಚ್‌, ಲಕ್ಷ್ಮಿಪುರಂನ ಹಾರ್ಡ್ವಿಕ್‌ ಚರ್ಚ್‌, ಬೆಂಗಳೂರು–ಮೈಸೂರು ರಸ್ತೆಯ ವೆಸ್ಲಿ ಚರ್ಚ್‌, ಗಾಂಧಿ ನಗರದ ಸಂತ ಅಣ್ಣಮ್ಮ ಚರ್ಚ್‌, ಬಾರ್ಥಲೋಮಿಯೊ ಚರ್ಚ್‌, ರಾಮಕೃಷ್ಣ ನಗರದಲ್ಲಿರುವ ಏಸು ಕೃಪಾಲಯ, ಸೇಂಟ್‌ ಫಿಲೋಮಿನಾ, ಸೇಂಟ್‌ ಜೋಸೆಫ್‌ ಚರ್ಚ್‌ಗಳು ಸೇರಿದಂತೆ ನಗರದೆಲ್ಲೆಡೆ ಕ್ರಿಶ್ಚಿಯನ್‌ ಸಮುದಾಯದವರ ಕಲರವಕ್ಕೆ ಸಾಕ್ಷಿಯಾಗುತ್ತವೆ.

ಕ್ರಿಸ್ತನ ಮೂರ್ತಿಯೆದುರು ಅವನ ಆರಾಧಕರು ಹಾಡುವ ಕರೋಲ್‌, ಲಯಬದ್ಧ ಸಂಗೀತದ ಮೂಲಕ ಕ್ರಿಸ್ತನ ಜೀವನಗಾಥೆಯ ಗುಣಗಾನ ಶ್ರೋತೃಗಳ ಕಿವಿಗಳನ್ನು ತಂಪಾಗಿಸುತ್ತವೆ. ಕರೋಲ್‌ಗಳು ಕ್ರಿಸ್ತನ ಹುಟ್ಟು, ದೇವ ಮಾನವನಾಗಿ ಭೂಮಿಗೆ ಬಂದ ಬಳಿಕ ಅವನ ಜೀವನದಲ್ಲಿ ನಡೆದ ಘಟನಾವಳಿಗಳ ಚರಿತ್ರೆ, ಆತನ ಸಂದೇಶಗಳನ್ನು ವಿವರಿಸುವ ಗೀತೆಗಳು. ಹಾರ್ಮೋನಿಯಂ, ಕಾಂಗೋ, ಝಾಲರಿ, ಕೀಬೋರ್ಡ್‌ಗಳು ಸೇರಿದಂತೆ ವಿವಿಧ ಸಂಗೀತ ಸಾಧನಗಳ ಸಹಾಯದಿಂದ ಸುಶ್ರಾವ್ಯವಾಗಿ ಹಾಡುತ್ತ ಗಮನ ಸೆಳೆಯುತ್ತವೆ.

‘ಲೋಕದಲ್ಲಿ ಮನುಷ್ಯರಿಗೆ ಶಾಂತಿ ಲಭಿಸಲಿ’... ‘ಸಂತೋಷ ಉಲ್ಲಾಸ ಆನಂದ ಈ ದಿನ’, ‘ಬನ್ನಿ ಹಾಡೋಣ ಶುಭಾಶಯ’, ‘ಬನ್ನಿ ಸೇರೋಣ ಶುಭಾಶಯ’... ಹೀಗೆ ಅನೇಕ ಗೀತೆಗಳು ಪ್ರಮುಖವಾಗಿವೆ.

ಕನ್ನಡ, ತೆಲುಗು, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಕರೋಲ್‌ ಗೀತೆಗಳನ್ನು ಹಾಡುತ್ತಾರೆ.

ಕ್ರೈಸ್ತರಲ್ಲಿ ರೋಮನ್‌ ಕ್ಯಾಥಲಿಕ್‌, ಪ್ರೊಟೆಸ್ಟೆಂಟ್‌, ಮೆಥೋಡಿಸ್ಟ್‌, ಯಹೋವನನ ಸಾಕ್ಷಿಗಳು, ನ್ಯೂ ಲೈಫ್‌ ಮತ್ತಿತರ ಪಂಥಗಳಿದ್ದು, ಅವುಗಳಲ್ಲೂ ಆರಾಧನಾ ವೈವಿಧ್ಯತೆಯಿದೆ. ಅಂತೆಯೇ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಕ್ಯಾರಲ್‌ಗಳನ್ನೂ ಹಾಡಲಾಗುತ್ತದೆ. ಕ್ಯಾಥಲಿಕ್‌ರು ದೇವರ ವಿಗ್ರಹಗಳಿಗೂ ಅಂದರೆ ಯೇಸುವಿನ ಶಿಲುಬೆ ಮತ್ತು ಪ್ರತಿಮೆಗಳಿಗೆ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಬಲಿ ಪೂಜೆಗಳನ್ನು ನಡೆಸುತ್ತಾರೆ. ಜಪದ ಸರಗಳನ್ನು ಸಹ ಕತ್ತಿಗೆ ಹಾಕುತ್ತಾರೆ. ಪ್ರೊಟೆಸ್ಟೆಂಟರು ಯಾವುದೇ ವಿಗ್ರಹ, ಶಿಲುಬೆ, ಪ್ರತಿಮೆಗಳಿಗೆ ಪೂಜೆ ಮಾಡದೆ ಕೇವಲ ದೇವರ ವಾಕ್ಯಗಳನ್ನು ಜಪಿಸುತ್ತಾರೆ ಎನ್ನುತ್ತಾರೆ ಅವಿನ್‌ ಪ್ರಕಾಶ್‌.

ಹಬ್ಬದ ಹಿಂದಿನ ಐದು ದಿನಗಳಲ್ಲಿ ಮನೆ ಮನೆಗೆ ತೆರಳಿ ಹಾಡಲಾಗುತ್ತದೆಯಾದರೂ ಅದಕ್ಕಾಗಿ ತಿಂಗಳಿನಿಂದಲೇ ಅಭ್ಯಾಸ ಆರಂಭಿಸಲಾಗುತ್ತದೆ. ಅಂತೆಯೇ, ಈಗಾಗಲೇ ನಗರದ ಅನೇಕ ಮನೆಗಳಲ್ಲಿ, ಚರ್ಚ್‌ಗಳಲ್ಲಿ, ಕ್ರೈಸ್ತ ಕಾಲೊನಿಗಳು, ಸಮುದಾಯದ ಸಂಘ ಸಂಸ್ಥೆಗಳಲ್ಲಿ ಹಾಡನ್ನು ಅಭ್ಯಾಸ ಮಾಡಲಾಗುತ್ತಿದೆ. ಅಲ್ಲದೇ, ಅನೇಕ ಸಂಘ ಸಂಸ್ಥೆಗಳಲ್ಲಿ ಕರೋಲ್‌ ಗಾಯನ ಸ್ಪರ್ಧೆಗಳನ್ನೂ ಆಯೋಜಿಸಿ ಹುರಿದುಂಬಿಸಲಾಗುತ್ತಿದೆ.

ಕ್ರಿಸ್‌ಮಸ್‌ ಸ್ವಾಗತಿಸಲು ನಗರ ಸಜ್ಜು: ಯೇಸು ಕ್ರಿಸ್ತ ಹುಟ್ಟಿದ ದಿನವನ್ನು ಕ್ರೈಸ್ತರು ಕ್ರಿಸ್ಮಸ್‌ ಹಬ್ಬವಾಗಿ ಆಚರಿಸುತ್ತಾರೆ. ಡಿ.24ರಂದು ಮಧ್ಯರಾತ್ರಿ ಕ್ರಿಸ್ತ ಹುಟ್ಟಿದ ಎಂಬ ನಂಬಿಕೆಯಿಂದ ಇಡೀ ರಾತ್ರಿ ಚರ್ಚ್‌, ಮನೆಗಳಲ್ಲಿ ಪ್ರಾರ್ಥನೆ ನಡೆಯುತ್ತದೆ. ಕ್ರಿಸ್ತ ಗೋದಲಿಯಲ್ಲಿ ಜನಿಸಿದ ಎನ್ನುವುದನ್ನು ನೆನಪಿಸಿಕೊಳ್ಳಲು ಹಲವರು ಮನೆ ಮುಂದೆ, ಮನೆಯೊಳಗೆ ಗೋದಲಿ ನಿರ್ಮಾಣ ಮಾಡುತ್ತಾರೆ. ಅದರೊಳಗೆ ಕುರಿ ಮರಿಗಳ ಆಟಿಕೆಗಳನ್ನು ಇಟ್ಟು, ದೀಪಾಲಂಕಾರ ಮಾಡುತ್ತಾರೆ.

ಅಂತೆಯೇ, ಮೈಸೂರಿನ ಎಲ್ಲ ಚರ್ಚಿನ ಹೊರಭಾಗದಲ್ಲಿ  ‘ಕ್ರಿಬ್‌’ (ಗೋದಲಿ)ಗಳನ್ನು ಆಕರ್ಷಕವಾಗಿ ಸಿದ್ಧಪಡಿಸಲಾಗುತ್ತಿದೆ. ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಲಾಗುತ್ತಿದೆ. ಮಹಾನಗರದ ಎಲ್ಲ ಚರ್ಚ್‌ಗಳು ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.

ಮನೆ, ಮನದಲ್ಲಿ ನಕ್ಷತ್ರ: ಕ್ರಿಸ್‌ಮಸ್‌ ಸಂದರ್ಭದಲ್ಲಿ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿ ಹಾಕುವುದಕ್ಕೂ ಒಂದು ಕಥೆಯಿದೆ. ಕ್ರಿಸ್ತನ ಜನನವಾದಾಗ ಅವನನ್ನು ಕಂಡು ಆರಾಧಿಸಲು ದೂರದ ದೇಶಗಳಿಂದ ಮೂವರು ಪಂಡಿತರು ಬರುತ್ತಾರೆ. ಆದರೆ, ಅವರಿಗೆ ಕ್ರಿಸ್ತನ ಜನನದ ಸ್ಥಳ ತಿಳಿದಿರುವುದಿಲ್ಲ. ಆಗ ಬಾನಿನಲ್ಲಿ ಉದಯಿಸಿದ ನಕ್ಷತ್ರವು ಅವರ ಮುಂದೆ ಮುಂದೆ ಸಾಗಿ ಕ್ರಿಸ್ತನ ಜನನದ ಸ್ಥಳವನ್ನು ತೋರಿಸುತ್ತದೆ. ಅದರ ಸಂಕೇತವಾಗಿ ಕ್ರಿಸ್ಮಸ್‌ನಂದು ಎಲ್ಲರ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿಹಾಕುತ್ತಾರೆ. ಪ್ರತಿ ಮನೆಯಲ್ಲಿಯೂ ಕ್ರಿಸ್ತ ಜನಿಸಿದ್ದಾನೆ ಎನ್ನುವುದು ಇದರ ಅರ್ಥ ಎಂದು ವಿವರಿಸುತ್ತಾರೆ ಫಾದರ್‌ ಹೆನ್ರಿ ಜೋಸೆಫ್‌.

ತಿಂಡಿ ತಿನಿಸುಗಳು...
ಕ್ರಿಸ್ಮಸ್‌ ಪ್ರಯುಕ್ತ ಮಹಿಳೆಯರು ಮನೆಗಳಲ್ಲಿ ಕುರಕಲು ತಿಂಡಿ ತಯಾರಿಸಿಡುತ್ತಿದ್ದಾರೆ. ಕಲ್‌ಕಲಾ, ಮೊಟ್ಟೆ ಕಜ್ಜಾಯ, ಕರ್ಜಿಕಾಯಿ, ಕೋಡುಬಳೆ, ಗುಲಾಬ್‌ ಜಾಮೂನ್, ಕರಿದ ಅವಲಕ್ಕಿ (ಚುವಡಾ), ಚಕ್ಕುಲಿ, ರೋಜ್‌ ಕುಕ್‌, ನಿಪ್ಪಟ್ಟು, ಕೇಕ್‌, ಕ್ಯಾರೆಟ್‌ ಹಲ್ವಾ, ಅಕ್ಕಿ ಮಿಠ್ಠಾ (ಬೆಲ್ಲ–ಅಕ್ಕಿ ಹಿಟ್ಟು ಸೇರಿಸಿ ತಯಾರಿಸಿದ ಸಿಹಿ ತಿನಿಸುಗಳು) ಕ್ರಿಸ್ಮಸ್‌ಗಾಗಿ ತಯಾರಿಸುವ ನೆಚ್ಚಿನ ತಿನಿಸುಗಳಾಗಿವೆ.

ಕೇಕ್‌, ವೈನ್‌...
ಕ್ರಿಸ್‌ಮಸ್‌ ಎಂದ ಮೇಲೆ ಕೇಕ್‌ ಇರಲೇಬೇಕು. ಕೇಕ್‌ ಇಲ್ಲದ ಹಬ್ಬ ಅಪೂರ್ಣ ಎನ್ನಬಹುದು. ಎಷ್ಟೇ ಬಡವರಾದರೂ ಕ್ರೈಸ್ತ ಕುಟುಂಬದವರು ಹೊಸ ಬಟ್ಟೆ ತೊಟ್ಟು, ಕೇಕ್‌ ತಿಂದು ಸಂಭ್ರಮಿಸುತ್ತಾರೆ. ಅಕ್ಕಪಕ್ಕದವರಿಗೆ, ಮನೆಗೆ ಬರುವ ಅತಿಥಿಗಳಿಗೆ ಕೇಕ್‌ ನೀಡುತ್ತಾರೆ. ಹೀಗಾಗಿ, ಕೇಕ್‌ಗೆ ಎಲ್ಲಿಲ್ಲದ ಬೇಡಿಕೆ.

ಈ ನಿಟ್ಟಿನಲ್ಲಿ ತಿಂಗಳ ಮೊದಲೇ ಕೇಕ್‌ ಸಿದ್ಧಗೊಳಿಸಲು ಆರಂಭಿಸುತ್ತಾರೆ. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಕೇಕ್ ಮಿಕ್ಸಿಂಗ್‌ ಅದ್ಧೂರಿಯಾಗಿ ನಡೆಯುತ್ತದೆ.

ದೊಡ್ಡ ಟ್ರೇಯಲ್ಲಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಚೆರ್ರಿ ಮತ್ತಿತರ ಒಣಹಣ್ಣುಗಳ ರಾಶಿಯ ಮೇಲೆ ವಿವಿಧ ಬ್ರಾಂಡ್‌ನ ಮದ್ಯವನ್ನು ಹಾಗೂ ವೈನ್‌ ಅನ್ನು ಸುರಿದು ಹದವಾಗಿ ಮಿಶ್ರಣಗೊಳಿಸಲಾಗುತ್ತದೆ. ಕೇಕ್‌ ಮಿಕ್ಸಿಂಗ್‌ ಮಾಡುವಾಗಲೇ ಅವರಲ್ಲಿ ಹಬ್ಬದ ಸಡಗರ ಮನೆ ಮಾಡಿರುತ್ತದೆ. ಮೂರ್ನಾಲ್ಕು ತಿಂಗಳ ಹಿಂದೆಯೇ ತಯಾರಿಸಿ, ಶೇಖರಿಸಿಟ್ಟ ದ್ರಾಕ್ಷಿ ಹಣ್ಣಿನ ವೈನ್‌ ಸಹ ತಿಂಡಿ ತಿನಿಸಿನ ಒಂದು ಭಾಗವಾಗಿದೆ.

ಕ್ರಿಸ್‌ಮಸ್‌ಗೆ ಇನ್ನೂ ಎರಡುವಾರ ಇದ್ದರೂ ತರಹೇವಾರಿ ಕೇಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇವುಗಳ ಪೈಕಿ ಪ್ಲಮ್‌ ಮತ್ತು ರಿಚ್‌ ಪ್ಲಮ್‌ ಕೇಕ್‌ಗೆ ಹೆಚ್ಚಿನ ಬೇಡಿಕೆ. ವೆನಿಲ್ಲಾ, ಪೇಸ್ಟ್ರಿಗಳು ಮಾರಾಟವಾಗುತ್ತಿವೆ. ಗೋಡಂಬಿ, ದ್ರಾಕ್ಷಿ ಸೇರಿದಂತೆ ವೈನ್‌ ಮಿಶ್ರಣ ಮಾಡಿ ತಯಾರಿಸಲಾದ ಪ್ಲಮ್‌ ಕೇಕ್‌ಗೆ ಬೇಡಿಕೆ ಹೆಚ್ಚಿರುತ್ತದೆ ಎನ್ನುತ್ತಾರೆ ರಾಘವೇಂದ್ರ ಬೇಕರಿಯ ನಾಗೇಂದ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !