ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ಖಾದ್ಯಗಳ ಮೆರುಗು...

Last Updated 21 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕ್ರೈಸ್ತರ ಪ್ರಮುಖ ಹಬ್ಬವಾದ ಕ್ರಿಸ್‌ಮಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರಿಗರ ಮನೆ–ಮನದಲ್ಲೂ ಸಂಭ್ರಮ ಮನೆ ಮಾಡಿದೆ. ಮನೆಯ ಅಲಂಕಾರ, ಗೋದಲಿಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕ್ರೈಸ್ತರುಕ್ರಿಸ್‌ಮಸ್‌ ಖಾದ್ಯಗಳತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.

ಕ್ರಿಸ್‌ಮಸ್‌ಗಾಗಿ ಕ್ರೈಸ್ತರು ಇಂಥದ್ದೇ ತಿಂಡಿ ತಯಾರಿಸುತ್ತಾರೆ ಎನ್ನುವಂತಿಲ್ಲ.ಕ್ರಿಸ್‌ಮಸ್‌ ಭೋಜನದಲ್ಲಿ ಒಳಗೊಳ್ಳುವ ಕೆಲವು ಖಾದ್ಯಗಳು ಆಯಾ ಪ್ರದೇಶಗಳಿಗೆ ಭಿನ್ನವಾಗಿರುತ್ತವೆ. ಮಾಂಸಾಹಾರ ಮತ್ತು ವೈನ್ ಬಳಕೆ ಎಲ್ಲರ ಮನೆಗಳಲ್ಲೂ ಸಾಮಾನ್ಯ. ಕ್ರಿಸ್‌ಮಸ್‌ಗೆಂದೇ ತಯಾರಾಗುವ ಕರಿದ ತಿಂಡಿಗಳೂ ಇರುತ್ತವೆ. ಕೇರಳ, ತಮಿಳುನಾಡಿನಿಂದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಬಂದು ನೆಲೆಸಿರುವ ಕ್ರೈಸ್ತರು ತಮ್ಮ ತಮ್ಮ ಊರಿನ ಸಾಂಪ್ರದಾಯಿಕ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ.

ಕ್ರಿಸ್‌ಮಸ್‌ ಸಂಭ್ರಮ ಹೆಚ್ಚಿಸಲು ಹಲವು ಸಿಹಿ ಖಾದ್ಯಗಳೂ ಇವೆ. ಅವುಗಳಲ್ಲಿ ‘ಕುಸ್ವಾರ್’ ಕ್ರೈಸ್ತರ ಅಚ್ಚುಮೆಚ್ಚಿನ ಸಿಹಿ ತಿನಿಸು. ಕ್ರೈಸ್ತರ ಪಾಕಪ್ರಾವೀಣ್ಯತೆಗೆ ಇದು ಸಾಕ್ಷಿ. ಹಲವು ಸಿಹಿಖಾದ್ಯ, ಖಾರದ ತಿಂಡಿಗಳನ್ನು ಒಂದೇ ತಟ್ಟೆಯಲ್ಲಿ ಇಡುವುದಕ್ಕೆ ‘ಕುಸ್ವಾರ್’ ಎಂದು ಹೆಸರು. ಕ್ರಿಸ್‌ಮಸ್‌ಗೆ ಮಾಡುವ ಹಲವು ವಿಭಿನ್ನ ಖಾದ್ಯಗಳಾದ ಚಕ್ಕುಲಿ, ಚಂಪಾಕಲಿ, ರೋಸ್‌ ಕುಕ್ಕಿಸ್‌, ಕೇಕ್‌, ಚಿಪ್ಸ್‌, ರವೆ ಉಂಡೆ, ಕರ್ಜಿಕಾಯಿ ಸೇರಿದಂತೆ ಹಲವು ತಿನಿಸುಗಳನ್ನು ತಟ್ಟೆಯಲ್ಲಿ ಇಟ್ಟು ಅಲಂಕರಿಸಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಬನ್ನಿಮಂಟಪದ ಅನಿಲ್‌ ಫರ್ನಾಂಡಿಸ್‌.

ಕ್ರಿಸ್‌ಮಸ್‌ ಹಬ್ಬದಂದು ಪ್ರಾರ್ಥನೆಗೆ ತೆರಳುವ ಭಕ್ತರು ‘ಕುಸ್ವಾರ್‌’ ಅನ್ನು ಚರ್ಚ್‌ಗಳಿಗೆ ತೆಗೆದುಕೊಂಡು ಹೋಗುವುದು ವಾಡಿಕೆ. ಈ ಖಾದ್ಯಗಳನ್ನು ಪ್ರಸಾದದ ರೀತಿಯಲ್ಲಿ ಚರ್ಚ್‌ಗಳಲ್ಲಿ ವಿತರಿಸಲಾಗುತ್ತದೆ.ಕ್ರಿಸ್‌ಮಸ್‌ ಹಬ್ಬಕ್ಕೆ ಬರುವ ಅತಿಥಿಗಳಿಗೂ ‘ಕುಸ್ವಾರ್‌’ ನೀಡಿ ಸತ್ಕರಿಸಲಾಗುತ್ತದೆ.

ಮೈಸೂರಿನ ಕೆಲವು ಹೋಟೆಲ್‌ಗಳಲ್ಲೂ ಕ್ರಿಸ್‌ಮಸ್‌ ವಿಶೇಷ ತಿನಿಸುಗಳ ಮಾಸಾಚರಣೆ ಆರಂಭಿಸಿವೆ. ಈ ಮಾಸಾಂತ್ಯದವರೆಗೂ ಮಾಂಸಾಹಾರ ಖಾದ್ಯ ಮತ್ತು ವೈನ್‌ಗಳನ್ನು ಆಹಾರ ಪ್ರಿಯರಿಗೆ ಉಣಬಡಿಸಲಿವೆ.

ಕ್ರಿಸ್‌ಮಸ್‌ ಪ್ರಯುಕ್ತ ಮಹಿಳೆಯರು ಮನೆಗಳಲ್ಲಿ ಕುರಕಲು ತಿಂಡಿ ತಯಾರಿಸುತ್ತಾರೆ. ಕಲ್‌ಕಲಾ, ಮೊಟ್ಟೆ ಕಜ್ಜಾಯ, ಕರ್ಜಿಕಾಯಿ, ಕೋಡುಬಳೆ, ಗುಲಾಬ್‌ ಜಾಮೂನ್, ಕರಿದ ಅವಲಕ್ಕಿ, ಚಕ್ಕುಲಿ, ರೋಜ್‌ ಕುಕ್‌, ನಿಪ್ಪಟ್ಟು, ಕೇಕ್‌, ಕ್ಯಾರೆಟ್‌ ಹಲ್ವಾ, ಅಕ್ಕಿ ಮಿಠಾಯಿ (ಬೆಲ್ಲ–ಅಕ್ಕಿ ಹಿಟ್ಟು ಸೇರಿಸಿ ತಯಾರಿಸಿದ ಸಿಹಿ ತಿನಿಸುಗಳು)ಕ್ರಿಸ್‌ಮಸ್‌ ತಯಾರಿಸುವ ನೆಚ್ಚಿನ ತಿನಿಸುಗಳಾಗಿವೆ.

ಕೇಕ್‌, ವೈನ್‌: ಕ್ರಿಸ್‌ಮಸ್‌ನಲ್ಲಿ ವೈನ್‌ ಹಾಗೂ ಕೇಕ್‌ಗೆ ಮಹತ್ವ ಹೆಚ್ಚು. ಕೇಕ್‌ ಇಲ್ಲದ ಹಬ್ಬ ಅಪೂರ್ಣ ಎನ್ನಬಹುದು. ಮನೆಗಳಲ್ಲಿ ಸ್ವೀಟ್‌ ವೈನ್‌ ತಯಾರಿಸುತ್ತಾರೆ. ನೆಲ್ಲಿಕಾಯಿ, ದ್ರಾಕ್ಷಿಯಿಂದಲೂ ವೈನ್‌ ಅನ್ನು ಮನೆಗಳಲ್ಲಿ ತಯಾರಿಸುತ್ತಾರೆ. ಮನೆಗೆ ಬರುವ ಅತಿಥಿಗಳಿಗೆ ಕೇಕ್‌ ನೀಡಿ ಸ್ವಾಗತಿಸಿ, ರೋಸ್‌ ಕುಕ್ಕಿಸ್‌ ಮೊದಲಾದ ಖಾದ್ಯಗಳನ್ನು ನೀಡಿ ಹಬ್ಬದ ಸಂಭ್ರಮವನ್ನು ಆಚರಿಸುವುದು ವಾಡಿಕೆ ಎನ್ನುತ್ತಾರೆ ಫಾ.ವಿಜಯಕುಮಾರ್‌.

ಮೈಸೂರಿನ ಕೆಲವು ಬೃಹತ್‌ ಹೋಟೆಲ್‌ಗಳಲ್ಲಿ, ಮನೆಗಳಲ್ಲಿಯೂ ಕೇಕ್ ಮಿಕ್ಸಿಂಗ್‌ ಕೂಡ ನಡೆಯುತ್ತದೆ. ದೊಡ್ಡ ಟ್ರೇಯಲ್ಲಿ ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಚೆರ್ರಿ ಮೊದಲಾದ ಒಣಹಣ್ಣುಗಳ ರಾಶಿಯ ಮೇಲೆ ವಿವಿಧ ಬ್ರಾಂಡ್‌ನ ವೈನ್‌ ಸುರಿದು ಹದವಾಗಿ ಮಿಶ್ರಣಗೊಳಿಸಲಾಗುತ್ತದೆ.

ಕ್ರಿಸ್‌ಮಸ್‌ ಸಂದರ್ಭ ನಮಲ್ಲಿ ಕೇಕ್‌ಗಳಿಗೆ ಬೇಡಿಕೆ ಹೆಚ್ಚು. ವಿವಿಧ ರೀತಿಯ ಕೇಕ್‌ಗಳನ್ನು ನಾವು ತಯಾರಿಸುತ್ತೇವೆ. ಪ್ಲಮ್‌ ಮತ್ತು ರಿಚ್‌ ಪ್ಲಮ್‌ ಕೇಕ್‌ಗೆ ಬೇಡಿಕೆ ಹೆಚ್ಚು. ವೆನಿಲ್ಲಾ, ಪೇಸ್ಟ್ರಿಗಳು ಮಾರಾಟವಾಗುತ್ತಿವೆ. ಗೋಡಂಬಿ, ದ್ರಾಕ್ಷಿ ಸೇರಿದಂತೆ ವೈನ್‌ ಮಿಶ್ರಣ ಮಾಡಿ ತಯಾರಿಸಲಾದ ಪ್ಲಮ್‌ ಕೇಕ್‌ ಅನ್ನೇ ಗ್ರಾಹಕರು ಕೇಳುತ್ತಾರೆ ಎನ್ನುತ್ತಾರೆ ಅಂಕಲ್‌ ಸ್ವೀಟ್ಸ್‌ನ ರಾಜಾರಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT