ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌; ಬಡ ವಿದ್ಯಾರ್ಥಿಗಳಿಗೆ ಆಸರೆ

Last Updated 21 ಡಿಸೆಂಬರ್ 2018, 19:40 IST
ಅಕ್ಷರ ಗಾತ್ರ

ಪ್ರೀತಿ ಮತ್ತು ಶಾಂತಿಯ ಸಂಕೇತವಾದ ಕ್ರಿಸ್‌ಮಸ್‌ ಕ್ರೈಸ್ತರಿಗೆ ಪವಿತ್ರ ಹಬ್ಬ. ಯೇಸುಕ್ರಿಸ್ತ ಹುಟ್ಟಿದ ದಿನವನ್ನು ಜಗತ್ತಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಬಡವರಿಗೆ ಸಹಾಯಹಸ್ತ ಚಾಚಬೇಕು ಎಂಬುದು ಹಬ್ಬದ ಧ್ಯೇಯ. ನಗರದ ಬನ್ನಿಮಂಟಪದ ಬಳಿ ಇರುವ ಸೇಂಟ್ ಫಿಲೋಮಿನಾಸ್ ಶಿಕ್ಷಣ ಸಂಸ್ಥೆಯು ಈ ಧ್ಯೇಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದೆ.

ಚಾರಿಟಿ ಮೂಲಕ ಬಡ ವಿದ್ಯಾರ್ಥಿಗಳ ಶುಲ್ಕ ಪಾವತಿಸುತ್ತಿದ್ದ ಸಂಸ್ಥೆಯು ಈ ವರ್ಷ ಕ್ರಿಸ್‌ಮಸ್‌ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದೆ. ಬಡವರ ಬಗ್ಗೆ ವಿದ್ಯಾರ್ಥಿಗಳಲ್ಲೂ ಕಾಳಜಿ ಮೂಡಿಸುವ ಉದ್ದೇಶದಿಂದ ಕಾರ್ನಿವಲ್‌ ಆಯೋಜನೆ ಮಾಡಿತ್ತು. ಅದರಿಂದ ಸಂಗ್ರಹವಾದ ಹಣವನ್ನು ಚಾರಿಟಿ ನಿಧಿಗೆ ನೀಡಲಾಯಿತು.

ಕ್ರಿಸ್‌ಮಸ್‌ಗೂ 10 ದಿನಗಳ ಮುನ್ನ ಕಾಲೇಜು ನವ ವಧುವಿನಂತೆ ಸಿಂಗಾರ ಗೊಂಡಿತ್ತು. ಕಾಲೇಜು ಆವರಣದ ತುಂಬ ಝಗಮಗಿಸುವ ವಿದ್ಯುತ್ ದೀಪಗಳ ಚಿತ್ತಾರ. ಅಲ್ಲಲ್ಲಿ ತಲೆಎತ್ತಿದ ಕ್ರಿಸ್ಮಸ್ ಮರಗಳು, ಅವುಗಳಿಗೆ ವಿದ್ಯುತ್ ದೀಪಗಳು ಹಾಗೂ ನಕ್ಷತ್ರಗಳ ವಯ್ಯಾರ. ಸಂಜೆ ಆಗುತ್ತಿದ್ದಂತೆ ಇಡೀ ಕಾಲೇಜಿನ ಆವರಣ ಸುಂದರ- ನಯನ ಮನೋಹರ.

ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿಯ ಎಲ್ಲ ವಿದ್ಯಾರ್ಥಿಗಳು ಜಾತಿ, ಧರ್ಮಭೇದವಿಲ್ಲದೆ ಈ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷ. ಇದು ನಮ್ಮ ಹಬ್ಬ ಎಂದು ಭಾವಿಸಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.

ಕಾರ್ನಿವಲ್: ಯಾವುದೇ ಆಚರಣೆಗೆ ಅರ್ಥ ಬರುವುದು ಅದರಿಂದ ಇನ್ನೊಬ್ಬರಿಗೆ ಆಗುವ ಒಳಿತಿನಿಂದಾಗಿ. ಎಷ್ಟೋ ವಿದ್ಯಾರ್ಥಿಗಳು ಶುಲ್ಕ ಪಾವತಿಸುವ ಶಕ್ತಿ ಇಲ್ಲದೆ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮನೋಭಾವವನ್ನು ಸ್ಥಿತಿವಂತ ವಿದ್ಯಾರ್ಥಿಗಳಲ್ಲೂ ಮೂಡಿಸಬೇಕು ಎಂಬ ಉದ್ದೇಶದಿಂದ ಕಾರ್ನಿವಲ್‌ ಆಯೋಜಿಸಲಾಗಿತ್ತು. ಓಪನ್‌ ಫೆಸ್ಟಿವಲ್‌ ಮಾದರಿಯಲ್ಲಿ ಇದನ್ನು ಆಚರಿಸಲಾಯಿತು. ಕಾಲೇಜಿನ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತರಹೇವಾರಿ ಖಾದ್ಯಗಳನ್ನು ಮಾಡಿಕೊಂಡು ಬಂದು ಮಾರಾಟ ಮಾಡಿದರು. ಇದರಿಂದ ಬಂದ ಹಣವನ್ನು ಚಾರಿಟಿಗೆ ನೀಡಿದರು.

ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲ ವಿದ್ಯಾರ್ಥಿಗಳು ವಿವಿಧ ತಿಂಡಿ- ತಿನಿಸುಗಳನ್ನು ತಂದಿದ್ದರು. ಕೆಲವರು ಸ್ವತಃ ತಯಾರಿಸಿದರೆ, ಇನ್ನೂ ಕೆಲವರು ಸಿದ್ಧ ತಿಂಡಿ–ತಿನಿಸುಗಳನ್ನು ಖರೀದಿಸಿ ತಂದಿದ್ದರು. ವಿದೇಶಿ ವಿದ್ಯಾರ್ಥಿಗಳೂ ತಮ್ಮ ಸ್ಥಳೀಯ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬಂದು ಮಾರಾಟ ಮಾಡಿದ್ದು ಗಮನ ಸೆಳೆಯಿತು.

ವಿವಿಧ ಕೇಕ್‌ಗಳು, ಮುದ್ದೆ, ನಾಟಿಕೋಳಿ ಸಾಂಬಾರ್, ಚಿಕನ್ ಬಿರಿಯಾನಿ, ಒಬ್ಬಟ್ಟು, ಪುಳಿಯೊಗರೆ ಸೇರಿದಂತೆ ಸಸ್ಯಾಹಾರ ಹಾಗೂ ಮಾಂಸಾಹಾರದ ಖಾದ್ಯಗಳು ಆಹಾರಪ್ರಿಯರ ಜಿಹ್ವಾ ಚಾಪಲ್ಯವನ್ನು ತಣಿಸಿದ್ದವು.

ವಿವಿಧ ಆಟಗಳು: ಬಲೂನ್ ಹೊಡೆಯುವುದು, ಚಕ್ರದ ಮಧ್ಯಕ್ಕೆ ಗುರಿ ಇಟ್ಟು ಹೊಡೆಯುವುದು, ನೀರಿನಿಂದ ತೇವಗೊಂಡ ಇಟ್ಟಿಗೆಯನ್ನು ಎರಡು ಬೆರಳುಗಳಲ್ಲಿ ಹಿಡಿದುಕೊಳ್ಳುವುದು ಸೇರಿದಂತೆ ಅನೇಕ ಆಟಗಳನ್ನು ಆಡಿಸಲಾಯಿತು. ಈ ಆಟಗಳಲ್ಲಿ ಪಾಲ್ಗೊಳ್ಳಬೇಕಾದರೆ ಪ್ರತಿ ಆಟಕ್ಕೂ ₹10 ಶುಲ್ಕ ನಿಗದಿ ಪಡಿಸಲಾಗಿತ್ತು. ಆಸಕ್ತರು ಶುಲ್ಕ ಪಾವತಿಸಿ ಆಟಗಳಲ್ಲಿ ಪಾಲ್ಗೊಂಡರು. ಇದರಿಂದ ಬಂದ ಹಣವನ್ನೂ ಚಾರಿಟಿಗೆ ನೀಡಲಾಯಿತು.

ಫೋಟೊ ಬೂತ್

ಪತ್ರಿಕೋದ್ಯಮ ವಿದ್ಯಾರ್ಥಿಗಳು ಫೋಟೊ ಬೂತ್ ಮಾಡಿದ್ದರು. ವಿದ್ಯಾರ್ಥಿಗಳು ಕ್ರಿಸ್‌ಮಸ್‌ ಟೋಪಿ, ವಿವಿಧ ಮುಖವಾಡಗಳನ್ನು ಹಾಕಿಕೊಂಡು ಫೋಟೊ ತೆಗೆಸಿಕೊಳ್ಳಬಹುದಿತ್ತು. ವಿದ್ಯಾರ್ಥಿಗಳು ವಿವಿಧ ವೇಷಗಳಲ್ಲಿ ಫೋಟೊ ತೆಗೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT