ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ವೀರ್‌ಸೇಠ್‌ ಮೇಲಿನ ಹಲ್ಲೆ ಪ್ರಕರಣ" ವಿಫಲಗೊಂಡ ಗುಪ್ತಚರ ಇಲಾಖೆ

ಕೂದಲೆಳೆ ಮಾಹಿತಿಯನ್ನೂ ಬಿಟ್ಟು ಕೊಡದ ಆರೋಪಿಗಳು
Last Updated 20 ನವೆಂಬರ್ 2019, 11:23 IST
ಅಕ್ಷರ ಗಾತ್ರ

ಮೈಸೂರು: ಶಾಸಕ ತನ್ವೀರ್‌ಸೇಠ್‌ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಗುಪ್ತಚರ ಇಲಾಖೆಯ ವೈಫಲ್ಯವನ್ನು ಸಾಬೀತುಪಡಿಸಿದೆ.

ಹಲ್ಲೆ ನಡೆಯುವ ಸಾಧ್ಯತೆ ಇದೆ ಎನ್ನುವ ಒಂದು ಸಾಲಿನ ಎಚ್ಚರಿಕೆಯನ್ನೂ ಇಲಾಖೆ ಪೊಲೀಸರಿಗೆ ನೀಡುವಲ್ಲಿ ಮಾತ್ರವಲ್ಲ ಗ್ರಹಿಸುವಲ್ಲಿಯೂ ಎಡವಿದೆ. ಇದು ಇಲಾಖೆಯ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕಿದೆ ಎನ್ನುವ ಅಂಶದತ್ತ ಬೊಟ್ಟು ಮಾಡಿದೆ.

ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದರ ಕಾರ್ಯಸೂಚಿ ಬದಲಾಗಿರುವ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಮತ್ತು ಅದಕ್ಕೆ ತಕ್ಕಂತೆ ಸೂಚನೆಗಳನ್ನು ರವಾನಿಸುವಲ್ಲಿಯೂ ಇಲಾಖೆ ಸಂಪೂರ್ಣವಾಗಿ ವಿಫಲಗೊಂಡಿದೆ.

ಒಂದು ವೇಳೆ ಕೇರಳದಲ್ಲಿ ಜುಲೈನಿಂದ ಈಚೆಗೆ ನಡೆದಿರುವ ಮುಸ್ಲಿಂ ಧರ್ಮದ ಮುಖಂಡರ ಹತ್ಯೆ ಹಾಗೂ ಮುಸ್ಲಿಂ ಧರ್ಮಗುರುವೊಬ್ಬರ ಮೇಲೆ ನಡೆದ ದಾಳಿಯನ್ನು ಪರಿಗಣಿಸಿದಿದ್ದರೆ ಬಹುಶಃ ತನ್ವೀರ್‌ಸೇಠ್ ಅವರ ಮೇಲಿನ ಹಲ್ಲೆಯನ್ನು ತಡೆಗಟ್ಟಬಹುದಿತ್ತು ಎಂಬ ಚರ್ಚೆ ಇದೀಗ ಆರಂಭವಾಗಿದೆ.

ರಾಜ್ಯ ಗುಪ್ತಚರ ಇಲಾಖೆಯು ಲಭ್ಯ ಇರುವ ಅಂಕಿಅಂಶಗಳು, ಮಾಹಿತಿಯ ಮೇರೆಗೆ ಸೂಚನೆಗಳನ್ನು ಕೊಡುತ್ತದೆ. ಆದರೆ, ಅದು ಕೇವಲ ರಾಜ್ಯದ ಬೆಳವಣಿಗೆಗಷ್ಟೇ ಸೀಮಿತಗೊಳ್ಳದೇ ಪಕ್ಕದ ರಾಜ್ಯದ ವಿದ್ಯಮಾನಗಳತ್ತಲೂ ಗಮನಹರಿಸಬೇಕಿತ್ತು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಕೇಂದ್ರ ಗುಪ್ತಚರ ಇಲಾಖೆಯೂ ಬಹುದೊಡ್ಡ ಮೂಲಭೂತವಾದಿ ಸಂಘಟನೆಯ ಬದಲಾದ ಕಾರ್ಯಸೂಚಿಯನ್ನು ಗ್ರಹಿಸಿ ಮಾಹಿತಿ ನೀಡಬೇಕಿತ್ತು. ಕೇರಳದ ವಿದ್ಯಮಾನಕ್ಕೂ ಮೈಸೂರಿನ ಪರಿಸ್ಥಿತಿಗೂ ತಾಳೆ ಹಾಕಬೇಕಿತ್ತು. ಒಂದು ವೇಳೆ ಈ ಅಂಶವನ್ನು ಗ್ರಹಿಸಿದ್ದರೆ ತನ್ವೀರ್‌ಸೇಠ್‌ಗೆ ನೀಡಲಾಗಿದ್ದ ಭದ್ರತೆಯನ್ನು ಪೊಲೀಸರು ಹೆಚ್ಚಿಸುತ್ತಿದ್ದರು ಎಂದು ಅವರು ಹೇಳುತ್ತಾರೆ.

ಗುಪ್ತಚರ ಇಲಾಖೆಗೆ ಸಿಬ್ಬಂದಿಯ ಕೊರತೆಗಿಂತ ಅಧಿಕಾರಿಗಳ ಕೊರತೆಯೇ ಬಹುವಾಗಿ ಕಾಡುತ್ತಿದೆ. ಸರ್ಕಾರದ ವಿರೋಧವಾಗಿ ಕೆಲಸ ಮಾಡುವ ಸಂಘಟನೆಗಳತ್ತಲೇ ಸಿಬ್ಬಂದಿ ಯಾವಾಗಲೂ ಕಣ್ಣಿಟ್ಟಿರುತ್ತಾರೆ. ಆದರೆ, ಇಂತಹ ಘಟನೆಗಳನ್ನೂ ಪರಿಶೀಲಿಸಬೇಕು ಎಂಬ ಪಾಠವನ್ನು ಹಲ್ಲೆ ಪ್ರಕರಣ ಕಲಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT