ಪುರರ ಹಿತ ಕಾಪಾಡುವ ಪೌರಕಾರ್ಮಿಕರು ಪುರೋಹಿತರು: ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

7
‘ಕಕ್ಕಸ್ಸು’ ಕೃತಿ ಬಿಡುಗಡೆ ಕಾರ್ಯಕ್ರಮ

ಪುರರ ಹಿತ ಕಾಪಾಡುವ ಪೌರಕಾರ್ಮಿಕರು ಪುರೋಹಿತರು: ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

Published:
Updated:
Deccan Herald

ಮೈಸೂರು: ‘ಪೂಜೆ ಮಾಡುವವರು ಪುರೋಹಿತರು ಅಲ್ಲ. ಬದಲಾಗಿ ಪುರರ ಹಿತವನ್ನು ಕಾಪಾಡುವ ಪೌರಕಾರ್ಮಿಕರು ಪುರೋಹಿತರು. ಬಿದ್ದ ಕಸವನ್ನು ಎತ್ತುವರು ಶ್ರೇಷ್ಠರು’ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ಎವಿಎಸ್‌ಎಸ್‌ ಪ್ರಕಾಶನ ಭಾನುವಾರ ಇಲ್ಲಿ ಆಯೋಜಿಸಿದ್ದ ‘ಕಕ್ಕಸ್ಸು–ನಾವೆಷ್ಟು ತಿನ್ನುತ್ತಿದ್ದೇವೆ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೇರೆಯವರ ಹೇಸಿಗೆ ತಿನ್ನುವ ಹಂದಿ ತನ್ನ ಹೇಸಿಗೆ ತಿನ್ನುವುದಿಲ್ಲ. ಆದರೆ, ಮನುಷ್ಯರು ತಮ್ಮ ಕಕ್ಕಸ್ಸನ್ನು ತಮಗೆ ಅರಿವಿಲ್ಲದೇ ತಿನ್ನುತ್ತಿದ್ದಾರೆ. ಬಯಲು ಶೌಚದ ಮೇಲೆ ಕೂರುವ ನೊಣಗಳು ಬಂದು ಆಹಾರದ ಮೇಲೆ ತಮ್ಮ ಕಾಲುಗಳನ್ನು ಚಾಚುತ್ತಿವೆ’ ಎಂದರು.

‘ಈ ಕಾಲದಲ್ಲೂ ಶೌಚಾಲಯ ನಿರ್ಮಿಸದಿರುವುದು ಸೋಜಿಗದ ಸಂಗತಿ. ಗರ್ಭಗುಡಿಯಲ್ಲಿ ದೇವರಿಟ್ಟು ಪೂಜಿಸುತ್ತಾರೆ. ಆದರೆ, ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಕೂರಿಸುತ್ತಿದ್ದೇವೆ. ಮನು ಸಂವಿಧಾನವು ಹೆಣ್ಣು ಮಕ್ಕಳನ್ನು ಹೆರಿಗೆ ಕಾರ್ಖಾನೆ ಮಾಡಿಕೊಂಡಿತ್ತು. ಗರ್ಭಗುಡಿ ಪ್ರವೇಶ ನಿಷೇಧಿಸಿತ್ತು. ಹೆಣ್ಣು ಮಕ್ಕಳ ಶೌಚಾಲಯಕ್ಕಾಗಿ ಮೊದಲು ಮಸೂದೆ ಮಂಡಿಸಿದವರು ಡಾ.ಬಿ.ಆರ್‌.ಅಂಬೇಡ್ಕರ್‌’ ಎಂದು ನುಡಿದರು.‌

‘ಈ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ರಾಜಕಾರಣಿಗಳು ಬಂದಿಲ್ಲ. ಪುಸ್ತಕಕ್ಕೆ ಕಕ್ಕಸ್ಸು ಎಂಬ ಹೆಸರು ಇಟ್ಟಿರುವುದು ಅವರ ಗೈರಿಗೆ ಕಾರಣ ಇರಬಹುದು’ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಮಾತನಾಡಿ, ‘ಪಿಡಿಒ ಮಹದೇವಸ್ವಾಮಿ ತಮ್ಮ ಸ್ವಂತ ಆಸಕ್ತಿಯಿಂದ ಹೆಬ್ಜಾಲ ಗ್ರಾಮವನ್ನು ಬಯಲು ಶೌಚ ಮುಕ್ತ ಮಾಡಲು ಶ್ರಮಿಸಿದ ರೀತಿ ಮಾದರಿ. ಅಧಿಕಾರಿಗಳ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಅವರ ಈ ಕೆಲಸ ಅನನ್ಯವಾದದು. ಆ ಸಾಧನೆಯನ್ನು ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ’ ಎಂದರು.‌

ಜಿ.ಪಂ ಹಿಂದಿನ ಸಿಇಒ ಪಿ.ಶಿವಶಂಕರ್‌, ‘ಸರ್ಕಾರಿ ನೌಕರಿ ಮಾಡಲು ಬುದ್ಧಿವಂತಿಕೆ ಬೇಕಿಲ್ಲ. ಬದಲಾಗಿ ಸಾಮಾಜಿಕ ಕಾಳಜಿ ಇದ್ದರೆ ಸಾಕು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳು ಬುದ್ಧಿವಂತರನಷ್ಟೇ ಅಧಿಕಾರಿಗಳನ್ನಾಗಿ ಮಾಡುತ್ತಿವೆ’ ಎಂದು ಹೇಳಿದರು.

ಸಾಹಿತಿ ಕೆ.ಎಸ್‌.ಭಗವಾನ್‌ ಮಾತನಾಡಿ, ‘ಮನುಷ್ಯನೇ ದೊಡ್ಡ ಕಕ್ಕಸು ಗುಂಡಿ. ಹೊರಗಿನ ಕಕ್ಕಸ್ಸನ್ನು ತೆಗೆಯಬಹುದು. ಆದರೆ, ಮನಸ್ಸಿನಲ್ಲಿ ತುಂಬಿಕೊಂಡಿರುವ ಕೊಳಕು ತೆಗೆಯಲು ಸಾಧ್ಯವಿಲ್ಲ. ಹಾಗೆಯೇ, ಜಾತಿಯ ಕಕ್ಕಸು ಭಯಂಕರವಾಗಿದೆ. ಅದನ್ನು ಬಗೆಹರಿಸಲು ದೊಡ್ಡ ಆಂದೋಲನವೇ ನಡೆಯಬೇಕಿದೆ’ ಎಂದರು.

ಛಲವಾದಿ ಬಸವನಾಗಿದೇವ ಸ್ವಾಮೀಜಿ, ಮಾಜಿ ಮೇಯರ್‌ ಪುರುಷೋತ್ತಮ, ಜಿ.ಪಂ ಸದಸ್ಯೆ ಮಂಗಳಾ ಸೋಮಶೇಖರ್‌, ಪಿಡಿಒ ಮಹದೇವಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !