ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ದೆಹಲಿ ಪರೇಡ್‌ನಲ್ಲಿ ಮೈಸೂರಿನ ವಿದ್ಯಾರ್ಥಿಗಳು

Last Updated 25 ಜನವರಿ 2019, 13:52 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವ ಎಂದರೆ ಅದೊಂದು ದೇಶಪ್ರೇಮವನ್ನು ಉಕ್ಕೇರಿಸುವ ದಿನ. ಭಾರತದ ಪಾಲಿಗೆ ಜನವರಿ26 ಹಾಗೂ ಆಗಸ್ಟ್ 15 ಎರಡೂ ಮಹತ್ವದ ದಿನಗಳು. ಬ್ರಿಟಿಷರು ಭಾರತ ಬಿಟ್ಟು ಹೋದ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿದರೆ, ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನೆಲ್ಲ ಒಗ್ಗೂಡಿಸಿದ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ. ಇಂದಿನ ಏಕಗ್ರ ಭಾರತ ರಚನೆಯಾದದ್ದೇ 1950ರ ಜನವರಿ 26ರಂದು.

ಭಾರತವು ಸ್ವಾತಂತ್ರ್ಯಗೊಂಡ ನಂತರ ಆಗಸ್ಟ್ 29ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಕರಡು ಸಮಿತಿಯನ್ನು ನೇಮಕ ಮಾಡಲಾಯಿತು. ನವೆಂಬರ್ 4ರಂದು ಶಾಸನ ಸಭೆಯಲ್ಲಿ ಮಂಡಿಸಲಾಯಿತು. 1949ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಅಂತಿಮವಾಗಿ 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು.

ದೇಶಕ್ಕೊಂದು ಸೂತ್ರ ಹಾಕಿಕೊಟ್ಟ ಈ ದಿನವನ್ನು ನೆನಪಿಡುವುದು ಮತ್ತು ಗೌರವಿಸುವುದು ಎಲ್ಲರ ಕರ್ತವ್ಯ. ದೇಶಪ್ರೇಮ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಆಚರಣೆಗಳು ಯುವಜನರಿಗೆ ತೀರಾ ಅಗತ್ಯ ಎನಿಸಿದೆ.

ಗಣರಾಜ್ಯೋತ್ಸವ ದಿನದಂದು ನವದೆಹಲಿಯಲ್ಲಿ ನಡೆಯುವ ಪರೇಡ್‌ನಲ್ಲಿ ಭಾಗವಹಿಸುವ ಅದೃಷ್ಟ ಎಲ್ಲರಿಗೂ ಒಲಿಯುವಂತದ್ದಲ್ಲ. ಇಂತಹ ಅಪರೂಪದ ಅವಕಾಶವನ್ನು ಜಿಲ್ಲೆಯ 10 ಎನ್‌ಸಿಸಿ ವಿದ್ಯಾರ್ಥಿಗಳು ಪಡೆದಿರುವುದು ಗಮನಾರ್ಹ.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಆರ್ಯನ್ ಡಿ. ಅರ್ಷಿತ್, ಸಚ್ಚಿತ್ ನಿರಂಜನ್ ಪ್ರಭು, ಮಹಾಜನ ಕಾಲೇಜಿನ ಬಿ.ಕೆ.ಅರವಿಂದ್, ವಿದ್ಯಾವಿಕಾಸ ಕಾಲೇಜಿನ ಎ.ಎಚ್.ಅರ್ಜುನ್ ರಾವ್, ಮಹಾರಾಜ ಕಾಲೇಜಿನ ಎಂ.ಮಂಜು, ಯುವರಾಜ ಕಾಲೇಜಿನ ಎಸ್.ಪ್ರದೀಪ್, ಜೆಎಸ್‌ಎಸ್ ಮಹಿಳೆಯರಿಗಾಗಿ ಪಾಲಿಟೆಕ್ನಿಕ್ ಕಾಲೇಜಿನ ಎಂ.ಆರ್.ಚಂದನಾ, ಎಸ್‌ಬಿಆರ್‌ಆರ್‌ ಮಹಾಜನ ಕಾಲೇಜಿನ ಎಸ್.ಲಿಖಿತಾ, ಟೆರೆಷಿಯನ್ ಕಾಲೇಜಿನ ಪಿ.ಸಹನಾ, ಯುವರಾಜ ಕಾಲೇಜಿನ ಜೆ.ಪಿ.ಐಶ್ವರ್ಯ ಸ್ಥಾನ ಪಡೆದಿದ್ದಾರೆ.

ಎನ್ಎಸ್‌ಎಸ್‌ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಯಾರೂ ಆಯ್ಕೆಯಾಗಿಲ್ಲ. ಆದರೆ, 7 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಐವರು ಮೈಸೂರಿನವರು. ಎಂಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜಿನ (ದ್ವಿತೀಯ ಬಿ.ಕಾಂ) ಕೆ.ಜಿ.ಅಸ್ಮಿಕಾ ಪೊನ್ನಮ್ಮ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ (ದ್ವಿತೀಯ ಬಿಎಸ್ಸಿ) ಟಿ.ಎಂ.ಸುಷ್ಮಾ, ನಟರಾಜ ಕಾಲೇಜಿನ (ದ್ವಿತೀಯ ಬಿ.ಕಾಂ) ಮಹಿಮಾ ಮಹೇಶ್, ವಿಜಯನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಿ.ವಿ.ನಂದಿನಿ (ದ್ವಿತೀಯ ಬಿ.ಕಾಂ), ಸಾಲಿಗ್ರಾಮದ ಎಂ.ಅರುಣಾ (ದ್ವಿತೀಯ ಬಿ.ಕಾಂ) ಮೈಸೂರು ಜಿಲ್ಲೆಯವರು.

ಪ್ರತಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ವಿದ್ಯಾರ್ಥಿಗಳಿಗೆ ಇದೊಂದು ಅಪೂರ್ವ ಅವಕಾಶ. ಇದು ಕೇವಲ ಕಾಲೇಜಿಗೆ ಮಾತ್ರವಲ್ಲ ಜಿಲ್ಲೆಗೆ ಹೆಮ್ಮೆಯ ಸಂಗತಿ. ಈ ಕುರಿತು ಕಾಲೇಜುಗಳಲ್ಲಿ ಸಾಕಷ್ಟು ಪ್ರಚಾರ ನಡೆಸಿ ಹೆಚ್ಚಿನ ವಿದ್ಯಾರ್ಥಿಗಳು ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ಗೆ ಸೇರುವಂತೆ ಮಾಡುವ ಅವಕಾಶ ಇದೆ. ಆದರೆ, ಈ ಕುರಿತು ಹೆಚ್ಚಿನ ಗಮನ ವಹಿಸುತ್ತಿಲ್ಲ.

ಈ ಬಾರಿ ಗಣರಾಜ್ಯೋತ್ಸವದ ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಪುರುಷ ತುಕಡಿಗೆ ಸಾರಥ್ಯ ವಹಿಸುವುದು. ಇದುವರೆಗೂ ಪುರುಷರಿರುವ ತುಕಡಿಗೆ ಅವರೇ ನಾಯಕತ್ವ ವಹಿಸುತ್ತಿದ್ದರು. ಆದರೆ, ಈ ಬಾರಿ ಲೆಫ್ಟಿನೆಂಟ್ ಭಾವನಾ ಕಸ್ತೂರಿ ಅವರು 144 ಯೋಧರನ್ನು ಪಥಸಂಚಲನದಲ್ಲಿ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT