ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ ವ್ಯಾಪ್ತಿಗೆ ಶಾಸ್ತ್ರೀಯ ಕನ್ನಡ ಕೇಂದ್ರ?

ಸ್ವಾಯತ್ತೆಗೆ ಧಕ್ಕೆ ಸಾಧ್ಯತೆ, ಸಿಐಐಎಲ್‌ ಅನ್ನು ವಿಶ್ವವಿದ್ಯಾಲಯವಾಗಿಸಲು ನಿರ್ಧಾರ
Last Updated 21 ಡಿಸೆಂಬರ್ 2020, 10:06 IST
ಅಕ್ಷರ ಗಾತ್ರ

ಮೈಸೂರು: ಭಾರತೀಯ ಭಾಷಾ ಸಂಸ್ಥಾನವನ್ನು (ಸಿಐಐಎಲ್‌) ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ (ಬಿಬಿವಿ) ಪರಿವರ್ತಿಸಲು ನಿರ್ಧರಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯವು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನುಈ ವಿಶ್ವವಿದ್ಯಾಲಯವ್ಯಾಪ್ತಿಗೆ ಸೇರಿಸಲು ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.

ಬಿಬಿವಿ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾನ್ಸಲೇಷನ್‌ ಅಂಡ್‌ ಇಂಟರ್‌ಪ್ರಿಟೇಷನ್‌ (ಐಐಟಿಐ) ಸಂಸ್ಥೆ ಸ್ಥಾಪಿಸುವ ಸಂಬಂಧ ಅದರ ಸ್ವರೂಪ, ವಿಧಾನಗಳ ರೂಪುರೇಷೆ ಸಿದ್ಧಪಡಿಸಲು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಎನ್‌.ಗೋಪಾಲಸ್ವಾಮಿ ಅಧ್ಯಕ್ಷತೆಯಲ್ಲಿ 11 ಸದಸ್ಯರ ಸಮಿತಿ ರಚಿಸಿದೆ. ಬಿಬಿವಿ, ಐಐಟಿಐಯ ಗುರಿ, ಉದ್ದೇಶ ಹಾಗೂ ಮೂಲಸೌಕರ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದೆ.

ಅಲ್ಲದೆ, ಈ ಉದ್ದೇಶಿತ ವಿಶ್ವವಿದ್ಯಾಲಯದೊಳಗೆ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳ ಕಾರ್ಯ ನಿರ್ವಹಣೆಯನ್ನು ಹೇಗೆ ಅಳವಡಿಸಬಹುದು ಎಂಬ ಬಗ್ಗೆ ವರದಿ ನೀಡುವಂತೆಯೂ ಸೂಚಿಸಿರುವುದು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಬಿಬಿವಿ ವ್ಯಾಪ್ತಿಗೆ ತರುವ ಹುನ್ನಾರ ನಡೆದಿದೆ ಎಂಬ ಆರೋಪಶೈಕ್ಷಣಿಕವಲಯದಿಂದ ಕೇಳಿಬಂದಿದೆ.

‌‘ಬಿಬಿವಿ ವ್ಯಾಪ್ತಿಗೆ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳ (ಕನ್ನಡ, ತೆಲುಗು, ಮಲಯಾಳಂ, ಒಡಿಯಾ) ಕಾರ್ಯ ನಿರ್ವಹಣೆಯನ್ನು ಹೇಗೆ ಅಳವಡಿಸಬಹುದು’ ಎಂಬ ಅಂಶದಲ್ಲಿ ಸ್ಪಷ್ಟತೆ ಇಲ್ಲ. ಶಾಸ್ತ್ರೀಯ ಕನ್ನಡ ಕೇಂದ್ರವನ್ನು ವಿಶ್ವವಿದ್ಯಾಲಯದೊಳಗೇ ಒಂದು ವಿಭಾಗವಾಗಿ ಉಳಿಸಿಕೊಳ್ಳುತ್ತಾರಾ ಅಥವಾ ಸ್ವಾಯತ್ತೆನೀಡಿ, ಬಳಿಕಅಳವಡಿಸಿಕೊಳ್ಳುತ್ತಾರಾಎಂಬುದರ ಬಗ್ಗೆ ನಿಖರವಾಗಿ ಗೊತ್ತಾಗಿಲ್ಲ. ಕೇಂದ್ರಕ್ಕೆ ಸ್ವಾಯತ್ತೆನೀಡಬೇಕು. ಕೇಂದ್ರಕ್ಕೆ ನೀಡಿರುವ ಜಾಗ ಸಂಬಂಧಒಪ್ಪಂದಮಾಡಿಕೊಳ್ಳಬೇಕು’ ಎಂದು ಕೇಂದ್ರದ ಯೋಜನಾ ಮೇಲ್ವಿಚಾರಣಾ ಸಮಿತಿ ಸದಸ್ಯ ಆರ್‌.ವಿ.ಎಸ್.ಸುಂದರಂಒತ್ತಾಯಿಸಿದ್ದಾರೆ.

ಹೋರಾಟದ ಎಚ್ಚರಿಕೆ: ‘ಮೈಸೂರು ವಿಶ್ವವಿದ್ಯಾಲಯವು ಮಾನಸ ಗಂಗೋತ್ರಿಯಲ್ಲಿ ಈ ಕೇಂದ್ರಕ್ಕಾಗಿ 4 ಎಕರೆ ಜಾಗ ನೀಡಿದೆ. ಈ ಜಾಗದಲ್ಲಿ ಕೇಂದ್ರವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂಬುದು ನಮ್ಮ ನಿಲುವು. ಯಾವುದೋ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡಿಸಲು ನಮ್ಮ ಬಲವಾದ ವಿರೋಧವಿದೆ. ಹೀಗೆ ಮಾಡಿದರೆ ಮತ್ತೆ ಹೋರಾಟ ಪ್ರಾರಂಭಿಸುತ್ತೇವೆ’ ಎಂದು ಹೋರಾಟಗಾರ ಪ.ಮಲ್ಲೇಶ್‌ ಎಚ್ಚರಿಸಿದ್ದಾರೆ.

‘ಸಿಐಐಎಲ್‌ಗೆ ವಿಶ್ವವಿದ್ಯಾಲಯದ ಸ್ವರೂಪ ನೀಡಿ, ಅದರೊಳಗೆ ಶಾಸ್ತ್ರೀಯ ಭಾಷಾ ಕೇಂದ್ರಗಳನ್ನು ಸೇರಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಶಾಸ್ತ್ರೀಯ ಕನ್ನಡ ಕೇಂದ್ರವು ತನ್ನ ಒಂದು ಕಾಲನ್ನು ಸಿಐಐಎಲ್‌ನಿಂದ ಹೊರಗಡೆ ಇಟ್ಟಾಗಿದೆ. ಈ ಸಂದರ್ಭದಲ್ಲಿ ಸ್ವಾಯತ್ತೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ’ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಮಿಳುನಾಡಿನಲ್ಲೂ ವಿರೋಧ
ಕೇಂದ್ರ ಶಿಕ್ಷಣ ಸಚಿವಾಲಯವು ಸಮಿತಿ ರಚಿಸಿದ ಕೂಡಲೇ ಎಚ್ಚೆತ್ತ ಸಾಹಿತಿಗಳು, ಜನಪ್ರತಿನಿಧಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆಯು ಸ್ವಾಯತ್ತ ಸಂಸ್ಥೆಯಾಗಿದ್ದು, ಬಿಬಿವಿ ವ್ಯಾಪ್ತಿಗೆ ನೀಡಲು ಬರುವುದಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗೂ ಮನವಿ ಸಲ್ಲಿಸಿದ್ದಾರೆ.

**

ಭಾರತೀಯ ಭಾಷಾ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಸಮಿತಿ ರಚಿಸಲಾಗಿದೆ. ಆದರೆ, ಸಮಿತಿಯ ಕಾರ್ಯಚಟುವಟಿಕೆ ಬಗ್ಗೆ ಮಾತನಾಡುವ ಅಧಿಕಾರ ನನಗಿಲ್ಲ.
-ಪ್ರೊ.ವೆಂಕಟೇಶಮೂರ್ತಿ, ಸಿಐಐಎಲ್‌ ನಿರ್ದೇಶಕ

**

ಕೇಂದ್ರಕ್ಕೆ ನೀಡಿರುವ ಜಾಗದ ಸಂಬಂಧ ಮೈಸೂರು ವಿ.ವಿ ಹಾಗೂ ಸಿಐಐಎಲ್‌ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ. ಕೇಂದ್ರಕ್ಕೆ ಸ್ವಾಯತ್ತೆ ಸಿಗುವುದು ದಿಟ.
-ಟಿ.ಎಸ್‌.ನಾಗಾಭರಣ, ಅಧ್ಯಕ್ಷ,ಕನ್ನಡ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT