ಭಾನುವಾರ, ಆಗಸ್ಟ್ 14, 2022
20 °C
ಪೌರಕಾರ್ಮಿಕರ ಮುಷ್ಕರ ಮುಂದುವರಿಕೆ

ನಡೆಯದ ತ್ಯಾಜ್ಯ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೆಲಸ ಕಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ಮುಷ್ಕರ ಮುಂದುವರಿಸಿರುವುದರಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆದಿಲ್ಲ.

ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಸ್ವಚ್ಛತಾ ಕಾರ್ಮಿಕರು ಕೆಲಸದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಪರಿಣಾಮ ‘ಸಾಂಸ್ಕೃತಿಕ ನಗರಿ’ಯ ಬಹುತೇಕ ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗಿಲ್ಲ. ಇದರಿಂದ, ಆ ಪ್ರದೇಶಗಳಲ್ಲಿ ದುರ್ನಾತ ಹಬ್ಬಿದೆ. ಕುವೆಂಪುನಗರ, ಕೆ.ಜಿ. ಕೊಪ್ಪಲು, ಜಯನಗರ, ಒಂಟಿಕೊಪ್ಪಲು, ಪಡುವಾರಹಳ್ಳಿ, ಅರವಿಂದ ನಗರ ಹೀಗೆ... ಹಲವು ಬಡಾವಣೆಗಳಲ್ಲಿ ಎಂದಿನಂತೆ ತ್ಯಾಜ್ಯ ವಿಲೇವಾರಿ ನಡೆದಿಲ್ಲ. ಮನೆ– ಮನೆಗಳಿಂದ ಕಸ ಸಂಗ್ರಹಿಸುವ ಕಾರ್ಯವೂ ಸ್ಥಗಿತಗೊಂಡಿದೆ.

ಕುವೆಂಪುನಗರ, ಕೆ.ಜಿ. ಕೊಪ್ಪಲು ಮೊದಲಾದ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಚೆಲ್ಲಿರುವುದು, ಅಲ್ಲಿ ದನ–ಕರುಗಳು ಆಹಾರ ಹುಡುಕುತ್ತಿದ್ದುದು ಕಂಡು ಬಂತು.

ಅರಮನೆ, ಕೆ.ಆರ್. ವೃತ್ತ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ಸ್ವಚ್ಛತಾ ಕಾರ್ಯಕ್ಕೆ ಕಾಯಂ ಪೌರಕಾರ್ಮಿಕರನ್ನು (530) ಬಳಸಲಾಗುತ್ತಿದೆ.

ಈ ನಡುವೆ, ಮುಷ್ಕರನಿರತ ಪೌರಕಾರ್ಮಿಕರಿಗೆ ಮೇಯರ್‌ ಸುನಂದಾ ಪಾಲನೇತ್ರ, ಮುಖಂಡರಾದ ಕೆ.ಆರ್. ಸೋಮಶೇಖರ್‌, ಅನಂತು, ಅಕ್ಬರ್, ಪುರುಷೋತ್ತಮ ಬೆಂಬಲ ಸೂಚಿಸಿದ್ದಾರೆ.

ಸ್ವಚ್ಛತಾ ಕಾರ್ಮಿಕರು ಸಂಜೆವರೆಗೂ ಮಹಾನಗರಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿರುವುದರಿಂದಾಗಿ ಅವರು ಸೋಮವಾರವೂ ಮುಷ್ಕರ ಮುಂದುವರಿಸುವುದಕ್ಕೆ ನಿರ್ಧರಿಸಿದ್ದಾರೆ.

‘ಸರ್ಕಾರವು ನಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸಲಿದ್ದೇವೆ. ‘ನೇರ ಪಾವತಿಯಡಿ’ (ಗುತ್ತಿಗೆ) ಕಾರ್ಯನಿರ್ವಹಿಸುತ್ತಿರುವ 1,648 ಪೌರಕಾರ್ಮಿಕರು, 231 ಒಳಚರಂಡಿ ಸ್ವಚ್ಛತಾ ಕಾರ್ಮಿಕರು ಮತ್ತು 385 ಮಂದಿ ಮನೆ–ಮನೆಗಳಿಂದ ಕಸ ಸಂಗ್ರಹಿಸುವವರು ಹಾಗೂ ಆ ವಾಹನಗಳ ಚಾಲಕರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಸೋಮವಾರವೂ ಕೆಲಸದಿಂದ ದೂರ ಉಳಿಯುತ್ತೇವೆ’ ಎಂದು ಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್‌.ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಾದ್ಯಂತ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡಿರುವುದರಿಂದ ಜನರಿಗೆ ತೊಂದರೆ ಆಗಬಹುದು. ಆದರೆ, ನಾವು ನಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಗರ, ಪಟ್ಟಣಗಳಲ್ಲಿ ಸ್ವಚ್ಛತೆ ಕಾಪಾಡುವ ನಮ್ಮ ಬದುಕು ಇಂದಿಗೂ ಹಸನಾಗಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ. ಸರ್ಕಾರವು ಸೋಮವಾರವೂ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರದಲ್ಲಿನ 530 ಕಾಯಂ ಪೌರಕಾರ್ಮಿಕರನ್ನು ಕೂಡ ಮುಷ್ಕರಕ್ಕೆ ಸೇರಿಸಿಕೊಳ್ಳಲು ಯೋಜಿಸಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು