ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಕೆಲಸ ಸ್ಥಗಿತ; ಪ್ರತಿಭಟನೆ

ಗ್ರಾಮ ಪಂಚಾಯಿತಿಯ ಎಲ್ಲ ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ
Last Updated 9 ನವೆಂಬರ್ 2020, 16:06 IST
ಅಕ್ಷರ ಗಾತ್ರ

ಮೈಸೂರು: ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿದ ಪೌರಕಾರ್ಮಿಕರು ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ದಲಿತ ಸಂಘರ್ಷ ಸಮಿತಿ, ಪೌರಕಾರ್ಮಿಕ ಅಸಂಘಟಿತ ಕಾರ್ಮಿಕ ವಿಭಾಗದ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಜಿಲ್ಲೆಯ 236 ಗ್ರಾಮಪಂಚಾಯಿತಿಗಳಲ್ಲಿ 1,302 ಪೌರಕಾರ್ಮಿಕರು ಇದ್ದಾರೆ. ಇವರಿಗೆ ಯಾವುದೇ ಕೆಲಸದ ಭದ್ರತೆ ಇಲ್ಲ. ಇದರಿಂದ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಕೂಡಲೇ ಕೆಲಸಕ್ಕೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರಿಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ನೀಡಬೇಕು, ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನ, ಇಎಸ್‍ಐ, ಪಿಎಫ್ ಸೌಲಭ್ಯ ಕಲ್ಪಿಸಬೇಕು. ಹಾಲಿ ವಾಸ ಮಾಡುತ್ತಿರುವ ಪೌರಕಾರ್ಮಿಕರ ನಿವೇಶನಗಳಿಗೆ ಹಕ್ಕುಪತ್ರ, ಸ್ವಾಧೀನ ಪತ್ರಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ನಿವೃತ್ತಿ ಉಪಧನ, ಮರಣ ಉಪಧನದ ನೀಡಿಕೆಯಲ್ಲಿ ವಿಳಂಬವಾಗಬಾರದು. ತುಟ್ಟಿಭತ್ಯೆ, ಬಾಕಿ ವೇತನ, ಜೀವವಿಮೆ, ಭೀಮ ಯೋಜನೆಯ ಆರೋಗ್ಯ ಕಾರ್ಡ್‍ಗಳನ್ನು ವಿತರಿಸಬೇಕು. ವಿದ್ಯಾರ್ಹತೆಗೆ ಅನುಗುಣವಾಗಿ ಮುಂಬಡ್ತಿ ನೀಡಿ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಅವರು ಹೇಳಿದರು.

ಮೃತಪಟ್ಟ ಪೌರಕಾರ್ಮಿಕರ ಕುಟುಂಬದವರಿಗೆ ಕೆಲಸ ನೀಡಬೇಕು, ಪೌರಕಾರ್ಮಿಕರಿಗೆ ಕೆಲಸದ ಅವಧಿಯನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ನಿಗದಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ, ಮುಖಂಡರಾದ ಆಲಗೂಡು ಚಂದ್ರಶೇಖರ್, ಆರ್ಟಿಸ್ಟ್ ಎಸ್.ನಾಗರಾಜ್, ಡಿ.ಎನ್.ಬಾಬು, ಮೈಸೂರು ಮಹದೇವ, ಮಂಚಯ್ಯ, ಆರ್.ರಾಜು ಕೆಂಪಯ್ಯನಹುಂಡಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿದ್ದರು.

‍ಪೌರಕಾರ್ಮಿಕರ ನೇಮಕಕ್ಕೆ ಒತ್ತಾಯ

ಮೈಸೂರುನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮಪಂಚಾಯತಿಗಳಲ್ಲಿ ನೇರ ನೇಮಕಾತಿ ಸಂದರ್ಭದಲ್ಲಿ ಕೈಬಿಡಲಾಗಿರುವ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಪೌರಕಾರ್ಮಿಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲೆ ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪೌರಕಾರ್ಮಿಕರಿಗೆ ನಿವೇಶನ ನೀಡಬೇಕು ಇಲ್ಲವೇ ಮನೆ ನೀಡಬೇಕು. ನೇರ ನೇಮಕಾತಿಯಡಿಯಲ್ಲಿ 60 ವರ್ಷ ವಯೋಮಿತಿ ಮೀರಿ ಕೈಬಿಟ್ಟಿರುವ ಪೌರಕಾರ್ಮಿಕರ ಕುಟುಂಬದ ಒಬ್ಬ ಅವಲಂಬಿತರಿಗೆ ಕೆಲಸ ನೀಡಬೇಕು. ಜತೆಗೆ, ಕೆಲಸದ ಅವಧಿಯಲ್ಲಿ ಮೃತಪಟ್ಟಿರುವವರ ಕುಟುಂಬದ ಒಬ್ಬರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಡಿ.ಆರ್.ಚಿನ್ನಪ್ಪ, ಕೆ.ಗೋಪಾಲ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

‌ಯುವತಿಯಕೊಂದ ಆರೋಪಿಗಳ ಪತ್ತೆಗೆ ಆಗ್ರಹ

ಮೈಸೂರು: ಪಿರಿಯಾಪಟ್ಟಣದ ಕೆಲ್ಲೂರು ರಸ್ತೆಯಲ್ಲಿ ಭಾನುವಾರ ದೊರೆತ ಯುವತಿಯೊಬ್ಬರ ಮೃತದೇಹದ ಕುರಿತು ತನಿಖೆ ತೀವ್ರಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

‘ಉರಿಯುತ್ತಿರುವ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿರುವುದು ಕೊಲೆಯಾಗಿರುವ ಅನುಮಾನ ಮೂಡಿಸಿದೆ. ಇದೊಂದು ಅತ್ಯಂತ ಅಮಾನವೀಯ ಕೃತ್ಯ. ದೇಶದ ವಿವಿಧ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದವು. ಈಗ ನಮ್ಮಲ್ಲೇ ನಡೆಯುತ್ತಿರುವುದು ಆತಂಕಕಾರಿ ಎನಿಸಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಹಿಳೆಯ ಸುರಕ್ಷತೆ ಕುರಿತು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂಬುದನ್ನು ಈ ಘಟನೆ ಹಾಗೂ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಸಾಬೀತುಪಡಿಸಿವೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗಳಲ್ಲಿ ಪ್ರಸಾರವಾಗುವ ಅಶ್ಲೀಲತೆಯೇ ಇಂತಹ ಕೃತ್ಯಗಳಿಗೆ ಕಾರಣವಾಗಿದೆ. ಕೂಡಲೇ ಇದನ್ನು ಸೇರಿದಂತೆ ಮಾದಕವಸ್ತುಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸೀಮಾ, ರಾಜ್ಯ ಉಪಾಧ್ಯಕ್ಷೆ ಸಂಧ್ಯಾ, ಎಐಡಿವೈಒನ ರಾಜ್ಯ ಘಟಕದ ಅಧ್ಯಕ್ಷೆ ಎಂ.ಉಮಾದೇವಿ, ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್, ಎಐಡಿಎಸ್‌ಒದ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮುಖಂಡರಾದ ಆಸಿಯಾ, ಅಭಿಲಾಷಾ, ಟಿ.ಆರ್.ಸುನಿಲ್, ಅನಿಲ್ ಇದ್ದರು.

ಕನಿಷ್ಠ ವೇತನ ₹ 21 ಸಾವಿರಕ್ಕೆ ಹೆಚ್ಚಿಸಲು ಆಗ್ರಹ

ಮೈಸೂರು: ಕನಿಷ್ಠ ವೇತನವನ್ನು ₹ 21 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ನ. 26ರಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ಅವರು ಪ್ರಕಟಿಸಿದರು.

ಎಲ್ಲ ಕಾರ್ಯಕರ್ತೆಯರನ್ನು ಕಾಯಂಗೊಳಿಸಿ, ₹ 10 ಸಾವಿರ ನಿವೃತ್ತಿ ವೇತನ ನೀಡಬೇಕು. ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ಮುಚ್ಚದೇ ರಕ್ಷಿಸಬೇಕು, ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರದಲ್ಲೇ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಕೊರೊನಾ ಸಂದರ್ಭದಲ್ಲಿ ಮೃತಪಟ್ಟ 32 ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಬೇಕು, ಕೊರೊನಾದಿಂದ ಆರ್ಥಿಕ ನಷ್ಟ ಅನುಭವಿಸಿದ ಎಲ್ಲರಿಗೂ ಮಾಸಿಕ ₹ 7,500 ನಗದು ನೀಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT