ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: ಸಿ.ಎಂ, ರಾಜವಂಶಸ್ಥರಿಂದ ಪೂಜೆ

Last Updated 20 ಜುಲೈ 2022, 8:26 IST
ಅಕ್ಷರ ಗಾತ್ರ

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ನಿ ಜೊತೆಗೂಡಿ ದೇವಿಯ ದರ್ಶನ ಪಡೆದರು.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರ ದೇವಸ್ಥಾನಕ್ಕೆ ಬಂದ ಅವರನ್ನು ದೇವಸ್ಥಾನದ ಮುಖ್ಯಅರ್ಚಕ ಶಶಿಶೇಖರ್‌ ದೀಕ್ಷಿತ್‌ ಅವರು ಹಾರಹಾಕಿ ಸ್ವಾಗತಿಸಿದರು. ನಂತರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದ ಅವರು, ಬಳಿಕ ದೇವಸ್ಥಾನದ ಒಳಹೋಗಿ ದೇವಿಯ ದರ್ಶನ ಪಡೆದರು. ಸಚಿವರಾದ ಎಸ್‌.ಟಿ. ಸೋಮಶೇಖರ್‌, ಗೋವಿಂದ ಕಾರಜೋಳ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌. ನಾಗೇಂದ್ರ, ಜಿ.ಟಿ.ದೇವೇಗೌಡ ಸಾಥ್‌ ನೀಡಿದರು.

ಅದ್ದೂರಿ ದಸರಾ: ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ’ ಕನ್ನಡ ನಾಡಿಗೆ ಸುಭಿಕ್ಷೆ, ಅಭಿವೃದ್ಧಿ ಕೊಡಲಿ. ಎಲ್ಲರ ಬದುಕಿನಲ್ಲಿ ಸುಖಶಾಂತಿ ನೆಲೆಸಲಿ ಎಂದು ಇಡೀ ರಾಜ್ಯದ ಜನರ ಪರವಾಗಿ ಪ್ರಾರ್ಥಿಸಿದ್ದೇನೆ. ಕೋವಿಡ್‌ನಿಂದ ಕಳೆದೆರಡು ವರ್ಷಗಳ ಕಾಲ ಸಾಂಪ್ರದಾಯಿಕ ದಸರಾ ಆಚರಣೆಗೆ ಸೀಮಿತವಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಈ ಸಾಲಿನ ದಸಾರಕ್ಕೆ ಹೊಸ ಆಯಾಮ ಸಿಗಲಿದ್ದು, ಉದ್ಘಾಟಕರ ಬಗ್ಗೆಯೂ ಚರ್ಚೆಯಾಗಿದೆ. ಎಲ್ಲರ ಅಭಿಪ್ರಾಯ ಪಡೆದು, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ‘ ಎಂದರು.

’15 ದಿನಕ್ಕೂ ಮುಂಚಿತವಾಗಿಯೇ ದಸರಾ ವಸ್ತು ಪ್ರದರ್ಶನ ಆರಂಭಿಸಲು ನಿರ್ಧರಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ವೆಬ್‌ಸೈಟ್‌ಗೆ ಚಾಲನೆ, 15 ದಿನದ ಮೈಸೂರು ಟೂರಿಸಂ ಸೆಂಟರ್‌ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ರಾಜವಂಶಸ್ಥರು ಭಾಗಿ: ವರ್ಧಂತಿ ಅಂಗವಾಗಿ ರಾಜವಂಶಸ್ಥ ಪ್ರಮೋದಾದೇವಿ ಒಡೆಯರ್‌, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಶಿಕಾ ದೇವಿ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶ್ವೇತವರ್ಣದ ಪೋಷಾಕು ಹಸಿರುಪೇಟ ಧರಿಸಿ ಬಂದ ಅವರನ್ನು ಶಾಸಕ ಎಸ್‌.ಎ.ರಾಮದಾಸ್‌ ದೇವಾಲಯದಲ್ಲಿ ಬರಮಾಡಿಕೊಂಡರು.

ಕೇಂದ್ರ ಕೃಷಿ ಖಾತೆ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡ ಪೂಜೆ ಸಲ್ಲಿಸಿದರು.

‘ವರ್ಧಂತಿ ಅಂಗವಾಗಿ ದೇಗುಲದಲ್ಲಿ ಬುಧವಾರ ನಸುಕಿನ 4.30ರಿಂದ ರುದ್ರಾಭಿಷೇಕ, ಪಂಚಾಮೃತ, ಅಭ್ಯಂಜನ ಸ್ನಾನ, ಅಲಂಕಾರ, ಅಷ್ಟೋತ್ತರ ಸಹಸ್ರನಾಮ, 9.15ಕ್ಕೆ ಮಹಾ ಮಂಗಳಾರತಿ, 10.30ಕ್ಕೆ ಚಿನ್ನದ ಪಲ್ಲಕ್ಕಿ ಉತ್ಸವ ನಡೆಯಿತು. ಸಾಯಂಕಾಲ 5.12ಕ್ಕೆ ಕೈತೋಳು ಉತ್ಸವ, ರಾತ್ರಿ 8.30ಕ್ಕೆ ದರ್ಬಾರ್‌ ಉತ್ಸವ ನಡೆಯಲಿದೆ’ ಎಂದು ದೇವಸ್ಥಾನದ ಮುಖ್ಯಅರ್ಚಕ ಶಶಿಶೇಖರ್‌ ದೀಕ್ಷಿತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT