ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನದಂದು ನನ್ನ ಪ್ರೀತಿ ಯಾರ ಕಡೆಗೆಂದು ತಿಳಿಸುವೆ: ಸಿ.ಎಂ.ಇಬ್ರಾಹಿಂ

‘ತನ್ವೀರ್ ಸೇಠ್‌ಗೆ ವಿಪಕ್ಷ ನಾಯಕ, ಖಾದರ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿ’
Last Updated 2 ಫೆಬ್ರುವರಿ 2022, 14:42 IST
ಅಕ್ಷರ ಗಾತ್ರ

ಮೈಸೂರು: ‘ನಾನು ಹುಟ್ಟಿರುವುದು ಟಿಪ್ಪು ಸುಲ್ತಾನ್‌ ಭೂಮಿಯಲ್ಲಿ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ ಶೇ 21ರಷ್ಟಿದೆ. ಪ್ರೇಮಿಗಳ ದಿನ (ಫೆ.14) ರಾಜೀನಾಮೆ ನೀಡಿ ನನ್ನ ಪ್ರೀತಿ ಯಾರ ಕಡೆ ಎಂಬುದನ್ನು ಪ್ರಕಟಿಸುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ನನ್ನ ಮುಂದಿರುವ ಮೂರು ಆಯ್ಕೆಗಳೆಂದರೆ ಜೆಡಿಎಸ್‌, ಮಮತಾ ಬ್ಯಾನರ್ಜಿ (ಟಿಎಂಸಿ) ಹಾಗೂ ಅಖಿಲೇಶ್‌ ಯಾದವ್‌ (ಎಸ್‌ಪಿ). ಈ ಮೂರರಲ್ಲಿ ಯಾರ ಕಡೆ ಹೋಗಬೇಕೆಂಬುದನ್ನು ಜನಾಭಿಪ್ರಾಯ ಕೇಳಿ ನಿರ್ಧರಿಸುತ್ತೇನೆ’‌ ಎಂದು ಹೇಳಿದರು.

‘ರಾಜ್ಯದಲ್ಲಿ ಹೊಸ ಮಾರ್ಗ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದು, ನಮ್ಮದು ಸಜ್ಜನರ ಸಕ್ರಿಯ ರಂಗ. ಬಿರಿಯಾನಿ ಸಿಗದಿದ್ದರೂ ಪರವಾಗಿಲ್ಲ, ಗಂಜಿ ಕುಡಿದು ಬದುಕುತ್ತೇವೆ. ಸ್ಥಾನಕ್ಕಿಂತ ಮಾನ ಮುಖ್ಯ’ ಎಂದರು.

‘ತನ್ವೀರ್‌ ಸೇಠ್‌ ಅವರನ್ನು ವಿಪಕ್ಷ ನಾಯಕ ಮಾಡಿ, ಯು.ಟಿ.ಖಾದರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಮಾಡಲು ಆಗಲ್ವಾ? ನಾವು ವೋಟ್‌ ಹಾಕೋ ಯಂತ್ರವೇ? ಇದನ್ನು ಹೇಳಿದರೆ ಸಿಟ್ಟು ಬರುತ್ತದೆ. ಚೀಲ ಹಿಡಿಯುವವರು ಇವರಿಗೆ ಬೇಕು. ನನ್ನಿಂದ ಇದನ್ನು ನಿರೀಕ್ಷಿಸಬೇಡಿ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೋ ಅಥವಾ ನಾನು ಪ್ರಶ್ನಿಸುತ್ತೇನೆ ಎಂದು ಸುಮ್ಮನಿದ್ದಾರೋ ಗೊತ್ತಿಲ್ಲ. ಇದುವರೆಗೆ ನನ್ನೊಂದಿಗೆ ಮಾತನಾಡಿಲ್ಲ. ಸ್ನೇಹಕ್ಕೆ ಬೆಲೆ ಕೊಡುವುದಿದ್ದರೆ, ನನಗೆ ಪರಿಷತ್‌ ವಿಪಕ್ಷ ನಾಯಕ ಸ್ಥಾನ ತಪ್ಪಿದ ದಿನವೇ ಅವರು ರಾಜೀನಾಮೆ ಕೊಡಬೇಕಿತ್ತು.ಮುಂದೆ ಅವರಿಗೂ ನನ್ನ ಸ್ಥಿತಿಯೇ ಬರಬಹುದು’‌ ಎಂದು ನುಡಿದರು.

‘ಹಳೆ ತಳಿಗಳ ಬೀಜ ಸಂಗ್ರಹಿಸುತ್ತಿದ್ದೇನೆ. ಜೆ.ಎಚ್‌.ಪಟೇಲ್‌ ಅವರ ಮಗ, ವೀರೇಂದ್ರ ಪಾಟೀಲ್‌ ಅವರ ಮಗ ಬರುತ್ತಾರೆ. ನಮ್ಮದು ವ್ಯವಸ್ಥೆ ವಿರುದ್ಧ ಹೋರಾಟ. ಮೈಸೂರಿನಿಂದಲೇ ಆ ಹೋರಾಟ ಆರಂಭಿಸಿದ್ದೇನೆ. ಸಿದ್ದರಾಮಯ್ಯ ‘ಅಹಿಂದ’ ನಡೆಸಿದರೆ ನಾನು ‘ಅಲಿಂಗೊ’ (ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು) ಚಳವಳಿ ಶುರು ಮಾಡುತ್ತೇನೆ’‌ ಎಂದರು.

ಶಾಸಕ ತನ್ವೀರ್‌ ಸೇಠ್‌ ಬೆಂಬಲ ಸೂಚಿಸಿದ್ದಾರೆಯೇ ಎಂಬುದಕ್ಕೆ, ‘ಯಾರನ್ನೂ ನಾನು ಕರೆಯಲ್ಲ. ಒಳ್ಳೆಯ ಉದ್ದೇಶಕ್ಕೆ ಕೈ ಜೋಡಿಸಿ ಎಂದು ಎಲ್ಲರಿಗೂ ಮನವಿ ಮಾಡುತ್ತಿದ್ದೇನೆ. ಸೇಠ್‌ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರನ್ನೇ ಕೇಳಿ. ಶ್ರೀನಿವಾಸಪ್ರಸಾದ್‌, ವಿಶ್ವನಾಥ್‌ ಅವರೊಂದಿಗೂ ಮಾತನಾಡುತ್ತೇನೆ. ಸ್ವಾಮೀಜಿಗಳು ಬೆಂಬಲ ಸೂಚಿಸಿದ್ದಾರೆ’ ಎಂದು ತಿಳಿಸಿದರು.

ಅದಕ್ಕೂ ಮೊದಲು ಮೈಸೂರಿನ ನರಸಿಂಹರಾಜ ಕ್ಷೇತ್ರದ ಸ್ಥಳೀಯರು ಇಬ್ರಾಹಿಂ ಅವರನ್ನು ತೆರೆದ ವಾಹನದಲ್ಲಿ ಸ್ವಾಗತಿಸಿದರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT