ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎಲ್‌ಪಿಜಿಗಿಂತ ನೈಸರ್ಗಿಕ ಅನಿಲದ ಅವಘಡಗಳ ತೀವ್ರತೆ ಕಡಿಮೆ

ಎಲ್‌ಪಿಜಿಗಿಂತ ನೈಸರ್ಗಿಕ ಅನಿಲದ ಅವಘಡಗಳ ತೀವ್ರತೆ ಕಡಿಮೆ
Last Updated 3 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮೈಸೂರು: ಎಲ್‌ಪಿಜಿ ಸಿಲಿಂಡರ್‌ ಸಿಡಿದಾಗ ಆಗುವ ಅನಾಹುತಕ್ಕೆ ಹೋಲಿಸಿದರೆ ಪೈಪ್‌ಲೈನ್‌ ಮೂಲಕ ಪೂರೈಕೆಯಾಗುವ ಅನಿಲದಿಂದ ಉಂಟಾಗುವ ಅಪಾಯ ಕಡಿಮೆ. ‘ಹೀಗಾಗಿ ಅನಿಲ ಸೋರಿಕೆಯಂದ ಆಗಬಹುದಾದ ಅನಾಹುತಗಳನ್ನು ಸರಳ ಮತ್ತು ಸುಲಭವಾಗಿ ನಿರ್ವಹಿಸಬಹುದು’ ಎನ್ನುತ್ತಾರೆ ತಜ್ಞರು.

ಮನೆಯೊಳಗೆ, ಕಾಂಪೌಂಡ್‌ನಲ್ಲಿ, ರಸ್ತೆಯಲ್ಲಿ ಹೀಗೆ ಎಲ್ಲೇ ಕೊಳವೆಗೆ ಧಕ್ಕೆಯಾಗಿ ಸೋರಿಕೆಯಾದರೂ ಸಮೀಪದಲ್ಲೇ ಇರುವ ವಾಲ್ವ್‌ಗಳನ್ನು ಬಂದ್ ಮಾಡುವ ಮೂಲಕ ಬೆಂಕಿ ಹರಡುವುದನ್ನು ಸುಲಭವಾಗಿ ತಡೆಯಬಹುದು. ಗಾಳಿಗಿಂತ ಹೆಚ್ಚು ಹಗುರವಾಗಿರುವ ನೈಸರ್ಗಿಕ ಅನಿಲ ಸೋರಿಕೆಯಾಗುತ್ತಿದ್ದಂತೆ ವೇಗವಾಗಿ ಮೇಲಕ್ಕೆ ಹೋಗುತ್ತದೆ. ಬೆಂಕಿ ಹಬ್ಬುವ ಸಾಧ್ಯತೆಯೂ ಅತಿ ಕಡಿಮೆ.

ತಂಡದ ಕಣ್ಗಾವಲು: ‘ನೆಲದೊಳಗೆ ಅಳವಡಿಸಲಾಗಿರುವ ನೈಸರ್ಗಿಕ ಅನಿಲವನ್ನು ಸರಬರಾಜು ಮಾಡುವ ಕೊಳವೆಯನ್ನು ನಿತ್ಯ ‍ಪರಿಶೀಲಿಸಲೆಂದೇ ಪ್ರತ್ಯೇಕ ತಂಡ ರಚಿಸಲಾಗಿದೆ’ ಎಂದು ಅಟ್ಲಾಂಟ ಗಲ್ಫ್ ಮತ್ತು ಫೆಸಿಫಿಕ್ (ಎಜಿ ಅಂಡ್ ಪಿ) ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನಿರ್ದಿಷ್ಟ ಪ್ರದೇಶಗಳಲ್ಲಿ ಕೊಳವೆಗಳಿರುವ ಕಡೆ ಇತರರು ಅಗೆಯುವುದರ ಮೇಲೆ ಕಣ್ಗಾವಲಿಡುವುದು ತಂಡದ ಕೆಲಸ. ಇದು ಒಂದು ರೀತಿಯಲ್ಲಿ ರೈಲ್ವೆ ಹಳಿಯನ್ನು ನಿರಂತರ ಪರಿಶೀಲಿಸಿದಂತೆ. ಎಲ್ಲಿಯಾದರೂ ಅಗೆಯುವುದು ಕಂಡು ಬಂದಲ್ಲಿ ಕೂಡಲೇ ಅವರು ತಡೆಯುತ್ತಾರೆ’ ಎಂದರು.

ತುರ್ತು ಸ್ಪಂದನಾ ತಂಡ; ಕೊಳವೆಯ ಮೂಲಕ ನೈಸರ್ಗಿಕ ಅನಿಲ ಮನೆಗಳನ್ನು ತಲುಪುವಾಗ ಉಂಟಾಗುವ ಯಾವುದೇ ಅಗ್ನಿ ಅನಾಹುತವನ್ನು ತಡೆಗಟ್ಟಲು ತುರ್ತು ಸ್ಪಂದನಾ ತಂಡವನ್ನೂ ರಚಿಸಲಾಗಿದೆ. ತಂಡದಲ್ಲಿ ಅಗ್ನಿನಂದಕರ ಜತೆಗೆ, ಅಗೆಯುವ ಸಿಬ್ಬಂದಿ, ಕೊಳವೆಯನ್ನು ದುರಸ್ತಿ ಮಾಡುವವರು ಸೇರಿದಂತೆ 5ರಿಂದ 6 ಮಂದಿ ಇರುತ್ತಾರೆ. ಅವರು ದಿನದ 24 ಗಂಟೆಗಳ ಕಾಲವೂ ಪಾಳಿಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಅಗ್ನಿಶಾಮಕ ಸಿಬ್ಬಂದಿಗೆ ಹೊಸತಲ್ಲ!
‘ನೈಸರ್ಗಿಕ ಅನಿಲದ ಬಳಕೆ ಮೈಸೂರಿಗೆ ಹೊಸತಿರಬಹುದು. ಆದರೆ, ಅಗ್ನಿಶಾಮಕಪಡೆಗೆ ಇದು ಹೊಸತಲ್ಲ. ಹೀಗಾಗಿ ಎಂಥದ್ದೇ ಅವಘಡದ ಸನ್ನಿವೇಶವನ್ನು ನಿಯಂತ್ರಿಸಲು ಸಜ್ಜಾಗಿರುತ್ತಾರೆ’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ಕೆ.ಟಿ.ಬಾಲಕೃಷ್ಣ ತಿಳಿಸಿದರು.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನೈಸರ್ಗಿಕ ಅನಿಲ, ಎಲ್‌ಪಿಜಿ, ಕಾರ್ಖಾನೆಯಲ್ಲಿ ಬಳಕೆ ಮಾಡುವ ಅತ್ಯಂತ ವಿಷಕಾರಿ ಅನಿಲ ಸೋರಿಕೆಯಿಂದ ಉಂಟಾಗುವ ಅನಾಹುತ ಸೇರಿದಂತೆ ಎಲ್ಲ ಬಗೆಯ ಬೆಂಕಿ ಅವಘಡಗಳನ್ನು ನಿಯಂತ್ರಿಸುವ ತರಬೇತಿಯನ್ನು ಅಗ್ನಿಶಾಮಕ ಸಿಬ್ಬಂದಿಗೆ ನೀಡಲಾಗಿದೆ’ ಎಂದರು.

(ನಾಳಿನ ಸಂಚಿಕೆಯಲ್ಲಿ –‘ಪೈಪ್‌ಲೈನ್ ಅನಿಲ ನಿಜಕ್ಕೂ ಅಗ್ಗವೇ?’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT