ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯಕ್ಕೆ ಮೈತ್ರಿ ಸರ್ಕಾರ ಅಪಾಯಕಾರಿ’

ದೋಸ್ತಿ ಕಿತ್ತಾಟದಿಂದ ಜನ ರೋಸಿ ಹೋಗಿದ್ದಾರೆ: ವಿ.ಶ್ರೀನಿವಾಸಪ್ರಸಾದ್‌
Last Updated 24 ಮೇ 2019, 20:07 IST
ಅಕ್ಷರ ಗಾತ್ರ

ಮೈಸೂರು: ‘ಮೈತ್ರಿ ಸರ್ಕಾರ ರಾಜ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ದೋಸ್ತಿಗಳ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಮನಃಸ್ತಾಪ, ಪ್ರತಿಷ್ಠೆ, ಕಿತ್ತಾಟ, ಟೀಕೆಯಿಂದ ಜನ ರೋಸಿ ಹೋಗಿದ್ದಾರೆ. ಇಂಥ ದೋಸ್ತಿ ಮುಂದುವರಿಯಬಾರದೆಂದು ಎಲ್ಲರನ್ನೂ ಮನೆಗೆ ಕಳಿಸಿದ್ದಾರೆ’

ಚಾಮರಾಜನಗರ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೀಗೆಂದು ಟೀಕಾ ಪ್ರಹಾರ ನಡೆಸಿದರು.

ರೋಚಕ ಪೈಪೋಟಿಗೆ ಕಾರಣವಾದ ಮೀಸಲು ಕ್ಷೇತ್ರದಲ್ಲಿ ಕೇವಲ 1,817 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ್ದಾರೆ.

ಆರನೇ ಬಾರಿ ಸಂಸತ್‌ ಕಡೆ ಹೊರಟು ನಿಂತಿರುವ 70 ವರ್ಷ ವಯಸ್ಸಿನ ಅವರು ಪತ್ರಿಕೆ ಜೊತೆ ಹಲವಾರು ವಿಚಾರ ಹಂಚಿಕೊಂಡಿದ್ದಾರೆ.

=ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದ ನೀವು ಮತ್ತೆ ಸ್ಪರ್ಧಿಸಲು ಕಾರಣ?

ನಂಜನಗೂಡು ಉಪಚುನಾವಣೆ ಯಲ್ಲಿ ಸೋತಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತನಾಗಿದ್ದೆ. ಮತ್ತೆ ಸ್ಪರ್ಧಿಸುತ್ತೇನೆ ಎಂಬ ವಿಚಾರವನ್ನು ಕನಸಿನಲ್ಲೂ ಯೋಚಿಸಿರಲಿಲ್ಲ. ಚಾಮ ರಾಜನಗರ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಲು ಪಕ್ಷದಲ್ಲಿ ಹಲವಾರು ಆಕಾಂಕ್ಷಿಗಳು ಇದ್ದರು. ಆದರೆ, ಅವರಿಗೆ ಕ್ಷೇತ್ರದ ಬಗ್ಗೆ ಮಾಹಿತಿಯೇ ಇರಲಿಲ್ಲ. ತಂತ್ರಗಾರಿಕೆಯೂ ಗೊತ್ತಿರಲಿಲ್ಲ. ಹೀಗಾಗಿ, ಕಣಕ್ಕಿಳಿಯುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಮೇಲೆ ಒತ್ತಡ ಹೇರಿದರು. ಪಕ್ಷದ ಮುಖಂಡರ ಜೊತೆ ಮಾತನಾಡಲು ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ಕೆಲ ಕಾರ್ಯಕರ್ತರು ರೈಲಿಗೆ ತಲೆಕೊಡಲು ಮುಂದಾದರು. ಹೀಗಾಗಿ, ಕೊನೆ ಕ್ಷಣದಲ್ಲಿ ಕಣಕ್ಕಿಳಿ ಯಲು ಒಪ್ಪಿಗೆ ನೀಡಿದೆ. ಸೋತು ನಿವೃ ತ್ತರಾಗಬೇಡಿ; ಗೆದ್ದು ನಿವೃತ್ತರಾಗಿ ಎಂಬುದು ಕ್ಷೇತ್ರದ ಕಾರ್ಯಕರ್ತರ ಒತ್ತಡವಾಗಿತ್ತು.

=ಗೆಲುವಿಗೆ ಕಾರಣವಾದ ಅಂಶಗಳು?

ಮೊದಲನೇ ಕಾರಣ ಮೋದಿ ಅಲೆ. ಯಡಿಯೂರಪ್ಪಗೆ ರಾಜ್ಯದಲ್ಲಿ ಇನ್ನೂ ವರ್ಚಸ್ಸು ಇದೆ. ಜೊತೆಗೆ ನನ್ನ ಅನುಭವ. ಎಲ್ಲಕ್ಕಿಂತ ಮಿಗಿಲಾಗಿ ಕಾರ್ಯ ಕರ್ತರು ಈ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿದರು.

=40 ವರ್ಷಗಳಿಂದ ರಾಜಕಾರಣ ದಲ್ಲಿರುವ ನಿಮಗೆ ಈ ಬಾರಿ ಎದುರಾದ ಸವಾಲುಗಳೇನು?

ಚಾಮರಾಜನಗರದಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ನನಗಿದು 9ನೇ ಲೋಕಸಭಾ ಚುನಾವಣೆ. ಈ ಭಾಗದಲ್ಲಿ ಬಿಜೆಪಿ ಸ್ಥಿತಿಗತಿ ಕಂಡು ಆರಂಭದಲ್ಲಿ ಗಾಬರಿಯಾಗಿದ್ದು ನಿಜ. ವರುಣಾ, ತಿ.ನರಸೀಪುರ, ಎಚ್‌.ಡಿ.ಕೋಟೆ ಕ್ಷೇತ್ರಗಳಲ್ಲಿ ಮೈತ್ರಿ ಪ‍ಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಬಲವಾಗಿ ಬೇರೂರಿದ್ದವು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಇದ್ದವು. ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಂಡಿದೆ.

=ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಈ ಪರಿ ನೆಲ ಕಚ್ಚಲು ಕಾರಣವೇನು?

ಯಾವುದೇ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಸಮನ್ವಯ ಇರಲಿಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ಇರಲಿಲ್ಲ. ಒಂದೇ ಕುಟುಂಬಕ್ಕೆ ಸೀಮಿತವಾಗಿದ್ದ ವಿಚಾರ ಜನರಲ್ಲಿ ಅಸಹನೆ ಉಂಟು ಮಾಡಿತು. ಈ ಸರ್ಕಾರದ ಮೇಲೆ ಜನ ರಲ್ಲಿ ನಂಬಿಕೆ ಹೊರಟು ಹೋಗಿದೆ. ಅದು ಫಲಿತಾಂಶದಲ್ಲಿ ಬಹಿರಂಗಗೊಂಡಿದೆ.

=ಸಿದ್ದರಾಮಯ್ಯ ವಿರುದ್ಧ ಮತ್ತೆ ಸೇಡು ತೀರಿಸಿಕೊಂಡಿದ್ದೀರಾ?

ಸೇಡು ತೀರಿಸಿಕೊಂಡಿಲ್ಲ. ಸಿದ್ದರಾ ಮಯ್ಯ ಯಾವ ರೀತಿ ನಡೆದುಕೊಂಡರು ಎಂಬುದನ್ನು ಜನರಿಗೆ ತಿಳಿಸಿದೆ ಅಷ್ಟೆ.

=ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ಅಭಿವೃದ್ಧಿ ವಿಚಾರ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ. ಈಗಿ ರುವ ಕಾರ್ಯಕ್ರಮಗಳನ್ನು ನಿಷ್ಠೆ ಯಿಂದ ಮಾಡುತ್ತೇನೆ. ಅಧಿಕಾರ ವಿಕೇಂ ದ್ರೀಕರಣಗೊಂಡಿದೆ. ಪಂಚಾಯಿ ತಿಯಿಂದ ಸಂಸತ್‌ನವರೆಗೆ ಇರುವ ಕಾರ್ಯ ಕ್ರಮಗಳನ್ನು ಎಲ್ಲರೂ ಸೇರಿ ಪ್ರಾಮಾಣಿಕವಾಗಿ ಮಾಡಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT