ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಂಬಾರಕೊಪ್ಪಲಿನ ಅಭಿವೃದ್ಧಿಗೆ ಬದ್ಧ’

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹೇಳಿಕೆ
Last Updated 4 ಜನವರಿ 2021, 3:36 IST
ಅಕ್ಷರ ಗಾತ್ರ

ಮೈಸೂರು: ‘ಗ್ರಾಮದಲ್ಲಿ ಹೆಚ್ಚಾಗಿ ಕಬ್ಬಡಿ, ಕುಸ್ತಿಯಂತಹ ಕ್ರೀಡೆಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಕುಂಬಾರಕೊಪ್ಪಲಿನ ಅಭಿವೃದ್ಧಿಗೆ ಸದಾ ಗ್ರಾಮಸ್ಥರ ಜೊತೆಗಿರುತ್ತೇನೆ’ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗ್ರಾಮೀಣ ಸೊಗಡಿರುವ ಕುಂಬಾರಕೊಪ್ಪಲಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ’ ಎಂದು ನುಡಿದರು.

ವಿದ್ವಾನ್ ಬಿ.ಚಂದನ್ ಮತ್ತು ತಂಡ ಪ್ರಸ್ತುತ ಪಡಿಸಿದ ಕರ್ನಾಟಕ ಶಾಸ್ತ್ರಿಯ ವಾದ್ಯ ಸಂಗೀತದ ಮೂಲಕ ‘ಸಾಂಸ್ಕೃತಿಕ ಸೌರಭ’ಕ್ಕೆ ಚಾಲನೆ ನೀಡಲಾಯಿತು. ಬಳಿಕ ಪಿರಿಯಾಪಟ್ಟಣದ ಸ್ವಾಮಿನಾಯಕ ಮತ್ತು ತಂಡದಿಂದ ಡೊಳ್ಳು ಕುಣಿತ, ಕವಿತಾ ಕಾಮತ್ ತಂಡದಿಂದ ಸುಗಮ ಸಂಗೀತ, ದೇವಾನಂದ ವರಪ್ರಸಾದ್ ತಂಡದಿಂದ ಜನಪದಗೀತೆ, ಸುನೀತಾ ಮತ್ತು ತಂಡದಿಂದ ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಾಯಿತು.

ತಿ.ನರಸೀಪುರದ ತುರುಗನೂರಿನ ಆನಂದ್‌ಕುಮಾರ್ ಮತ್ತು ತಂಡದಿಂದ ವೀರಗಾಸೆ ನೃತ್ಯ, ಚಿಕ್ಕತಾಯಮ್ಮ ಮತ್ತು ಸಣ್ಣಮ್ಮ ತಂಡದಿಂದ ಸೋಬಾನೆ ಪದ, ಕೃಪಾ ಮಂಜುನಾಥ್ ತಂಡದಿಂದ ಗಮಕ, ಮೈಸೂರು ಕೆ.ಎಂ.ಹಳ್ಳಿ ಮಹಾಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ಮೂಡಲಪಾಯ ಯಕ್ಷಗಾನ ಹಾಗೂ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘದಿಂದ ನಡೆದ ‘ಮೋಹಿನಿ ಬಸ್ಮಾಸುರ’ ನಾಟಕ ಪ್ರದರ್ಶನ ಕುಂಬಾರಕೊಪ್ಪಲಿನ ಜನರನ್ನು ಸೆಳೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾ ತಂಡಗಳಿಗೆ ಪ್ರಶಸ್ತಿ ಪತ್ರ ನೀಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ, ನಗರಪಾಲಿಕೆ ಸದಸ್ಯರಾದ ಶ್ರೀನಿವಾಸ್, ಶ್ರೀಧರ್, ಉಷಾ ಕುಮಾರ್, ಕುಂಬಾರಕೊಪ್ಪಲಿನ ಮುಖಂಡರಾದ ರಾಮೇಗೌಡ, ಭೈರಪ್ಪ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT