ಸರ್ಕಾರದ ಗೌ‌ಪ್ಯ ಮಾಹಿತಿ ಕೋರಿದರೆ ಕ್ರಮ

7
ರಾಜ್ಯ ಮಾಹಿತಿ ಹಕ್ಕು ಮುಖ್ಯ ಆಯುಕ್ತ ಸುಚೇತನ ಸ್ವರೂಪ್

ಸರ್ಕಾರದ ಗೌ‌ಪ್ಯ ಮಾಹಿತಿ ಕೋರಿದರೆ ಕ್ರಮ

Published:
Updated:
Deccan Herald

ಮೈಸೂರು: ಅಧಿಕಾರಿಗಳ ವೈಯಕ್ತಿಕ ಹಾಗೂ ಸರ್ಕಾರದ ಗೌಪ್ಯ ಮಾಹಿತಿಯನ್ನು ಬಿಟ್ಟು ಮಿಕ್ಕೆಲ್ಲಾ ಮಾಹಿತಿಯನ್ನು ನಾಗರಿಕರಿಗೆ ನೀಡಬಹುದು ಎಂದು ರಾಜ್ಯ ಮಾಹಿತಿ ಹಕ್ಕು ಮುಖ್ಯ ಆಯುಕ್ತ ಸುಚೇತನ ಸ್ವರೂಪ್ ತಿಳಿಸಿದರು.

ಸೋಮವಾರ ನಡೆದ ವಿವಿಧ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಅಥವಾ ದೇಶಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕೋರಿ ಅರ್ಜಿ ಸಲ್ಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ಹಾಗಾಗಿ, ಅಧಿಕಾರಿಗಳು ಈ ಕುರಿತು ಎಚ್ಚರಿಕೆ ವಹಿಸಬೇಕು. ಅಲ್ಲದೇ, ಅರ್ಜಿಗಳನ್ನು ಪರಿಶೀಲಿಸಿ, ಈ ರೀತಿಯ ಅರ್ಜಿಗಳು ಕಂಡುಬಂದಲ್ಲಿ ಅರ್ಜಿದಾರರ ಮಾಹಿತಿಯನ್ನು ಪೊಲೀಸರಿಗೆ ಹಾಗೂ ಮಾಹಿತಿ ಹಕ್ಕು ಆಯೋಗಕ್ಕೆ ನೀಡಬೇಕು ಎಂದು ಅವರು ಆದೇಶಿಸಿದರು.

ಅಲ್ಲದೇ, ಅಧಿಕಾರಿಗಳ ಸೇವಾ ದಾಖಲೆಯನ್ನೂ ಕೇಳುವಂತೆ ಇಲ್ಲ. ಈ ರೀತಿಯ ಮಾಹಿತಿ ಪಡೆದು ಅಧಿಕಾರಿಗಳ ಮಾನಹರಣ ಮಾಡಿರುವ ಉದಾಹರಣೆಗಳಿವೆ. ಇದನ್ನು ತಪ್ಪಿಸಲು ಎಚ್ಚರಿಕೆ ವಹಿಸಬೇಕು ಎಂದರು.

ಬೆದರಿಸಿ ಹಣ ಪಡೆಯುವುದು, ಸರ್ಕಾರದ ವಿರುದ್ಧ ಪಿತೂರಿ ಮಾಡಲೆಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸುವುದು ನಡೆದಿದೆ. ಇದರಿಂದ ಮಾಹಿತಿ ಹಕ್ಕು ಕಾಯ್ದೆಯ ಆಶಯಕ್ಕೇ ಹಿನ್ನಡೆಯಾಗಿದೆ. ಇದನ್ನು ತಡೆಗಟ್ಟುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಅಂತೆಯೇ, ಸಾಮಾಜಿಕ ಅಸಮತೋಲನ ಹೊಡೆದೋಡಿಸಲು ಮಾಹಿತಿ ಹಕ್ಕು ಕಾಯ್ದೆಯ ಸದ್ಬಳಕೆ ಆಗಬೇಕು. ಹಾಗಾಗಿ, ನಾಗರಿಕರು ತಮ್ಮ ಹಕ್ಕು ಕಾಯ್ದುಕೊಳ್ಳಲು ಅರ್ಜಿ ಸಲ್ಲಿಸುವ ಯಾವುದೇ ಮಾಹಿತಿಯಾದರೂ ನೀಡಬೇಕು. ಅದಕ್ಕೆ ಚ್ಯುತಿ ಬಾರದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರು ನಗರಪಾಲಿಕೆ ಆಯಕ್ತ ಕೆ.ಎಚ್‌.ಜಗದೀಶ್‌, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಧಾ, ಜಿಲ್ಲಾ ಅಪರಾಧ ದಾಖಲೆ ಬ್ಯೂರೊ ಅಧಿಕಾರಿ ಕಾಂತರಾಜು, ನಂಜನಗೂಡು ಕಂದಾಯ ಅಧಿಕಾರಿ ಬಿ.ವಿ.ವೆಂಕಟೇಶ್‌, ಡಾ.ಲೋಕನಾಥ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !