ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಪ್ರತಾಪ ಸಿಂಹ ಉದ್ದಟತನ ಸರಿಯಲ್ಲ: ಧ್ರುವನಾರಾಯಣ

Last Updated 6 ಜೂನ್ 2022, 12:50 IST
ಅಕ್ಷರ ಗಾತ್ರ

ಮೈಸೂರು: ‘ಸಂಸದ ಪ್ರತಾಪ ಸಿಂಹ ಅವರು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಇತ್ತೀಚೆಗೆ ಮಿತಿ ಮೀರಿ ಹಾಗೂ ಉದ್ದಟತನದಿಂದ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಆರ್ಥಿಕತೆ ಏನು ಗೊತ್ತು ಎಂದು ಪ್ರತಾಪ ಕೇಳಿದ್ದನ್ನು ಗಮನಿಸಿದ್ದೇನೆ. ರಾಜಕಾರಣದಲ್ಲಿ ಇರುವವರಿಗೆ ಸಾಮಾನ್ಯ ಜ್ಞಾನ ಇರಬೇಕು. ಆಡಳಿತ ನಡೆಸುವವರು ಲಂಡನ್‌ಗೆ ಹೋಗಿ ಪದವಿ ಪಡೆದು ಬರಬೇಕಾ?’ ಎಂದು ಕೇಳಿದರು.

‘ಹಳ್ಳಿಗಳ ಪಂಚಾಯಿತಿಗಳಲ್ಲಿ ಯಜಮಾನರು ನ್ಯಾಯಾಧೀಶರಿಗಿಂತಲೂ ಉತ್ತಮವಾಗಿ ತೀರ್ಪು ಕೊಡುತ್ತಾರೆ. ಅವರೇನು ಕಾನೂನು ಪಂಡಿತರೇ? ವಿತ್ತ ಸಚಿವರಾಗಿ ಬಜೆಟ್ ಮಂಡಿಸಲು ಇಂಥಾದ್ದೇ ಪದವಿ ಬೇಕು ಎಂದೇನಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಒಳ್ಳೆಯ ಆಡಳಿತ ಕೊಡಬಹುದು’ ಎಂದು ತಿರುಗೇಟು ನೀಡಿದರು.

‘ಪಕ್ಷವು ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲ್ಲುವ ವಿಶ್ವಾಸವಿದೆ. ಹಿಂದೆಲ್ಲಾ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯೊಬ್ಬರೆ ಇರುತ್ತಿದ್ದರು. ಆದರೆ, ಈ ಬಾರಿ ವರ್ಷಕ್ಕೂ ಮುನ್ನ ತಯಾರಿ ಮಾಡಿಕೊಳ್ಳುವ ಜೊತೆಗೆ ಅಭ್ಯರ್ಥಿ ಹೆಸರನ್ನು ಬೇಗ ಪ್ರಕಟಿಸಲಾಗಿದೆ. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಾಲ್ಕೂ ಜಿಲ್ಲೆಗಳಲ್ಲೂ ಪಕ್ಷದವರೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ವೈಫಲ್ಯಗಳು ನಮಗೆ ಅನುಕೂಲವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್‌ ನಮ್ಮಂತೆಯೇ ವಿರೋಧಪಕ್ಷದ ಸ್ಥಾನದಲ್ಲಿದೆ. ಆದರೆ, ಆ ಪಕ್ಷದ ನಾಯಕರು ಬಿಜೆಪಿ ಬದಲಿಗೆ ನಮ್ಮನ್ನೇ ಟೀಕಿಸುತ್ತಿದ್ದಾರೆ. ವಿರೋಧ ಪಕ್ಷಗಳು ಯಾವಾಗಲೂ ಒಟ್ಟಾಗಿ ಆಡಳಿತ ಪಕ್ಷದ ವೈಫಲ್ಯಗಳ ವಿರುದ್ಧ ಹೋರಾಡಬೇಕು. ಕಾಂಗ್ರೆಸ್ ಅನ್ನು ಟೀಕಿಸುವ ಪ್ರವೃತ್ತಿಯನ್ನು ಎಚ್‌.ಡಿ. ಕುಮಾರಸ್ವಾಮಿ ಅವರು ಬಿಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT