ಶನಿವಾರ, ಫೆಬ್ರವರಿ 27, 2021
30 °C
ಜ.20ಕ್ಕೆ ರಾಜಭವನಕ್ಕೆ ಮುತ್ತಿಗೆ: ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ನೀಚ ಕೆಲಸವನ್ನು ಕಾಂಗ್ರೆಸ್‌ ಮಾಡಿಲ್ಲ: ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಆಡಳಿತಾರೂಢ ಬಿಜೆಪಿಗರು ಮಾಡುತ್ತಿರುವಂತಹ ನೀಚ ಕೆಲಸವನ್ನು ಕಾಂಗ್ರೆಸ್‌ ಎಂದೂ ತನ್ನ ಅಧಿಕಾರದ ಅವಧಿಯಲ್ಲಿ ಮಾಡಿಲ್ಲ’ ಎಂದು ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಶನಿವಾರ ಇಲ್ಲಿ ಹೇಳಿದರು.

‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹು ವರ್ಷಗಳ ಬಳಿಕ ದೊಡ್ಡ ಪ್ರತಿಭಟನೆ ನಡೆದಿದೆ. 5 ಲಕ್ಷ ರೈತರು ದೆಹಲಿಯ ಗಡಿಯಲ್ಲಿ ಬೀಡುಬಿಟ್ಟು ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. 5 ಲಕ್ಷ ರೈತರು ಹೋರಾಟಕ್ಕೆ ಜೊತೆಯಾಗಲು ರಸ್ತೆಯಲ್ಲಿದ್ದಾರೆ. 94 ಸಾವಿರ ಟ್ರಾಕ್ಟರ್‌ ಜಮಾಯಿಸಿವೆ. ಚಳಿಯ ತೀವ್ರತೆಗೆ ಪ್ರತಿಭಟನಾನಿರತ ಹಲವು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಒಂಬತ್ತು ಸುತ್ತಿನ ಮಾತುಕತೆ ಮುಗಿದರೂ; ರೈತರ ಸಮಸ್ಯೆಯನ್ನು ಕೇಂದ್ರ ಸರ್ಕಾರ ಪರಿಹರಿಸಲು ಮುಂದಾಗುತ್ತಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕೃಷಿ ತಿದ್ದುಪಡಿ ಮಸೂದೆ ಸಂಸತ್‌ನಲ್ಲಿ ಮಂಡನೆಯಾದ ದಿನದಿಂದಲೂ ಕಾಂಗ್ರೆಸ್‌ ವಿರೋಧಿಸುತ್ತಿದೆ. ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದ ಅಸಂವಿಧಾನಿಕವಾಗಿ ಮಸೂದೆಯನ್ನು ಕಾಯ್ದೆ ಮಾಡಿಕೊಂಡಿದ್ದಾರೆ. ರೈತರ ಪರವಾಗಿ ಕಾಂಗ್ರೆಸ್‌ ಧ್ವನಿ ಎತ್ತಲಿದೆ. ಬಿಜೆಪಿ ನೇತೃತ್ವದ ಜನವಿರೋಧಿ ನೀತಿ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಿದೆ’ ಎಂದು ಅವರು ತಿಳಿಸಿದರು.

‘ಜಗತ್ತಿನ ವಿದ್ಯಮಾನಕ್ಕೆಲ್ಲಾ ಟ್ವೀಟ್‌ ಮೂಲಕ ಸ್ಪಂದಿಸುವ ಪ್ರಧಾನಿ ತಮ್ಮ ಮನೆಯಿಂದ 20 ಕಿ.ಮೀ. ದೂರದಲ್ಲಿ 52 ದಿನದಿಂದ ರೈತರು ಪ್ರತಿಭಟಿಸುತ್ತಿದ್ದರೂ ಸ್ಪಂದಿಸುತ್ತಿಲ್ಲ. ಹೋರಾಟಗಾರರ ವಿರುದ್ಧವೇ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಸಂಖ್ಯಾತ ರೈತರ ಬೇಡಿಕೆಯಂತೆ ತಿದ್ದುಪಡಿ ಮಾಡಿದ ಕಾಯ್ದೆಗಳನ್ನು ರದ್ದುಗೊಳಿಸಲಿ. ಮತ್ತೊಮ್ಮೆ ಸಂಸತ್‌ಗೆ ತಂದು, ಚರ್ಚಿಸಿ ಕಾಯ್ದೆಯನ್ನಾಗಿ ರೂಪಿಸಲಿ’ ಎಂದು ರಾಜ್ಯಸಭಾ ಸದಸ್ಯರು ಆಗ್ರಹಿಸಿದರು.

ಮೋಸದ ಸರ್ಕಾರ: ‘ಜನರಿಗೆ ಮೋಸ ಮಾಡುವ, ವಂಚಿಸುವ, ಲೂಟಿ ಮಾಡುವ ಸರ್ಕಾರ ಅಸ್ತಿತ್ವದಲ್ಲಿದೆ’ ಎಂದು ಮಾಜಿ ಸಚಿವ ರಮಾನಾಥ ರೈ ಕಟುವಾಗಿ ಟೀಕಿಸಿದರು.

‘ಪೆಟ್ರೋಲ್‌–ಡೀಸೆಲ್‌ ಬೆಲೆ ಗಗನಮುಖಿಯಾಗಿದೆ. ಪ್ರತಿಭಟಿಸಿದರೂ ಸರ್ಕಾರ ಕಿವಿಗೊಡುತ್ತಿಲ್ಲ. ಇದರ ಪರಿಣಾಮ ಬೆಲೆ ಏರಿಕೆಯ ಬಿಸಿಯನ್ನು ಬಡಜನರು ಅನುಭವಿಸುವಂತಾಗಿದೆ’ ಎಂದು ಹೇಳಿದರು.

‘ಹಕ್ಕಿಗಾಗಿ ಹೋರಾಡುತ್ತಿರುವ ರೈತರಿಗೆ ಸ್ಪಂದಿಸುವ ಬದಲು ಖಲಿಸ್ತಾನಿಗಳು, ಮಾವೊವಾದಿಗಳು, ಆತಂಕವಾದಿಗಳು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ. ಪ್ರತಿಭಟನಾನಿರತರನ್ನೇ ಆರೋಪಿಗಳನ್ನಾಗಿಸುವ ಷಡ್ಯಂತ್ರವನ್ನು ಕೇಂದ್ರ ಸರ್ಕಾರ ನಡೆಸಿದೆ’ ಎಂದು ರಮಾನಾಥ ರೈ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು