ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಕ್ತ ಮೈಸೂರಿಗೆ ಪಣ ತೊಡಿ : ನಳಿನ್‌

ಜವಾಬ್ದಾರಿ ಹೆಗಲಿಗಿರಲಿ; ತಲೆಗೆ ಬೇಡ–ನೂತನ ಅಧ್ಯಕ್ಷರಿಗೆ ಕಿವಿಮಾತು
Last Updated 18 ಫೆಬ್ರುವರಿ 2020, 9:26 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್ ನಾಯಕನಿಲ್ಲದ ನಾವೆಯಂತಾಗಿದೆ. ಬಿಜೆಪಿ ಆದರ್ಶದಿಂದ ಬೆಳೆಯುತ್ತಿದೆ, ಬೆಳಗುತ್ತಿದೆ. ಕಾಂಗ್ರೆಸ್‌ ಮುಕ್ತ ಮೈಸೂರು ನಿರ್ಮಾಣಕ್ಕೆ ಪಣ ತೊಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಸೋಮವಾರ ಇಲ್ಲಿ ತಿಳಿಸಿದರು.

ನಗರ/ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷ ಹುದ್ದೆ ಅಧಿಕಾರವಲ್ಲ. ಜವಾಬ್ದಾರಿ ಎಂದು ಪರಿಗಣಿಸಿ. ಇದನ್ನು ಹೆಗಲ ಮೇಲಷ್ಟೇ ಇಟ್ಟುಕೊಳ್ಳಿ. ತಲೆಯ ಮೇಲಿಟ್ಟುಕೊಂಡರೆ ಅಹಂಕಾರ ಸುಳಿಯಲಿದೆ’ ಎಂದು ಕಿವಿಮಾತು ಹೇಳಿದರು.

‘ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ರಾಜೀನಾಮೆ ನೀಡಿ ತಿಂಗಳುಗಳು ಗತಿಸಿದರೂ, ಇದೂವರೆಗೂ ಹೊಸ ನೇಮಕ ನಡೆದಿಲ್ಲ. ಇನ್ನೂ ಇಂತಹ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ರಾಷ್ಟ್ರ ಮುಂದುವರೆಸುತ್ತಾರಾ ?’ ಎಂದು ಕಟೀಲ್ ಕಾಂಗ್ರೆಸ್ಸಿಗರ ಕುರಿತು ಕಟಕಿಯಾಡಿದರು.

‘ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬುದನ್ನು ಮೈಗೂಡಿಸಿಕೊಂಡ ಬಿಜೆಪಿ ಎಲ್ಲೆಡೆ ಬಲವಾಗಿದೆ. ಇದರ ಪರಿಣಾಮ ಪರಿವರ್ತನೆಯ ಗಾಳಿ ಬೀಸಿದೆ. ಸೋನಿಯಾ, ರಾಹುಲ್‌ ಗಾಂಧೀಕಿ ಜೈ ಎನ್ನುವವರು ಸಹ ಭಾರತ್ ಮಾತಾಕೀ ಜೈ ಎನ್ನುತ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಅಡ್ಡಿಪಡಿಸಿದವರ ಕೈನಲ್ಲೂ ಇದೀಗ ರಾರಾಜಿಸುತ್ತಿದೆ’ ಎಂದು ವಿಶ್ಲೇಷಿಸಿದರು.

ಮಾಜಿಗಳ ವಿರುದ್ಧ ವಾಗ್ದಾಳಿ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಟೀಲ್, ‘ನಿದ್ರಾಮಣ್ಣ, ಶಾಸಕರ ನಿದ್ದೆ ಮಾಡಿಸಿದ ಮುಖ್ಯಮಂತ್ರಿ’ ಎಂದು ವ್ಯಂಗ್ಯವಾಡಿ ಅವರ‍್ಯಾರು ಎಂದು ಕಾರ್ಯಕರ್ತರನ್ನೇ ಪ್ರಶ್ನಿಸಿದರು.

ನೆರೆದಿದ್ದ ಕಾರ್ಯಕರ್ತರು ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಎನ್ನುತ್ತಿದ್ದಂತೆ, ‘ನಾನು ಹೇಳಿಲ್ಲ. ಹೇಳಿದ್ದು ನೀವೇ. ನಿಮ್ಮ ಮೇಲೆ ಪ್ರಕರಣ ದಾಖಲಿಸಲಿ’ ಎಂದು ಕಟೀಲ್ ಪ್ರತಿಕ್ರಿಯಿಸುತ್ತಿದ್ದರು. ಇದಕ್ಕೆ ಕಾರ್ಯಕರ್ತರೊಬ್ಬರು ‘ಅನಂತಕುಮಾರ ಹೆಗಡೆ ಆಗಿದ್ದರೆ ಈ ರೀತಿ ಹೇಳುತ್ತಿರಲಿಲ್ಲ’ ಎಂದು ಕುಳಿತಲ್ಲೇ ಗೊಣಗುವ ಮೂಲಕ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪ ಎನ್ನುತ್ತಿದ್ದಂತೆ, ‘ರಾಜಾ ಹುಲಿ’ ಎಂಬ ಘೋಷಣೆ ಮೊಳಗಿಸಿದರು.

‘ಯಡಿಯೂರಪ್ಪ ಜನರ ಕಣ್ಣೀರು ಒರೆಸಿದರೆ, ಸಿದ್ದರಾಮಯ್ಯ ‘ನರ ಹಂತಕ’ ಆಡಳಿತದ ಮೂಲಕ ಜನರ ಕಣ್ಣೀರು ಹಾಕಿಸಿದರು. ಇನ್ನೂ ಎಚ್‌.ಡಿ.ಕುಮಾರಸ್ವಾಮಿ ಊರೂರು, ಮನೆ ಮನೆಗೋಗಿ ಕಣ್ಣೀರು ಹಾಕಿದ್ದೇ ಸಾಧನೆ’ ಎಂದು ನಳಿನ್‌ ಜರಿದರು.

ಸಂಸದ ಪ್ರತಾಪಸಿಂಹ, ನಿಕಟಪೂರ್ವ ಅಧ್ಯಕ್ಷರಾದ ಡಾ.ಬಿ.ಎಚ್.ಮಂಜುನಾಥ್, ಎಂ.ಶಿವಣ್ಣ, ನೂತನ ಅಧ್ಯಕ್ಷರಾದ ಎಸ್‌.ಡಿ.ಮಹೇಂದ್ರ, ಶ್ರೀವತ್ಸ ಮಾತನಾಡಿದರು. ಮಾಜಿ ಸಚಿವ ವಿಜಯಶಂಕರ್, ಮಾಜಿ ಶಾಸಕರಾದ ಸಿದ್ದರಾಜು, ತೋಂಟದಾರ್ಯ, ಸಿ.ರಮೇಶ್‌, ಎಚ್‌.ಸಿ.ಬಸವರಾಜು, ಸುನೀತಾ ವೀರಪ್ಪಗೌಡರ, ಶಾಸಕ ಎಲ್.ನಾಗೇಂದ್ರ, ವಿಭಾಗ ಪ್ರಮುಖ್ ಮೈ.ವಿ.ರವಿಶಂಕರ ಮತ್ತಿತರರಿದ್ದರು.

‘ಆಪರೇಷನ್ ಕಮಲ ಮಾಡಲ್ಲ; ಬಿಜೆಪಿ ಬಾಗಿಲು ತೆರೆದಿದೆ’

‘ಆಪರೇಷನ್ ಕಮಲ ಮಾಡೋದಿಲ್ಲ. ಪಕ್ಷದ ಬಾಗಿಲು ತೆರೆದಿದ್ದು, ಮುಂದಿನ ರಾಜಕೀಯ ವಿದ್ಯಮಾನಗಳನ್ನು ಕಾದು ನೋಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಸೋಮವಾರ ಇಲ್ಲಿ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ಲಕ್ಷ್ಮಣ ಸವದಿಗೆ ಮತ ಹಾಕಿದ್ದು, ಮತ್ತಷ್ಟು ಜೆಡಿಎಸ್‌ ಶಾಸಕರು ಬಿಜೆಪಿಗೆ ಬರಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

‘ದೇಶದ ನೆಲದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಿದವರು ಯಾರೇ ಆಗಿದ್ದರೂ ತಪ್ಪೇ. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ನಳಿನ್ ಹೇಳಿದರು. ಬೀದರ್ ಹಾಗೂ ಕಲ್ಲಡ್ಕ ಶಾಲಾ ಪ್ರಕರಣದ ಕುರಿತಂತೆ ಪ್ರಶ್ನಿಸುತ್ತಿದ್ದಂತೆಯೇ ಉತ್ತರಿಸದೆ ಸ್ಥಳದಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT