ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಶಿಫಾರಸು ಇದ್ದರೆ ಸೌಲಭ್ಯ

ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್‌ ಕಾರ್ಯಕರ್ತರು, ರೈತರು
Last Updated 15 ಅಕ್ಟೋಬರ್ 2018, 19:37 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಟಾರ್ಪಾಲ್‌, ಸ್ಪಿಂಕ್ಲರ್ ಸೆಟ್, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಶಾಸಕರ ಶಿಫಾರಸು ಕೇಳುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ರೈತರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲ್‌, ಸ್ಪಿಂಕ್ಲರ್ ಸೆಟ್, ಬಿತ್ತನೆ ಬೀಜ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಆದರೆ, ತಾಲ್ಲೂಕಿನ ರೈತ ಸೇವಾ ಕೇಂದ್ರಗಳಲ್ಲಿ ಪರಿಕರಗಳನ್ನು ಪಡೆಯಲು ಶಾಸಕರ ಸಹಿ ಇರುವ ಚೀಟಿಯನ್ನು ಕಡ್ಡಾಯವಾಗಿ ಲಗತ್ತಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಕೆ.ಮಹದೇವ್‌ ಅವರ ನಿರ್ದೇಶನದಂತೆ ಕೃಷಿ ಇಲಾಖೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಶಿಫಾರಸು ಪತ್ರ ಪಡೆಯಲು ರೈತರು ಶಾಸಕರ ಮನೆಗೆ ಅಲೆದಾಡುವಂತಾಗಿದೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಬಿ.ಎನ್.ಕರೀಗೌಡ ಮಾತನಾಡಿ, ‘ರೈತರು ₹1,500 ಬೆಲೆಯ ಟಾರ್ಪಾಲ್‌ ಪಡೆಯಲು ಶಿಫಾರಸು ಚೀಟಿ ಕೇಳುತ್ತಿರುವುದು ಸಂವಿಧಾನ ವಿರೋಧಿ ನಡೆ. ಕೆ.ಮಹದೇವ್ ಶಾಸಕರಾಗಿ ಆಯ್ಕೆಯಾದ ನಂತರ ಪ್ರತಿಯೊಂದು ಇಲಾಖೆಯಲ್ಲಿ ಮೂಗು ತೂರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ಸವಲತ್ತುಗಳು ನೀಡುತ್ತಿದ್ದಾರೆ. ಬೇರೆ ಪಕ್ಷದ ಕಾರ್ಯಕರ್ತರು ಹಾಗೂ ರೈತರಿಗೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಗಳಾದ ಬಿ.ಜೆ.ಬಸವರಾಜು, ಕೆ.ಹೊಲದಪ್ಪ, ಬಿ.ಎಸ್.ರಾಮಚಂದ್ರ, ಲೋಕೇಶ್, ಎನ್.ಎಸ್.ವಿರೂಪಾಕ್ಷ, ಸೀಗೂರ್‌ ವಿಜಯ್‌ಕುಮಾರ್, ಎಸ್.ಎಸ್.ಶಂಕರಪ್ಪ, ಪಿ.ಮಹದೇವ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷ ಮೋಹನ್ ಕುಮಾರ್, ತಾ.ಪಂ ಸದಸ್ಯ ಶ್ರೀನಿವಾಸ್ ಪುರಸಭೆ ಸದಸ್ಯರಾದ ಅಬ್ದುಲ್ ಅರ್ಷದ್, ರವಿ, ಮುಖಂಡರಾದ ಎ.ಕೆ.ಗೌಡ, ಮುಖಂಡರಾದ ಸುರೇಶ್‌ ಪುಟ್ಟಯ್ಯ ಚಂದ್ರು ಪಾಲ್ಗೊಂಡಿದ್ದರು.

ಮೊದಲು ಬಂದವರಿಗೆ ಆದ್ಯತೆ:

ಕೃಷಿ ಇಲಾಖೆಯಲ್ಲಿ ವಿವಿಧ ಕೃಷಿ ಸಾಮಗ್ರಿಗಳಿಗೆ ರೈತರಿಂದ ಅರ್ಜಿ ಪಡೆಯುತ್ತಿದ್ದು, ಆದ್ಯತೆ ಮೇರೆಗೆ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮೊದಲು ನಾಲ್ಕೈದು ಫಲಾನುಭವಿಗಳಿಗೆ ಶಾಸಕರಿಂದ ಶಿಫಾರಸು ಚೀಟಿ ಪಡೆದು ವಿತರಿಸಲಾಯಿತು. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ ನಂತರ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತಿದೆ ಎಂದು ಸಹಾಯಕ ಕೃಷಿ ಅಧಿಕಾರಿ ದಿವಾಕರ್ ಹೇಳಿದರು.

ಇದನ್ನು ಒಪ್ಪದ ಪ್ರತಿಭಟನಾಕಾರರು, ‘ಶಾಸಕರ ಶಿಫಾರಸು ಚೀಟಿ ಇಲ್ಲದೆ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT