ಸೋಮವಾರ, ಡಿಸೆಂಬರ್ 9, 2019
17 °C
ಅನರ್ಹ ಶಾಸಕರ ಕುರಿತು ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಖಂಡನೆ

ಅಮಿತ್‌ ಶಾ ವಜಾಗೆ ಕಾಂಗ್ರೆಸ್ಸಿಗರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಜಾಗೆ ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ನಗರದ ಗಾಂಧಿಪ್ರತಿಮೆ ಬಳಿ ಪ್ರತಿಭಟಿಸಿದರು.

ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ವಜಾಗೊಳಿಸಿ, ವಜಾಗೊಳಿಸಿ ರಾಜ್ಯ ಬಿಜೆಪಿ ಸರ್ಕಾರ ವಜಾಗೊಳಿಸಿ, ರಾಷ್ಟ್ರಪತಿ ಮಧ್ಯ ಪ್ರವೇಶಿಸಲಿ ಎಂಬ ಘೋಷಣೆಗಳನ್ನು ಮೊಳಗಿಸಿದರು.

ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ, ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು. ಆಪರೇಷನ್ ಕಮಲದ ನೇತೃತ್ವ ವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅನರ್ಹ ಶಾಸಕರ ಕುರಿತು ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೊ ವಿಚಾರವಾಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು, ಕೂಡಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು, ರಾಷ್ಟ್ರಪತಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ ‘ರಾಜ್ಯದಲ್ಲಿ ಪ್ರವಾಹ ಹಾಗೂ ಬರದಿಂದ ಜನ ತತ್ತರಿಸಿದ್ದಾರೆ. ಈವರೆಗೂ ಕೇಂದ್ರ ಅಥವಾ ರಾಜ್ಯದಿಂದಾಗಲಿ ಸೂಕ್ತ ಪರಿಹಾರ ದೊರೆತಿಲ್ಲ. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವ ಮಾರ್ಗ ಅನುಸರಿಸಿತು ಎಂಬುದು ಜನರಿಗೆ ಗೊತ್ತಿದೆ. ಇವರು ಮಾಡಿದ ತಪ್ಪು ಅವರ ಬಾಯಿಂದಲೇ ಹೊರಬಂದಿದೆ. ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಿದೆ’ ಎಂದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರಿಗೌಡ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ನಾರಾಯಣ್, ಮೋಧಾಮಣಿ, ಟಿ.ಬಿ.ಚಿಕ್ಕಣ್ಣ, ಆರ್.ಜಿ.ನರಸಿಂಹ ಅಯ್ಯಂಗಾರ್, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುಶೀಲಾ ಕೇಶವಮೂರ್ತಿ, ಪಾಲಿಕೆ ಸದಸ್ಯರಾದ ಲೋಕೇಶ್, ಶೋಭಾ ಸುನಿಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಲಾಪದಿಂದ ಹೊರಗುಳಿದ ವಕೀಲರು

ನವದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಕಳೆದ ಶನಿವಾರ ವಕೀಲರೊಂದಿಗೆ ಪೊಲೀಸರು ಅನಾಗರಿಕರಂತೆ ವರ್ತಿಸಿದ್ದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಮೈಸೂರಿನ ವಕೀಲರು, ಸೋಮವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿಯುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಪೊಲೀಸರ ವರ್ತನೆ ಖಂಡಿಸಿ, ಆಲ್ ಇಂಡಿಯಾ ಬಾರ್ ಕೌನ್ಸಿಲ್ ದೇಶಾದ್ಯಂತ ಕಲಾಪ ಬಹಿಷ್ಕರಿಸುವಂತೆ ನೀಡಿದ್ದ ಕರೆಯನ್ನು ಬೆಂಬಲಿಸಿ ನಗರದಲ್ಲೂ ಮೈಸೂರು ವಕೀಲರ ಸಂಘದ ವತಿಯಿಂದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಯಿತು.

ಸಂಘದ ಅಧ್ಯಕ್ಷ ಆನಂದ್‌ಕುಮಾರ್ ಮಾತನಾಡಿ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

ಸಂಘದ ಕಾರ್ಯದರ್ಶಿ ಶಿವಣ್ಣ, ಜಂಟಿ ಕಾರ್ಯದರ್ಶಿಗಳಾದ ಮನೋನ್ಮಣಿ, ರುದ್ರಮೂರ್ತಿ, ಬಾರ್ ಕೌನ್ಸಿಲ್ ಸದಸ್ಯ ಚಂದ್ರಮೌಳಿ, ಕಾರ್ಯಕಾರಿ ಮಂಡಳಿಯ ಜಗದೀಶ್, ವಕೀಲರಾದ ಉಮೇಶ್, ಚರಣ್‌ರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)