ಶನಿವಾರ, ಜುಲೈ 31, 2021
26 °C
ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ

ಕಾಂಗ್ರೆಸ್ಸಿಗರ ಬದ್ಧತೆಯೂ ಕ್ಷೀಣ: ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಾಂದರ್ಭಿಕ–ಸ್ವಾರ್ಥ ರಾಜಕಾರಣಕ್ಕೆ ಸೀಮಿತಗೊಳ್ಳುತ್ತಿರುವುದೇ ಈಗಿನ ಕಾಂಗ್ರೆಸ್‌ನ ದೌರ್ಬಲ್ಯವಾಗಿದೆ’ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೋಮವಾರ ಇಲ್ಲಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ದಲ್ಲಾಳಿ, ಮಾರುಕಟ್ಟೆಯ ರಾಜಕಾರಣದಲ್ಲಿ, ಕಾಂಗ್ರೆಸ್ಸಿಗರ ಬದ್ಧತೆಯೂ ಕ್ಷೀಣಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕಿತ್ತು ಅದಕ್ಕೀಗ ನೀಡುತ್ತಿಲ್ಲ. ತನ್ನ ಆಂತರಿಕ ಪ್ರಜಾಪ್ರಭುತ್ವ, ವೈಚಾರಿಕತೆಯಿಂದ ದೂರ ಸರಿಯುತ್ತಿದ್ದು, ಫ್ಯಾಸಿಸ್ಟ್‌ ಕಡೆ ವಾಲುತ್ತಿದೆ. ಕೋಮುವಾದಿ ಮುಂದೆ ಮಂಡಿಯೂರಿದೆ’ ಎಂದು ಬೇಸರದಿಂದ ನುಡಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿಗರ ನಡುವೆ ಸಿದ್ಧಾಂತದಲ್ಲಿ ಮಾತ್ರ ವ್ಯತ್ಯಾಸವಿತ್ತು. ದೇಶದ ಏಕತೆ, ಸ್ವಾತಂತ್ರ್ಯ ಗಳಿಸುವ ವಿಷಯದಲ್ಲಿ ಒಂದಿನಿತು ವ್ಯತ್ಯಾಸವಿರಲಿಲ್ಲ. ಇದೀಗ ಆ ಬದ್ಧತೆ ಉಳಿದಿಲ್ಲ. ದೇಶಕ್ಕಾಗಿ, ಸಮಾಜಕ್ಕಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಆಂತರಿಕವಾಗಿ ದೊಡ್ಡ ಬದಲಾವಣೆ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ’ ಎಂದು ವಿಜಯ್‌ಕುಮಾರ್ ಹೇಳಿದರು.

‘ಗಾಂಧಿ ಅನುಯಾಯಿಯಾಗಿದ್ದ ಡಾ.ಬಾಬು ಜಗಜೀವನರಾಂ ಕೊಡುಗೆ ಅಪಾರ. ಗಂಭೀರ ಪರಿಸ್ಥಿತಿಯಲ್ಲಿ 8 ಪ್ರಮುಖ ಖಾತೆ ನಿಭಾಯಿಸಿದರು. ರಕ್ಷಣಾ ಸಚಿವರಾಗಿದ್ದಾಗ ಪೂರ್ವ–ಪಶ್ಚಿಮ ಬಂಗಾಳದ ಗಲಭೆ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಿನದಾಗಿ ‘ಹಸಿರು ಕ್ರಾಂತಿ’ಯ ಕಾರಣೀಭೂತರು’ ಎಂದು ಬಣ್ಣಿಸಿದರು.

‘ಕಾಂಗ್ರೆಸ್‌ನಲ್ಲಿ ಸೇವಾ ಮನೋಭಾವ ಇಲ್ಲದ ನಾಯಕರೇ ಹೆಚ್ಚಿದ್ದಾರೆ. ಎಲ್ಲರೂ ಒಟ್ಟಾಗಿ ಆಚರಿಸಬೇಕಿರುವ ಬಾಬೂಜಿ ಪುಣ್ಯಸ್ಮರಣೆಗೆ ನಗರ/ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷರೇ ಗೈರಾಗಿರುವುದು ತುಂಬಾ ನೋವಿನ ಸಂಗತಿ’ ಎಂದು ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಬೇಸರ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನ ಪ್ರತಿಯೊಬ್ಬರು ತಮಗೆ ದೊರೆತ ಸ್ಥಾನಕ್ಕೆ ಮರ್ಯಾದೆ ಕೊಡುವುದನ್ನು ಮೊದಲು ಕಲಿಯಬೇಕಿದೆ. ನಡವಳಿಕೆಯೂ ಗೌರವ ತರುವಂತಿರಬೇಕು’ ಎಂದು ಸ್ವಪಕ್ಷೀಯರಿಗೆ ಚಾಟಿ ಬೀಸಿದರು.

ಉಪ ಮೇಯರ್ ಶ್ರೀಧರ್, ಮಾಜಿ ಮೇಯರ್ ನಾರಾಯಣ್ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ಬಾಬೂಜಿ ಜೊತೆ ನೇರ ಸಂಬಂಧ’

‘ಬಾಬು ಜಗಜೀವನರಾಂ ಜೊತೆ ನಮ್ಮ ಕುಟುಂಬ ನೇರ ಸಂಬಂಧ ಹೊಂದಿತ್ತು. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಊಟೋಪಚಾರ ನಡೆಯುತ್ತಿದ್ದುದು ನಮ್ಮ ಮನೆಯಲ್ಲೇ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ನೆನಪು ಮಾಡಿಕೊಂಡರು.

‘ಬಾಬೂಜಿ, ಅಂಬೇಡ್ಕರ್‌ ನಡುವೆ ಹಲವು ಸಾಮ್ಯತೆಗಳಿದ್ದವು. ಗಾಂಧೀಜಿಯ ದೊಡ್ಡ ಶಕ್ತಿಯಾಗಿದ್ದರು. ಅಂಬೇಡ್ಕರ್ ನೆಹರೂ ಸಂಪುಟದಲ್ಲಿ ಸಚಿವರಾಗಲು, ಅವರು ಮೃತಪಟ್ಟಾಗ ದೇಹವನ್ನು ಮುಂಬೈಗೆ ತರಲು ಪ್ರಮುಖ ಕಾರಣಕರ್ತರಾಗಿದ್ದರು’ ಎಂದು ಹೇಳಿದರು.

‘ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿದ ದೇಶಪ್ರೇಮಿ ಬಾಬೂಜಿ. ಬುಲೆಟ್‌ ರೈಲಿನ ಪರಿಕಲ್ಪನೆ ಆಗಲೇ ಅವರಲ್ಲಿತ್ತು. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿಭಾಗ ಆರಂಭಗೊಳ್ಳಲು ಪ್ರಮುಖ ಕಾರಣ ಇವರೇ ಆಗಿದ್ದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು