ಮಂಗಳವಾರ, ಆಗಸ್ಟ್ 3, 2021
26 °C
ವಿಧವೆಯರಿಗೆ, ಅಂಗವಿಕಲರಿಗೆ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

22 ತಿಂಗಳೊಳಗೆ 5 ಲಕ್ಷ ಮನೆಗಳ ನಿರ್ಮಾಣ: ವಸತಿ ಸಚಿವ ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ: ‘ರಾಜ್ಯದಲ್ಲಿ ಮುಂದಿನ 22 ತಿಂಗಳೊಳಗೆ ಬಡವರಿಗೆ 5 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದಲ್ಲಿ ದೇವರಾಜ ಅರಸು ವಸತಿ ನಿಗಮದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧವೆಯರು ಮತ್ತು ಅಂಗವಿಕಲರಿಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನದ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.

‘ರಾಜ್ಯದಲ್ಲಿ ಒಟ್ಟು 65 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 5 ಲಕ್ಷ ಮನೆ ನಿರ್ಮಿಸಲು ಅನುದಾನ ನೀಡುವ ಕುರಿತು ಮುಂದಿನ ಸಂಪುಟ ಸಭೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಒಟ್ಟು 1,611 ಮಂದಿಗೆ ಮಂಜೂರಾತಿ ಪತ್ರ ನೀಡಲಾಗಿದೆ. ಇವರು ಹತ್ತು ದಿನಗಳಲ್ಲಿ ಮನೆ ಕೆಲಸ ಪ್ರಾರಂಭಿಸಿ, ಎರಡು ತಿಂಗಳೊಳಗೆ ಮುಗಿಯಬೇಕಿದೆ. ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದ 3.16 ಲಕ್ಷ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ’ ಎಂದರು.

ಸಂಸದ ಪ್ರತಾಪ ಸಿಂಹ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ಕೆಲಸ ಮಾಡಲಿ ಎಂದು ಸೋಮಣ್ಣ ಶ್ಲಾಘಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಸೋಮಣ್ಣ ಅವರು ಉಸ್ತುವಾರಿ ಸಚಿವರಾಗಿದ್ದಾಗ, ಲಕ್ಷ್ಮಣ ತೀರ್ಥಕ್ಕೆ ಸೇರುತ್ತಿದ್ದ ಕೊಳಚೆ ನೀರನ್ನು ತಡೆಯಲು ಹುಣಸೂರಿನಲ್ಲಿ ₹31 ಕೋಟಿ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿದ್ದರು’ ಎಂದು ಸ್ಮರಿಸಿದರು.

ಶಾಸಕ ಕೆ ಮಹದೇವ್ ಮಾತನಾಡಿ, ‘ನನ್ನ ರಾಜಕೀಯ ಜೀವನದಲ್ಲಿ ಇಂದು ಸ್ಮರಣೀಯ ಕಾರ್ಯಕ್ರಮ. ಸಮಾಜದ ಅಶಕ್ತರು, ಅಬಲೆಯರಿಗೆ ಸವಲತ್ತು ನೀಡುವ ಭಾಗ್ಯ ನನ್ನದಾಗಿದೆ’ ಎಂದರು.

ತಾಲೂಕಿನಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಬಸವ ವಸತಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ 150 ಮನೆಗಳನ್ನು ನೀಡುವಂತೆ ಸಚಿವರಿಗೆ ಮನವಿ ಮಾಡಿದರು.

ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ಪರಶುರಾಮೇಗೌಡ, ಜಿ.ಪಂ. ಸಿಇಒ ಯೋಗೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ರಾಜೇಗೌಡ, ತಾ.ಪಂ ಮಾಜಿ ಸದಸ್ಯರಾದ ಎಸ್. ರಾಮು, ಟಿ. ಈರಯ್ಯ, ರಘುನಾಥ್, ಕೆಡಬ್ಲ್ಯುಎಸ್‌ಎಸ್‌ಬಿ ನಾಮನಿರ್ದೇಶಿತ ಸದಸ್ಯ ಆರ್.ಟಿ.ಸತೀಶ್, ತಹಶೀಲ್ದಾರ್ ಚಂದ್ರಮೌಳಿ, ತಾ.ಪಂ. ಇ.ಒ ಕೃಷ್ಣಕುಮಾರ್, ಪುರಸಭೆಯ ಅಧ್ಯಕ್ಷ ಮಂಜುನಾಥ್ ಸಿಂಗ್, ಟಿಎಪಿಸಿಎಂಎಸ್ ಅಧ್ಯಕ್ಷ ತಿಮ್ಮೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು