ಗುರುವಾರ , ಸೆಪ್ಟೆಂಬರ್ 29, 2022
26 °C

ಜೈನ ಧರ್ಮದ ಕೊಡುಗೆ ಅಪಾರ: ಡಾ.ಸ.ಚಿ.ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಾಡಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಕೇಂದ್ರ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಸೋಮವಾರ ಆರಂಭವಾದ ‘ಜೈನ ಧರ್ಮ: ಸಮಾಜಮುಖಿ ಚಿಂತನೆಗಳು’ ಕುರಿತ ರಾಷ್ಟ್ರಮಟ್ಟದ ವಿಚಾರಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌‘ಸಮಾಜಮುಖಿ ಚಿಂತನೆಗಳು, ಮಾನವೀಯ ಮೌಲ್ಯಗಳು ಮತ್ತು ಜೀವನಕ್ಕೆ ಅಗತ್ಯವಾದ ಅಂಶಗಳು ಬಹಳಷ್ಟು ಇರುವುದರಿಂದ ಜೈನ ಸಾಹಿತ್ಯವನ್ನು ಓದಿಕೊಳ್ಳಬೇಕು. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದೆ’ ಎಂದು ಹೇಳಿದರು.

ವಿಚಾರಸಂಕಿರಣ ಉದ್ಘಾಟಿಸಿದ ಎಸ್‌ಡಿಎಂ ವಿದ್ಯಾಸಂಸ್ಥೆಗಳ ಸಮೂಹದ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ಮಾತನಾಡಿ, ‘ಸಮಾಜಮುಖಿ ಚಿಂತನೆಗಳೇ ಜೈನ ಧರ್ಮದ ಸಾರವಾಗಿವೆ. ಆ ಧರ್ಮವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಬದುಕು, ಉಳಿದವರನ್ನೂ ಬದುಕಲು ಬಿಡು ಎನ್ನುವುದು ಜೈನ ಧರ್ಮದ ಧ್ಯೇಯವಾಗಿದೆ’ ಎಂದು ನುಡಿದರು.

‘ಜೈನರು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿದ್ದಾರೆ. 250ಕ್ಕೂ ಹೆಚ್ಚು ದೇವಾಲಯ ಹಾಗೂ ಬಸದಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 50 ಲಕ್ಷ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆ ಡಾ.ಪದ್ಮಿನಿ ನಾಗರಾಜು ಮಾತನಾಡಿ, ‘ಜಾತಿ-ಜಾತಿಗಳ ನಡುವೆ, ಕೋಮು-ಕೋಮುಗಳ ಮಧ್ಯೆ ವಿಷ ಬೀಜ ಬಿತ್ತುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರೂ ಮನುಷ್ಯರಾಗಿ ಬದುಕು ನಡೆಸಬೇಕು. ನಾವೆಲ್ಲರೂ ಒಂದೇ ಎಂದುಕೊಳ್ಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಯಕುಮಾರ್ ಉಪಾಧ್ಯೆ ದಿಕ್ಸೂಚಿ ಭಾಷಣ ಮಾಡಿದರು. ಹಂಪಿ ವಿ.ವಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಜಿ.ಸಿ.ರಾಜಣ್ಣ, ಜೈನ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ತಾರಿಹಳ್ಳಿ ಹನುಮಂತಪ್ಪ, ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಇದ್ದರು.

ಪ್ರೊ.ಎನ್.ದೇವೇಂದ್ರಕುಮಾರ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು