ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಮರುಳೊ, ಜಾತ್ರೆ ಮರುಳೊ...

2ನೇ ಕೋವಿಡ್ ಕಾಯಿಲೆ ಪ್ರಕರಣ ಪತ್ತೆಯಾದರೂ ಜನ ಸಂಚಾರ ಎಂದಿನಂತೆ
Last Updated 24 ಮಾರ್ಚ್ 2020, 12:26 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಹಬ್ಬುವಿಕೆ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಸೋಮವಾರ ಎಲ್ಲೆಂದರಲ್ಲಿ ಕಾಣಿಸಿಕೊಂಡು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದರು.

ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ತೆರೆದ ವ್ಯಾಪಾರಸ್ಥರನ್ನು ಪೊಲೀಸರು ಬಂದ್ ಮಾಡಿಸುವಷ್ಟರಲ್ಲಿ ಹೈರಣಾದರು. ದೇವರಾಜ ಮಾರುಕಟ್ಟೆಯಲ್ಲಿ ಸಂತೆಯಂತೆ ಜನರು ಗುಂಪು ಗುಂಪಾಗಿ ಸೇರಿ ಖರೀದಿ ಭರಾಟೆಯಲ್ಲಿ ತೊಡಗಿದರು. ಎಲ್ಲೆಡೆ ಜನರು ಬೆಳಿಗ್ಗೆಯಿಂದಲೇ ಬಿರುಸಿನ ಚಟುವಟಿಕೆಯಲ್ಲಿ ತೊಡಿಗಿದ್ದದ್ದು ಸೋಂಕು ಹಬ್ಬುವ ಭೀತಿಯನ್ನು ಇಮ್ಮಡಿಸಿತು.

ಎಂ.ಜಿ.ರಸ್ತೆ ಮಾರುಕಟ್ಟೆಯಲ್ಲೂ ನೂರಾರು ಮಂದಿ ಜನರು ಗುಂಪುಗೂಡಿದ್ದರು. ದೇವರಾಜಅರಸ್ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಜನರಿಂದ ತುಂಬಿ ಹೋಗಿದ್ದವು.

ಪೊಲೀಸರು ಮೈಕ್ ಮೂಲಕ ಜನರು ಗುಂಪುಗೂಡಬಾರದು ಎಂದು ಎಚ್ಚರಿಕೆ ನೀಡುತ್ತಾ ಚದುರಿಸುತ್ತಿದ್ದ ದೃಶ್ಯ ಕಂಡು ಬಂತು.

ದಿನಸಿ, ಹಾಲು, ಹಣ್ಣು, ಹೂ, ತರಕಾರಿ, ಪೆಟ್ರೊಲ್ ಬಂಕ್‌ಗಳಂತಹ ಜೀವನಾವಶ್ಯಕ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ರಸ್ತೆ ಬದಿಯ ವ್ಯಾಪಾರಿಗಳನ್ನೆಲ್ಲ ಪೊಲೀಸರು ತೆರವುಗೊಳಿಸಿದರು. ಇದಕ್ಕೆ ಪ್ರತಿರೋಧ ತೋರಿದವರ ಮೇಲೆ ಪ್ರಕರಣ ದಾಖಲಿಸುವ ಕುರಿತು ಎಚ್ಚರಿಕೆ ನೀಡಿದರು.

ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಬಸ್ ಸಂಚಾರ ಇರುವುದಿಲ್ಲ ಎಂದು ಹೇಳಿದರೂ ಜನರು ಕಾದು ಕುಳಿತ್ತಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಮಹದೇವಮ್ಮ, ‘ಹಬ್ಬಕ್ಕಾಗಿ ಊರಿಗೆ ಹೋಗಬೇಕಿತ್ತು. ಆದರೆ, ಈಗ ನೋಡಿದರೆ ಬಸ್‌ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಹೇಗೆ ಹಬ್ಬಕ್ಕೆ ಹೋಗುವುದು’ ಎಂದು ಪ್ರಶ್ನಿಸಿದರು.

ಹಲವೆಡೆ ಬೇಕರಿ ಮತ್ತು ಹೋಟೆಲ್‌ಗಳು ತೆರೆದಿದ್ದವು. ಇಲ್ಲೆಲ್ಲ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಬಾಗಿಲು ಹಾಕಿಸಿದರು. ಕೆಲವೆಡೆ ಪಾರ್ಸಲ್ ಒಯ್ಯಲು ಅವಕಾಶ ನೀಡಲಾಗಿತ್ತು.

‌ಹೆಚ್ಚಿದ ಮಾಸ್ಕ್ ಖರೀದಿ

ಮತ್ತೊಂದು ಕೋವಿಡ್‌ ಕಾಯಿಲೆ ದೃಢವಾಗುತ್ತಿದ್ದಂತೆ ಸಾರ್ವಜನಿಕರು ಔಷಧ ಅಂಗಡಿಗಳಿಗೆ ತೆರಳಿ ಮಾಸ್ಕ್ ಖರೀದಿಯಲ್ಲಿ ತೊಡಗಿದರು. ಒಮ್ಮಿಂದೊಮ್ಮಲೇ ಉಂಟಾದ ಹೆಚ್ಚಿನ ದಟ್ಟಣೆಯನ್ನು ತಡೆದುಕೊಳ್ಳುವಷ್ಟರಲ್ಲಿ ಹಲವು ಔಷಧ ಅಂಗಡಿಗಳ ಸಿಬ್ಬಂದಿ ಹೈರಣಾದರು. ಕನಿಷ್ಠ ₹ 30ರಿಂದ ಆರಂಭವಾಗುತ್ತಿದ್ದ ಮಾಸ್ಕ್ ದರ ಹಲವೆಡೆ ಹಲವು ಪಟ್ಟು ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT