ಶುಕ್ರವಾರ, ಏಪ್ರಿಲ್ 16, 2021
22 °C
ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ, ಭಣಗುಟ್ಟಿದ ಸಿದ್ಧಲಿಂಗಪುರದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ

ಷಷ್ಠಿ ಸಡಗರಕ್ಕೆ ಕೊರೊನಾ ಗ್ರಹಣ: ಜಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಾಲ್ಲೂಕಿನ ಸಿದ್ಧಲಿಂಗ ಪುರದ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಷಷ್ಠಿ ಆಚರಿಸುವ ಭಕ್ತರ ಕನಸು ಈಡೇರಲಿಲ್ಲ. ಕೊರೊನಾ ಭೀತಿಯಿಂದ ಷಷ್ಠಿ ಜಾತ್ರೆ ರದ್ದುಗೊಂಡಿತ್ತು. ಇದರಿಂದ ಹಿಂದಿನ ವರ್ಷಗಳಂತೆ ಇಲ್ಲಿ ಜನಸಂದಣಿ ಇರಲಿಲ್ಲ.

ಭಣಗುಡುತ್ತಿದ್ದ ದೇಗುಲದ ಸುತ್ತ ಪೊಲೀಸರ ಸರ್ಪಗಾವಲು ಪ್ರಧಾನವಾಗಿ ಕಾಣುತ್ತಿತ್ತು. ಬೆಳಕರಿಯುವುದಕ್ಕೂ ಮುನ್ನವೇ ಚುಮುಚುಮು ಚಳಿಯಲ್ಲಿ ಮಿಂದು ಬಂದ ಭಕ್ತವೃಂದ ನಿರಾಸೆ ಯಿಂದ ವಾಪಸ್ ತೆರಳಿತು.

ಬೆಂಗಳೂರು–ಮೈಸೂರು ರಸ್ತೆಯಲ್ಲಿ ಸಾಗುವ ವಾಹನ ಚಾಲಕರು ತಮ್ಮ ವಾಹನ ನಿಲ್ಲಿಸಿ ಕೈ ಮುಗಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಪೊಲೀಸರು ಧ್ವನಿವರ್ಧಕದಲ್ಲಿ ವಾಹನಗಳನ್ನು ಮುಂದಕ್ಕೆ ಕಳುಹಿಸುವ ಮೂಲಕ ಸಂಚಾರ ದಟ್ಟಣೆಯನ್ನು ನಿರ್ವಹಿಸುತ್ತಿದ್ದರು.

ದೇವಸ್ಥಾನದ ಆವರಣ, ಆಸುಪಾಸಿನ ಗದ್ದೆಗಳಲ್ಲಿನ ಹುತ್ತಕ್ಕೆ ಹಾಲನೆರೆಯುವುದಕ್ಕೂ ನಿಷೇಧ ಹೇರಲಾಗಿತ್ತು. ಎಲ್ಲೆಡೆ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಜಕೀಯ ನಾಯಕರನ್ನು ಹೊರತು ಪಡಿಸಿ ಸಾಮಾನ್ಯ ಜನರಿಗೆ ದೇಗುಲದ ಪ್ರವೇಶವನ್ನು ನಿರಾಕರಿಸಲಾಗಿತ್ತು.

ಮೈಸೂರು ಅರಸರು ನೀಡಿದ್ದ ‘ಬೆಳ್ಳಿಯ ನಾಗಾಭರಣ’ವನ್ನು ತೊಡಿಸಿ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಸುಕಿನ 4 ಗಂಟೆಯಿಂದಲೇ ಆರಂಭಿಸಲಾಗಿತ್ತು. ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಲಾಯಿತು.

ದೇವಸ್ಥಾನಕ್ಕೆಂದು ಬಂದ ಭಕ್ತಾದಿಗಳು ದೇಗುಲದಿಂದ ಸಾಕಷ್ಟು ದೂರದಲ್ಲಿದ್ದ ಹುತ್ತಗಳಿಗೆ ಹಾಲನ್ನು ಎರೆದರು. ಪರಸ್ಪರ ಬಾಗಿನ ನೀಡಿದರು.

ನಗರದಲ್ಲಿ ಬಹುತೇಕ ದೇಗುಲಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ನಾಗರಕಲ್ಲುಗಳಿಗೆ, ಹುತ್ತಗಳಿಗೆ ಭಕ್ತರು ಹಾಲನೆರೆದು ವಿಶೇಷ ಪೂಜೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು