ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಗಳಲ್ಲಿ ಕೋವಿಡ್‌ ಸ್ಥಿತಿ: ಗಿರಿಜನರ ಮನವೊಲಿಕೆಯೇ ಸವಾಲು

ಪರೀಕ್ಷೆಗೆ ಹಿಂಜರಿಕೆ; ಲಸಿಕೆಗೂ ಹಿಂದೇಟು
Last Updated 28 ಮೇ 2021, 21:42 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ವಿವಿಧ ಹಾಡಿಗಳಲ್ಲಿ ಗಿರಿಜನರು ಕೋವಿಡ್‌ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅವರ ಮನವೊಲಿಸುವುದೇ ಸವಾಲಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು, ಎಚ್‌.ಡಿ.ಕೋಟೆ, ಸರಗೂರು, ನಂಜನಗೂಡು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿನ 219 ಹಾಡಿಗಳಲ್ಲಿ 12,560 ಆದಿವಾಸಿ ಕುಟುಂಬಗಳಿದ್ದು, ಅಂದಾಜು 60 ಸಾವಿರ ಜನಸಂಖ್ಯೆ ಇದೆ.

ಹುಣಸೂರು ತಾಲ್ಲೂಕಿನಲ್ಲಿ 54 ಹಾಡಿಗಳಿದ್ದು, ನಾಲ್ಕೂವರೆ ಸಾವಿರ ಕುಟುಂಬಗಳಿವೆ. ಇಲ್ಲಿ ನಾಗಾಪುರ, ಶೆಟ್ಟಹಳ್ಳಿ ಹಾಡಿಗಳಲ್ಲಿರುವ ಕೆಲವರಷ್ಟೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಶಾಸಕ ಎಚ್‌.ಪಿ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಅವರು ಮನವಿ ಮಾಡಿದರೂ ಯಾವುದೇ ಫಲ ಲಭಿಸಿಲ್ಲ.

ಎಚ್‌.ಡಿ.ಕೋಟೆ, ಸರಗೂರು ತಾಲ್ಲೂಕಿನಲ್ಲಿ 118 ಹಾಡಿಗಳಿದ್ದು, ಆರು ಸಾವಿರ ಕುಟುಂಬಗಳಿವೆ. ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಮನೆಯಲ್ಲಿದ್ದುಕೊಂಡೇ ಗುಣಮುಖರಾಗಿದ್ದಾರೆ.

‘ಕೊರೊನಾ ಸೋಂಕಿನ ಲಕ್ಷಣ ಕೆಲವರಲ್ಲಿ ಕಂಡುಬಂದಿದೆ. ಅವರು ಪರೀಕ್ಷೆಗೆ ಒಪ್ಪುತ್ತಿಲ್ಲ‘ ಎಂದು ಎನ್‌.ಬೇಗೂರಿನ ಗಿರಿಜನ ಸಮುದಾಯದ ಮುಖಂಡ ಶೈಲೇಂದ್ರ ಆತಂಕ ವ್ಯಕ್ತಪಡಿಸಿದರು.

48 ಮಂದಿಗೆ ಕೋವಿಡ್: ಚಾಮರಾಜನಗರ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ31,516 ಮಂದಿ ವಾಸಿಸುತ್ತಿದ್ದಾರೆ. ಇವರಲ್ಲಿ 48 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಹೋಂ ಐಸೋಲೇಷನ್‌ನಲ್ಲೇ ಇದ್ದಾರೆ. ಒಬ್ಬರು ಮಾತ್ರ ವೀರನಪುರದ ಕೋವಿಡ್‌ ಕೇರ್‌ಗೆ ದಾಖಲಾಗಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಮೂಕಳ್ಳಿ ಕಾಲೊನಿ ಒಂದರಲ್ಲೇ 31 ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಬಂದವರಲ್ಲಿ ಮೊದಲು ಸೋಂಕು ಕಾಣಿಸಿಕೊಂಡು, ಇತರರಿಗೆ ಹಬ್ಬಿದೆ.ಸದ್ಯ 450 ಮಂದಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ.

ಕೊಡಗಿನಲ್ಲೂ ಬುಡಕಟ್ಟು ಜನರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಆದರೆ, ಅವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಮನ ಒಲಿಸುವ ಯತ್ನದಲ್ಲಿದ್ದಾರೆ.

***

ಹುಣಸೂರು ತಾಲ್ಲೂಕಿನ ಗಿರಿಜನರಲ್ಲಿ ಈವರೆಗೆ ಸೋಂಕು ಕಾಣಿಸಿಲ್ಲ. 56 ಕುಟುಂಬದವರು ಲಸಿಕೆ ಪಡೆದಿದ್ದಾರೆ. ಗಿರಿಜನರನ್ನು ಬೆದರಿಸುವ ಬದಲು ಜಾಗೃತಿ ಮೂಡಿಸಬೇಕು.
-ರಾಜಪ್ಪ, ಹುಣಸೂರಿನ ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಮುಖಂಡ

***

ಗೆಡ್ಡೆಗೆಣಸು ತಿಂದು, ಗಿಡಮೂಲಿಕೆ ಔಷಧಿ ಸೇವಿಸಿ ಬದುಕುವವರು ನಾವು. ಯಾವುದೇ ರೋಗ ಹಾಡಿಗಳತ್ತ ಸುಳಿಯಲ್ಲ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.
-ಬಿ.ಕಾವೇರ,ಎಚ್‌.ಡಿ.ಕೋಟೆಯ ಬಸವನಗಿರಿ ಹಾಡಿ, ಸೋಲಿಗರ ಮುಖಂಡ

***

ನಮ್ಮ ಹಾಡಿಗಳಿಗೆ ಬರಬೇಡಿ ಎನ್ನೋರೆ ಹೆಚ್ಚಿದ್ದಾರೆ. ಸ್ಥಳೀಯ ನಾಯಕರ ಮೂಲಕ ಮನವೊಲಿಸುತ್ತಿದ್ದೇವೆ. ಆಹಾರ ಕಿಟ್‌ ಕೊಡುವಾಗ ಆರೋಗ್ಯ ಶಿಕ್ಷಣವನ್ನೂ ನೀಡಲಾಗುತ್ತಿದೆ.
-ಡಾ.ಟಿ.ರವಿಕುಮಾರ್‌, ತಾಲ್ಲೂಕು ಆರೋಗ್ಯಾಧಿಕಾರಿ, ಎಚ್‌.ಡಿ.ಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT