ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ಔಷಧ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯವಾಗಿಲ್ಲ

ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಚಿವರಾದ ಡಾ.ಕೆ.ಸುಧಾಕರ್‌, ಎಸ್‌.ಟಿ.ಸೋಮಶೇಖರ್‌ ಸಭೆ
Last Updated 22 ಏಪ್ರಿಲ್ 2020, 3:52 IST
ಅಕ್ಷರ ಗಾತ್ರ

ಮೈಸೂರು: ‘ನಂಜನಗೂಡು ಔಷಧ ಕಾರ್ಖಾನೆಯಲ್ಲಿ ಕೋವಿಡ್‌ ಸೋಂಕಿಗೆ ಒಳಗಾದ ಮೊದಲ ವ್ಯಕ್ತಿಗೆ (ಪಿ–52) ಸೋಂಕು ಬಂದಿದ್ದು ಹೇಗೆ ಎಂಬುದರ ಮೂಲ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಸೋಂಕು ದೃಢಪಟ್ಟ ವ್ಯಕ್ತಿಗೆ ವಿದೇಶಿಯರ ಸಂಪರ್ಕವಿತ್ತು ಎಂಬ ಮಾಹಿತಿ ನನಗೆ ಆರಂಭದಲ್ಲಿ ಬಂದಿತ್ತು. ಆದರೆ, ಈ ಬಗ್ಗೆ ಗೃಹ ಸಚಿವರಲ್ಲಿ ಕೇಳಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ಹೇಳಿದರು’ ಎಂದರು.

‘ಈಗಾಗಲೇ ನಂಜನಗೂಡು ತಾಲ್ಲೂಕಿನಲ್ಲೇ 1,478 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರ್ಖಾನೆಗೆ ಸಂಬಂಧಿಸಿದಂತೆ ಎಲ್ಲಾ ಸಮೀಪದ ಸಂಪರ್ಕಿತರು (ಪ್ರೈಮರಿ ಕಾಂಟ್ಯಾಕ್ಟ್‌) ಹಾಗೂ ದ್ವಿತೀಯ ಹಂತದ ಸಂಪರ್ಕಿತರ (ಸೆಕೆಂಡರಿ ಕಾಂಟ್ಯಾಕ್ಟ್‌) ಪರೀಕ್ಷೆ ನಡೆಸಲು ಸೂಚಿಸಿದ್ದೇನೆ. ಈಗಾಗಲೇ ಶೇ 95ರಷ್ಟು ಮುಗಿದಿದೆ’ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತ ಇಬ್ಬರು ಐಸಿಯುನಲ್ಲಿದ್ದಾರೆ. ಒಬ್ಬರು ಹೃದಯ, ಇನ್ನೊಬ್ಬರು ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

‘ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಜನರ ಸಹಕಾರ ಹಾಗೂ ಸ್ಪಂದನೆ ತುಂಬಾ ಮುಖ್ಯ. ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿರುವುದೇ ದೊಡ್ಡ ಸಹಕಾರ’ ಎಂದು ಮನವಿ ಮಾಡಿದರು.

‘ಶಾಶ್ವತವಾಗಿ ಲಾಕ್‌ಡೌನ್‌ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಜೀವ ಉಳಿಯಬಹುದು; ಆದರೆ, ಜೀವನ ಕಷ್ಟವಾಗಲಿದೆ. ಹೀಗಾಗಿ, ಮುಂಜಾಗ್ರತಾ ಕ್ರಮಕೈಗೊಂಡು ವೈರಾಣುವಿನೊಂದಿಗೆ ಬದುಕುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಬಿ.ಹರ್ಷವರ್ಧನ್‌, ನಿರಂಜನ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜು, ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮೇಯರ್‌ ತಸ್ನೀಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ವಿಶೇಷ ಅಧಿಕಾರಿ ಹರ್ಷ ಗುಪ್ತ, ಪಾಲಿಕೆ ಆಯುಕ್ತ ಗುರುದತ್‌ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT