ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ನಿಯಮ ಪಾಲಿಸದ ಕ್ವಾರಂಟೈನ್‌ಗಳು; ಹಳ್ಳಿಗರಲ್ಲಿ ಆತಂಕ

ಬಿಗಿ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್ ತಗುಲಿರುವ ಶಂಕೆಯಿಂದ ತಪಾಸಣೆಗೊಳಪಟ್ಟ ನಂಜನಗೂಡಿನ ಔಷಧ ಕಾರ್ಖಾನೆಯ ಹಲವು ನೌಕರರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ವರದಿ ಬಂದ ಬಳಿಕ ಗ್ರಾಮೀಣ ಪ್ರದೇಶದಲ್ಲಿರುವ ಕೆಲವು ನೌಕರರು ಕ್ವಾರಂಟೈನ್‌ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಕೆಲ ಹಳ್ಳಿಗರ ಆತಂಕಕ್ಕೆ ಕಾರಣವಾಗಿದೆ.

ಮಸಗೆ, ಬ್ಯಾಳಾರಹುಂಡಿ, ಸಿದ್ದಯ್ಯನ ಹುಂಡಿ, ಕಸುವಿನಹಳ್ಳಿ, ನವಿಲೂರು, ಉಸ್ಕೂರು, ಎಚಗುಂಡ್ಲ ಗ್ರಾಮಗಳಲ್ಲಿ ಔಷಧ ಕಾರ್ಖಾನೆಯ ನೌಕರರಿದ್ದು, ಈ ಹಳ್ಳಿಗಳಲ್ಲಿ ಇದುವರೆಗೂ ಯಾರೊಬ್ಬರಿಗೂ ಕೋವಿಡ್–19 ದೃಢಪಟ್ಟಿಲ್ಲ. ತಪಾಸಣೆಗೊಳಪಟ್ಟ ನೌಕರರ ವರದಿಯೂ ನೆಗೆಟಿವ್ ಬಂದಿದೆ.

ವರದಿ ಬರುವ ಮುನ್ನ ಕ್ವಾರಂಟೈನ್ ನಿಯಮಾವಳಿಗಳನ್ನು ಈ ನೌಕರರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ತಾಲ್ಲೂಕು ಆಡಳಿತವೂ ಹದ್ದಿನ ಕಣ್ಗಾವಲಿಟ್ಟಿತ್ತು.

ದಿನದಿಂದ ದಿನಕ್ಕೆ ನಂಜನಗೂಡು ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಕೋವಿಡ್‌–19 ಪೀಡಿತರಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ತಾಲ್ಲೂಕು ಆಡಳಿತ ಸಹ ಸೀಲ್‌ಡೌನ್ ಮೂಲಕ ಬಿಗಿ ಕ್ರಮ ಜರುಗಿಸುತ್ತಿದೆ. ನಮ್ಮೂರುಗಳಲ್ಲಿ ಇದೂವರೆಗೂ ಒಂದು ಪಾಸಿಟಿವ್ ಬಂದಿಲ್ಲ. ಆದರೆ, ನೆಗೆಟಿವ್ ವರದಿ ಬಂದ ಬಳಿಕ ಹೋಂ ಕ್ವಾರಂಟೈನ್‌ನಲ್ಲಿರುವ ಯಾರೊಬ್ಬರೂ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಇದು ನಮ್ಮ ಆತಂಕ ಹೆಚ್ಚಿಸಿದೆ. ಈ ಎಲ್ಲರ ಕ್ವಾರಂಟೈನ್ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲಿಯವರೆಗೂ ಇವರೆಲ್ಲರೂ ಕಡ್ಡಾಯವಾಗಿ ಕ್ವಾರಂಟೈನ್ ನಿಯಮಾವಳಿ ಪಾಲಿಸುವಂತೆ ತಾಲ್ಲೂಕು ಆಡಳಿತ ಬಿಗಿ ಕ್ರಮ ಜರುಗಿಸಬೇಕು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಗ್ರಾಮಸ್ಥರು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

‘ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಭೇಟಿ ನೀಡುವ ವೇಳೆಯಲ್ಲಿ ಇವರೆಲ್ಲರೂ ಮನೆಯಲ್ಲೇ ಇರುತ್ತಾರೆ. ಅವರಿಬ್ಬರೂ ಬೀಟ್ ಮುಗಿಸಿಕೊಂಡು ಹೋದ ಬಳಿಕ ಊರಿನಲ್ಲಿ ಕ್ವಾರಂಟೈನ್‌ನಲ್ಲಿದ್ದವರು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಜಿಲ್ಲಾಡಳಿತವೇ ಸೂಕ್ತ ಕ್ರಮ ಜರುಗಿಸಬೇಕು’ ಎಂಬುದು ಸ್ಥಳೀಯರ ಹಕ್ಕೊತ್ತಾಯ.

ಕ್ವಾರಂಟೈನ್‌ನಲ್ಲಿರುವವರ ಮನೆಯಲ್ಲಿ ಹಲವರಿಗೆ ಪ್ರತ್ಯೇಕ ಶೌಚಾಲಯ, ಸ್ನಾನಗೃಹವಿಲ್ಲ. ಹಲ್ಲರೆ ಗ್ರಾಮದ ಕ್ವಾರಂಟೈನ್‌ಗಳಿಗೆ ನೀಡಿದ ಸೌಲಭ್ಯವನ್ನೇ ನಮ್ಮೂರಿನವರಿಗೂ ನೀಡಿ ಎಂದು ಬೇಡಿಕೊಂಡರೂ, ಸ್ಪಂದನೆ ಶೂನ್ಯವಾಗಿದೆ ಎಂಬ ಅಸಮಾಧಾನ ಗ್ರಾಮಸ್ಥರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT