ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮಹಾನಗರ ಪಾಲಿಕೆ: ಶಿಲ್ಪಾ ನಾಗ್‌ಗೆ ಬೆಂಬಲ; ಡಿಸಿ ವರ್ಗಾವಣೆಗೆ ಪಟ್ಟು

ವಿವಿಧ ಸಂಘಟನೆಗಳಿಂದ ಪ್ರತಿಭಟನೆ
Last Updated 4 ಜೂನ್ 2021, 13:20 IST
ಅಕ್ಷರ ಗಾತ್ರ

ಮೈಸೂರು: ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಅವರ ರಾಜೀನಾಮೆ ಅಂಗೀಕರಿಸಬಾರದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ನೌಕರರು ಮತ್ತು ಪೌರ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಎಲ್ಲರೂ ಏಕಕಾಲದಲ್ಲಿ ಧರಣಿ ಕುಳಿತ ಕಾರಣ ಪಾಲಿಕೆ ಆವರಣ ಪ್ರತಿಭಟನಾ ತಾಣವಾಗಿ ಬದಲಾಯಿತು. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

‘ನನ್ನ ಬೆಂಬಲ ಶಿಲ್ಪಾ ನಾಗ್‌ ಅವರಿಗೆ, ರೋಹಿಣಿ ಸಿಂಧೂರಿ ವರ್ಗಾವಣೆಯಾಗಲಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ‘ತೊಲಗಲಿ ತೊಲಗಲಿ ಜಿಲ್ಲಾಧಿಕಾರಿ ತೊಲಗಲಿ, ಉಳಿಸಿ ಉಳಿಸಿ ಮೈಸೂರು ಉಳಿಸಿ’ ಎಂದು ಘೋಷಣೆ ಕೂಗಿದರು. ‘ಐ ಸ್ಟ್ಯಾಂಡ್‌ ವಿದ್‌ ಅವರ್‌ ಕಮಿಷನರ್‌’ ಎಂದು ಬರೆದಿದ್ದ ಬ್ಯಾನರ್‌ ಕಟ್ಟಲಾಗಿತ್ತು.

ಪಾಲಿಕೆ ಆಯುಕ್ತರ ಹುದ್ದೆ ಹಾಗೂ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಶಿಲ್ಪಾ ನಾಗ್‌ ಗುರುವಾರ ಪ್ರಕಟಿಸಿದ್ದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿರಂತರ ಕಿರುಕುಳದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪಾಲಿಕೆ ಸದಸ್ಯರು ಹಂಗಾಮಿ ಮೇಯರ್‌ ಅನ್ವರ್‌ ಬೇಗ್‌ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.

ಶುಕ್ರವಾರ ಬೆಳಿಗ್ಗೆ ಪಾಲಿಕೆ ಆವರಣದಲ್ಲಿ ನೆರೆದ ಸದಸ್ಯರು ಅಯುಕ್ತರಿಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ಅವರನ್ನು ಮೈಸೂರು ಜಿಲ್ಲೆಯಿಂದ ವರ್ಗಾವಣೆ ಮಾಡಿ ಶಿಲ್ಪಾ ನಾಗ್ ಅವರ ರಾಜೀನಾಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಅನ್ವರ್‌ ಬೇಗ್‌, ‘ಸರ್ವ ಪಕ್ಷಗಳ ಸಭೆ ಕರೆದು ಈ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೆವು. ಎಲ್ಲ ಸದಸ್ಯರು ಕೂಡಾ ಆಯುಕ್ತರ ಪರ ಇದ್ದೇವೆ. ಯಾವುದೇ ಕಾರಣಕ್ಕೂ ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಬಾರದು’ ಎಂದರು.

ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಮಧ್ಯಾಹ್ನ 2.30ರ ವೇಳೆಗೆ ಪಾಲಿಕೆ ಆವರಣಕ್ಕೆ ಬಂದು ಪ್ರತಿಭಟನಾನಿರತ ಸದಸ್ಯರ ಜತೆ ಮಾತುಕತೆ ನಡೆಸಿದರು.

‘ಎರಡು ದಿನಗಳ ಕಾಲಾವಕಾಶ ನೀಡಿ. ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಧರಣಿ ಕೈಬಿಡಿ’ ಎಂದು ಮನವಿ ಮಾಡಿದರು. ಸಚಿವರ ಮನವಿಯಂತೆ ಸದಸ್ಯರು ಪ್ರತಿಭಟನೆ ಕೊನೆಗೊಳಿಸಿದರು.

‘ಸೋಮವಾರದ ವೇಳೆಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಅವರ ಮನವಿಯಂತೆ ಪ್ರತಿಭಟನೆ ವಾಪಸ್‌ ಪಡೆದಿದ್ದೇವೆ. ಸೋಮವಾರದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುವೆವು’ ಎಂದು ಅಯೂಬ್‌ ಖಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT